ಬೆಂಗಳೂರು, ಅ.19 www.bengaluruwire.com : ಬೇಲಿಯೇ ಎದ್ದು ಹೊಲ ಮೇಯ್ದರೆ ಆ ಭೂಮಿಗೆ ರಕ್ಷಣೆ ಒದಗಿಸೋರು ಯಾರು? ಇದೇ ಪರಿಸ್ಥಿತಿ ರಾಜ್ಯ ಸರ್ಕಾರದ ಕಾನೂನು ಜಾರಿಯಲ್ಲಿ ಬಂದೊದಗಿದೆ. ನಿಯಮಬಾಹಿರವಾಗಿ ಬಿಬಿಎಂಪಿಯಲ್ಲಿ 11 ವರ್ಷ 10 ತಿಂಗಳಿನಿಂದ ಕೆಲಸ ಮಾಡುತ್ತಿರುವ ಮಹದೇವಪುರ ವಲಯದ ಲೆಕ್ಕಾಧೀಕ್ಷಕರಾಗಿರುವ ವಿ.ಸೌಮ್ಯ ಅವರು ಇದೇ ಹುದ್ದೆಯಲ್ಲಿ ಮುಂದುವರೆಯಲು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಒಪ್ಪಿಗೆ ನೀಡಿರುವ ಸಂಗತಿ ಇದೀಗ ಬಯಲಾಗಿದೆ.
ಮೂಲತಃ ಪೌರಾಡಳಿತ ಇಲಾಖೆಯ ಅಧಿಕಾರಿಯಾಗಿರುವ ವಿ.ಸೌಮ್ಯ 2012ರ ಸೆಪ್ಟೆಂಬರ್ 08ರಂದು ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶದಲ್ಲಿ ಅಕೌಂಟ್ ಸೂಪರಿಟೆಂಡೆಂಟ್ ಆಗಿದ್ದವರು, ಬಿಬಿಎಂಪಿಯ ಅಕೌಂಟ್ ಸೂಪರಿಟೆಂಡೆಂಟ್ ಹುದ್ದೆಗೆಂದು ಎರಡು ವರ್ಷಗಳ ಅವಧಿಗೆ ನಿಯೋಜನೆ ಮೇಲೆ ನೇಮಕವಾಗಿದ್ದರು. ಆನಂತರ ಪುನ: 10-09-2014 ರಂದು ಹಾಗೂ ಪುನಃ 09-11-2016ರಂದು ನಗರಾಭಿವೃದ್ಧಿ ಇಲಾಖೆಯಿಂದ ಮುಂದುವರೆಸಲಾಯಿತು. ನಾಮಕಾವಸ್ಥೆಗೆ ಮುಳಬಾಗಿಲು ನಗರಸಭೆಗೆ ದಾಖಲೆಯಲ್ಲಷ್ಟೇ ವರ್ಗಾಯಿಸಿದ್ದರೂ ಪುನಃ 2017ರ ಜುಲೈ 20ರಂದು ವರ್ಗಾವಣೆ ಆದೇಶವನ್ನೇ ಮಾರ್ಪಡಿಸಿ ಅದೇ ಬಿಬಿಎಂಪಿಯ ಮಹದೇವಪುರ ವಲಯದಲ್ಲಿಯೇ ಕಂಟಿನ್ಯೂ ಮಾಡಿತು ನಗರಾಭಿವೃದ್ಧಿ ಇಲಾಖೆ.
ಇದು ಇಷ್ಟಕ್ಕೇ ಮುಗಿಯಲಿಲ್ಲ ಇವರ ಭಗಿರಥ ಯಾತ್ರೆ. ಸೌಮ್ಯ ಅವರ ಈ ಹುದ್ದೆಯಲ್ಲಿ ಮುಂದುವರೆಯಲು ಆದೇಶವಿಲ್ಲದ್ದರಿಂದ 2021ರ ಜನವರಿ 15ರಂದು ಮಾತೃ ಇಲಾಖೆಗೆ ಹಿಂದಿರುಗಿಸುವ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ 2021ರ ಫೆಬ್ರವರಿ 17ರಂದು ಕೂಡಲೇ ಆ ನೋಟಿಫಿಕೇಶನ್ ಹಿಂಪಡೆದು ಅದೇ ಹುದ್ದೆಯಲ್ಲಿ ಮತ್ತೆ ಮುಂದುವರೆದರು. ಹೀಗೆ ಇದ್ರೆ ಕಷ್ಟ ಅಂತ ಮುಂದಿನ ಅವಧಿಗೆ ನೇರವಾಗಿ ಆಗಿನ ಸಿಎಂ ನಿಂದ 11-05-2022ರಲ್ಲಿ ಅದಾದ ಬಳಿಕ 2023ರ ಆಗಸ್ಟ್ 24ರಂದು ಉಪಮುಖ್ಯಮಂತ್ರಿಗಳ ಶ್ರೀರಕ್ಷೆ ಪಡೆದು ಮತ್ತದೇ ಹುದ್ದೆಯಲ್ಲಿ ಜುಮ್ ಅಂತಾ ಕೆಲಸ ಮಾಡುತ್ತಿದ್ದಾರೆ. ಹೀಗೆ ಹೀಗೆ ನೇಮಕವಾಗಿ ಬಂದವರು 11 ವರ್ಷ 10 ತಿಂಗಳಾದರೂ, ಈತನಕ ಬಿಬಿಎಂಪಿಯನ್ನು ಬಿಟ್ಟು ಹೋಗಿಲ್ಲ. ಈ ಬಗ್ಗೆ ವಿ.ಸೌಮ್ಯ ಅವರ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ವೈರ್ ಪ್ರಯತ್ನಿಸಿದ್ದರೂ, ಅವರು ಪ್ರತಿಕ್ರಿಯೆ ನೀಡಿಲ್ಲ.
ಯಾವೆಲ್ಲಾ ಕಾನೂನು- ನಿಯಮಾವಳಿಗಳ ಉಲ್ಲಂಘನೆಯಾಗಿದೆ? :
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, ಬಿಬಿಎಂಪಿ ಅಧಿನಿಯಮ 202ರ ಅನ್ವಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ 07-01-2022ರ ಆದೇಶ ಸಂಖ್ಯೆ : ನಅಇ 142 ಎಂಎನ್ ಯು 2021 ರ ಹೊಸ ನಿಯೋಜನಾ ನೀತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ 14-10-2015ರ ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 25 ಸೇನೌವ 2015ರ ಸರ್ಕಾರಿ ಆದೇಶ ಹಾಗೂ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 12-09-2023ರಂದು ಹೊರಡಿಸಿದ ಸುತ್ತೋಲೆ ಸಂಖ್ಯೆ : ಸಿಆಸುಇ 14 ಸೇನೌವ 2023 ಮತ್ತು 16-03-2020 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮಗಳು 2020 ರ ಯುಡಿಡಿ 90 ಎಂಎನ್ ಯು 2014 (ಪಿ-1) ರಂದು ಹೊರಡಿಸಿದ ಕಾನೂನುಗಳನ್ನು ಉಲ್ಲಂಘಿಸಿ ವಿ.ಸೌಮ್ಯ ಅವರು ನಿಯೋಜನಾ ನೀತಿ, ವರ್ಗಾವಣೆ ನಿಯಮಗಳು, ಪಾಲಿಕೆ ಅಧಿಕಾರಿ ಮತ್ತು ನೌಕರರ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ ನಿಯಮಬಾಹಿರವಾಗಿ ಪಾಲಿಕೆಯ ಸೇವೆಯಲ್ಲಿ ಮುಂದುವರೆದಿದ್ದಾರೆ. ಇದಕ್ಕೆ ಆಕೆಯ ಮಾತೃ ಇಲಾಖೆಯಾದ ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ಬಿಬಿಎಂಪಿಯು ಸಾಥ್ ನೀಡುತ್ತಿರುವುದು ನಿಜಕ್ಕೂ ಪ್ರಶ್ನಾರ್ಹವಾಗಿದೆ. ಈ ಕುರಿತ ಆರ್ ಟಿಐ ದಾಖಲೆಗಳು ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಪಾಲಿಕೆ “ಖಜಾನೆ” ವಲಯದಲ್ಲೇ 7 ವರ್ಷದಿಂದ ಠಿಕಾಣಿ :
23-08-2016ರಿಂದ ಈತನಕ ಅಂದರೆ ಸುಮಾರು 7 ವರ್ಷಗಳಿಂದಲೂ ಹೆಚ್ಚು ಕಾಲಾವಧಿಯಿಂದ ಬಿಬಿಎಂಪಿಗೆ ಅತಿಹೆಚ್ಚು ಆದಾಯ ಮೂಲವಿರುವ ಮಹದೇವಪುರ ವಲಯದಲ್ಲೇ ಜಾಂಡಾ ಊರಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಾಲಿಕೆಯ ಆಯಕಟ್ಟಿನ ಹುದ್ದೆಯಲ್ಲಿ ನಿಯೋಜನೆ ಮೇಲೆ ಬಂದವರು ಕೇವಲ ಎರಡು- ಮೂರು ವರ್ಷಗಳ ಕಾಲ ಮುಂದುವರೆಯಲು ಪ್ರಭಾವಿಗಳ ಕೈಬೆಚ್ಚಗೆ ಮಾಡಿದರೂ ಮುಂದುವರೆಯುವುದು ಕಷ್ಟವಾಗಿರುವಾಗ ಬರೋಬ್ಬರಿ 11 ವರ್ಷ 10 ತಿಂಗಳಿನಿಂದ ಪಾಲಿಕೆಯ ಲೆಕ್ಕಾಧೀಕ್ಷಕಿ ಹುದ್ದೆಯಲ್ಲಿ ವಿ.ಸೌಮ್ಯ ನಿಯೋಜನೆ ಮೇಲೆ ಮುಂದುವರೆದಿದ್ದಾರೆಂದರೆ ಅವರು ಎಷ್ಟು ಪ್ರಭಾವಿ, ಸರ್ಕಾರದ ಮಟ್ಟದಲ್ಲಿ ಎಷ್ಟೆಲ್ಲಾ ಲಾಬಿ ಮಾಡಿದ್ದಾರೆಂದು ಇದರಿಂದ ತಿಳಿದು ಬರುತ್ತದೆ.
ನಿಯಮಬಾಹಿರವಾಗಿ ಮುಂದುವರೆಯಲು ಸಿಎಂ- ಡಿಸಿಎಂ ಗಳ ಅನುಮೋದನೆ ಯಾಕೆ? :
ರಾಜ್ಯ ಸರ್ಕಾರದ ನಾಗರೀಕ ಸೇವ ನಿಯಮಾವಳಿಗಳ ನಿಯಮ50(3) ಹಾಗೂ 419 (ಬಿ) ಪ್ರಕಾರ ಎಲ್ಲಾ ಅಧಿಕಾರಿ ಮತ್ತು ನೌಕರರ ನಿಯೋಜನಾ ಅವಧಿ ಐದು ವರ್ಷಗಳಿಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ವಿ.ಸೌಮ್ಯ ಅವರು ಕಳೆದ 11 ವರ್ಷ 10 ತಿಂಗಳಿನಿಂದ ಪಾಲಿಕೆಯಲ್ಲಿ ಹೇಗೆ ಮುಂದುವರೆದರೂ ಎಂಬುದು ನಿಜಕ್ಕೂ ಸೋಜಿಗ ಎನಿಸುತ್ತದೆ. ಹೀಗಿದ್ದರೂ 2023ರ ಆಗಸ್ಟ್ 24ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅನುಮೋದನೆ ಮೇರೆಗೆ 17-02-2023ರಿಂದ ಅನ್ವಯವಾಗುವಂತೆ ಮತ್ತೊಂದು ವರ್ಷ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯ ತನಕ ಎಂದು ಈಕೆಯನ್ನು ಮತ್ತೊಂದು ಅವಧಿಗೆ ಮುಂದುವರೆಸಲಾಗಿದೆ.
ಈ ಹಿಂದೆ 2022ರ ಮೇ 11ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಆರ್.ಮಂಜುನಾಥ್ ಆಗಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರ ಅನುಮೋದನೆ ಪಡೆದು ನಿಯಮಬಾಹಿರವಾಗಿ 17-02-2022ರಿಂದ ಅನ್ವಯವಾಗುವಂತೆ ಮತ್ತೊಂದು ವರ್ಷದ ಅವಧಿಗೆ ಇದೇ ಮಹದೇವಪುರ ಜೋನ್ ನಲ್ಲಿ ಲೆಕ್ಕಾಧೀಕ್ಷಕರಾಗಿ ಸೌಮ್ಯ ಅವರನ್ನು ಮುಂದುವರೆಸಲಾಗಿತ್ತು.
ಸರ್ಕಾರದ ಅಧಿಸೂಚನೆ- ಸುತ್ತೋಲೆಗಳು ಹೇಳೋದೇನು?:
ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶ ಸಂಖ್ಯೆ : ನಅಇ 142 ಎಂಎನ್ ಯು 2021 ಬೆಂಗಳೂರು, ದಿನಾಂಕ : 07-01-2022 ರ ಬಿಬಿಎಂಪಿಗೆ ಎರವಲು ಸೇವೆಯ ಮೇಲೆ ಪಾಲಿಕೆ ವಿವಿಧ ವೃಂದದ ಹುದ್ದೆಗಳಿಗೆ ನಿಯೋಜಿಸುವ ಹೊಸ ನಿಯೋಜನಾ ನೀತಿ/ಮಾರ್ಗಸೂಚಿ ಅನ್ವಯ ಸೂಚಿಸಲಾಗಿರುವಂತೆ ಎರಡನೇ ಅಂಶದಲ್ಲಿ, “ನಿರ್ದಿಷ್ಟ ವೃಂದಗಳಿಗೆ ನಿರ್ದಿಷ್ಟ ಇಲಾಖೆಗಳಿಂದ ಮಾತ್ರ ಎರವಲು ಸೇವೆಯ ಮೇಲೆ ನೇಮಕಾತಿ ಮಾಡತಕ್ಕದ್ದು. ನಿರ್ದಿಷ್ಟ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಅಧಿಕಾರಿಗಳು ಲಭ್ಯರಿಲ್ಲದಿದ್ದಲ್ಲಿ ಸಮುಚಿತ ಪ್ರಾಧಿಕಾರವು ಬಿಬಿಎಂಪಿ ವೃಂದದ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಪ್ರಭಾರ ವಹಿಸಿ, ಸದರಿ ಹುದ್ದೆಗಳನ್ನು ನಿರ್ವಹಿಸತಕ್ಕದ್ದು. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ಕಲ್ಪಿಸದ ಇತರೇ ಇಲಾಖೆಯ ಅಧಿಕಾರಿಗಳನ್ನು ಆ ಹುದ್ದೆಗೆ ನಿಯೋಜಿಸುವಂತಿಲ್ಲ.” ಎಂದು ತಿಳಿಸಿದೆ.
ಅದೇ ರೀತಿ ಮಾರ್ಗಸೂಚಿ ಐದು ಹಾಗೂ ಆರನೇ ಅಂಶದಲ್ಲಿ, “ಸರ್ಕಾರದ ಆದೇಶ ಸಂಖ್ಯೆ : ಡಿಪಿಆರ್ 16 ಎಸ್ ಡಿಇ 83, ದಿನಾಂಕ : 16-07-1983 ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 50(3) ಹಾಗೂ 419 (ಬಿ) ಪ್ರಕಾರ ಎಲ್ಲಾ ಅಧಿಕಾರಿ/ನೌಕರರ ನಿಯೋಜನಾ ಅವಧಿ ಗರಿಷ್ಠ ಐದು ವರ್ಷಗಳಿಗೆ (3 ವರ್ಷಗಳು + 2 ವರ್ಷಗಳು) ಮಾತ್ರ ಕಡ್ಡಾಯವಾಗಿ ಮಿತಿಗೊಳಿಸಿದೆ.”
“ನಿಗದಿತ ನಿಯೋಜನಾ ಅವಧಿ ಮುಗಿದ ನಂತರ, ಅಂತಹ ಅಧಿಕಾರಿ/ನೌಕರರನ್ನು ಬಿಬಿಎಂಪಿಯ ಪ್ರಭಾರದಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ಹಿಂತಿರುಗಿಸತಕ್ಕದ್ದು. ನಿಗಧಿತ ನಿಯೋಜನಾ ಅವಧಿಯು ಮುಗಿದ ನಂತರ ಅಧಿಕಾರಿ/ನೌಕರರಿಗೆ ಬಿಬಿಎಂಪಿಯಿಂದ ವೇತನ ನೀಡತಕ್ಕದ್ದಲ್ಲ. ಒಂದು ವೇಳೆ ನಿಗಧಿತ ನಿಯೋಜನಾ ಅವಧಿ ಮುಗಿದ ನಂತರ ಅಧಿಕಾರಿ/ನೌಕರರಿಗೆ ವೇತನ ನೀಡಿದ್ದು ಅಥವಾ ಆನಂತರದಲ್ಲಿ ಸರ್ಕಾರದ ನಿರ್ದಿಷ್ಟ ಅನುಮತಿ ಇಲ್ಲದೇ ಕಡ್ಡಾಯ ನಿರೀಕ್ಷಣಾ ಅವಧಿಯೆಂದು ಪರಿಗಣಿಸಿ ವೇತನ ನೀಡಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಸಂಬಳ ಸೆಳೆಯುವ ಬಟವಾಡೆ ಅಧಿಕಾರಿಯಿಂದ ಸದರಿ ಮೊತ್ತವನ್ನು ವಸೂಲು ಮಾಡತಕ್ಕದ್ದು.” ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದರೂ ಅವರನ್ನು ಮಾತೃ ಇಲಾಖೆಗೆ ಕಳುಹಿಸಲು ಬಿಬಿಎಂಪಿಯ ಆಡಳಿತ ವಿಭಾಗ ಸಂಪೂರ್ಣ ವಿಫಲವಾಗಿದೆ.
ಆದರೆ ಪ್ರಸ್ತುತ ಮಹದೇವಪುರ ವಲಯದ ಹಣಕಾಸು ಉಪನಿಯಂತ್ರಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವಿ.ಸೌಮ್ಯ ತಮ್ಮ ಮಾತೃ ಇಲಾಖೆಯಾದ ಪೌರಾಡಳಿತ ಇಲಾಖೆಯಿಂದ 08-09-2012ರಂದು ಬಿಬಿಎಂಪಿಯ ಸೇವೆಗೆ ಬಂದು, ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ನಿಯೋಜನಾ ಅವಧಿ 5 ವರ್ಷಗಳು ಪೂರ್ಣಗೊಂಡರೂ, ಈತನಕ 11 ವರ್ಷಗಳು 10 ತಿಂಗಳಾಗಿದ್ದರೂ, ಪಾಲಿಕೆ ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ. ಈ ಅಧಿಕಾರಿಯು ಬಿಬಿಎಂಪಿಯಲ್ಲಿ ಸೂಕ್ತ ರೀತಿ ಕಾರ್ಯನಿರ್ವಹಿಸದ ಬಗ್ಗೆಯೂ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಕೇಳಿಬಂದಿವೆ. ಆದರೆ ಪಾಲಿಕೆಯ ಹಿರಿಯ ಅಧಿಕಾರಿಗಳು ಇದೆಲ್ಲದಕ್ಕೆ ತಲೆ ಕೆಡೆಸಿಕೊಂಡಿಲ್ಲದಿರುವುದು ಇಲ್ಲಿನ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಂತಿದೆ.
ಪೌರಾಡಳಿತ ಇಲಾಖೆಯಿಂದ ಪಾಲಿಕೆಗೆ ನಿಯೋಜನೆ ಮೇಲೆ ಬಂದು ಅಂದಿನಿಂದಲೂ ಬಿಬಿಎಂಪಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಪಾಲಿಕೆಗೆ ಇವರಿಂದ ಗಣನೀಯವಾದ ಸೇವೆ ಸಲ್ಲಿಕೆಯಾಗಿಲ್ಲ. ಇವರ ಸೇವೆಯಿಲ್ಲದೆ ಬಿಬಿಎಂಪಿಯಲ್ಲಿ ಯಾವುದೇ ಕೆಲಸ ಮುಂದುವರೆಸಲಾಗದು ಎಂಬಂತಹ ವಿಶೇಷ ಕೌಶಲ್ಯ, ಕಾರ್ಯತತ್ಪರತೆ ಈ ಅಧಿಕಾರಿಯಲ್ಲಿ ಕಂಡುಬಂದಿಲ್ಲ. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 50 (3) ಹಾಗೂ 419 (ಬಿ) ಪ್ರಕಾರ ವಿಶೇಷ ಆದೇಶಗಳಿರದ ಹೊರತು ಸಾಮಾನ್ಯವಾಗಿ ನಿಯೋಜನೆಯ ಅಧಿಯನ್ನು ಐದು ವರ್ಷಗಳಿಗಿಂತ ಹೆಚ್ಚಿಗೆ ವಿಸ್ತರಿಸದಿರುವಂತೆ ಸೂಚಿಸಲಾಗಿದೆ.
ರಾಜ್ಯ ಲೆಕ್ಕಪತ್ರ ಇಲಾಖೆ ಬದಲು ಪೌರಾಡಳಿತ ಅಧಿಕಾರಿ ಕಾರ್ಯನಿರ್ವಹಣೆ!! :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮಗಳು 2020 ರ ಯುಡಿಡಿ 90 ಎಂಎನ್ ಯು 2014 (ಪಿ-1) ದಿನಾಂಕ 16-03-2020 (ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆ ಭಾಗ-IVA ದಿನಾಂಕ : 17-03-2020) ರ ಸರ್ಕಾರದ ಅಧಿಸೂಚನೆ ಶೆಡ್ಯೂಲ್ -1 (See Rule 2,7, 10) ರ ಪ್ರಕಾರ ಬಿಬಿಎಂಪಿಯಲ್ಲಿನ ಹಣಕಾಸು ವಿಭಾಗದ ಲೆಕ್ಕಾಧೀಕ್ಷಕರ ಹುದ್ದೆಗೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ನಿಯೋಜನೆ ಮೇಲೆ ಕಳುಹಿಸಬಹುದು ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದರೂ ಪೌರಾಡಳಿತ ಇಲಾಖೆಯಿಂದ ಬಂದಿರುವ ವಿ.ಸೌಮ್ಯ ಈವರೆಗೂ ಬಿಬಿಎಂಪಿಯಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೂಲಿಂಗ್ ಪಿರಿಯಡ್ ಅವಧಿಗೂ ಎಳ್ಳು ನೀರು :
ಇನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಸಂಖ್ಯೆ : ಸಿಆಸುಇ 14 ಸೇನೌವ 2023 ದಿನಾಂಕ : 12-09-2023 ರಂತೆ ನಿಯೋಜನೆಗೆ ಸಂಬಂಧಿಸಿದಂತೆ “ಹಿಂದಿನ ನಿಯೋಜನೆ ನಂತರ ಮಾತೃ ಇಲಾಖೆಯಲ್ಲಿ ಎರಡು ವರ್ಷಗಳ ಚಾತುರ್ಮಾಸ್ಯ ಅವಧಿಯನ್ನು (Cooling-off Period) ಮುಗಿಸಬೇಕಾಗುತ್ತದೆ” ಎಂಬ ಬಗ್ಗೆಯೂ ಸಹ ತಿಳಿಸಲಾಗಿದೆ.” ಇದಲ್ಲದೆ ಈ ಕೆಳಕಂಡ ಮುಂದುವರೆದ ಸೂಚನೆಗಳನ್ನು ನೀಡಲಾಗಿದೆ :
“ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬೇರೆ ಇಲಾಖೆಯಿಂದ ನಿಯೋಜನೆಗೆ ಅವಕಾಶ ಕಲ್ಪಿಸದೇ ಇರುವ ಹುದ್ದೆಗಳಿಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿದೆ.” ಎಂದು ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಬಹುತೇಕ ಇವರು ಪಾಲಿಕೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ, ಮಾತೃ ಇಲಾಖೆಯಲ್ಲಿ ಎರಡು ವರ್ಷಗಳ ಚಾತುರ್ಮಾಸ್ಯ ಅವಧಿಯನ್ನು ಎಂದೂ ಪೂರೈಸಿಯೇ ಇಲ್ಲದಿರುವುದು ತಿಳಿದುಬಂದಿದೆ. ಇಷ್ಟೆಲ್ಲಾ ಸೂಚನೆಗಳು, ನಿಯಮಗಳಿದ್ದಾಗ್ಯೂ ಪೌರಾಡಳಿತ ಇಲಾಖೆ ಎಂಬ ಮಾತೃ ಇಲಾಖೆಯಿಂದ ಬಿಬಿಎಂಪಿಗೆ 11 ವರ್ಷ ಹೆಚ್ಚು ಅವಧಿಯಿಂದ ಪಾಲಿಕೆಯಲ್ಲೇ ಕಾನೂನು ಗಾಳಿಗೆ ತೂರಿ ಮುಂದುವರೆದಿದ್ದಾರೆ. ಒಟ್ಟಾರೆ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಬಿಬಿಎಂಪಿಯಿಂದ ಬಿಡುಗಡೆ ಮಾಡುವುದಾಗಲಿ ಅಥವಾ ಸಂಬಂಧಿಸಿದ ಸರ್ಕಾರದ ಇಲಾಖೆಯಾಗಲಿ ಅವರನ್ನು ಮೂಲ ಇಲಾಖೆಗೆ ವಾಪಸ್ ಕಳಿಸುವ ಕಾರ್ಯವನ್ನು ಕೈಗೊಳ್ಳದಿರುವುದು ನಿಜಕ್ಕೂ ದುರದೃಷ್ಟಕರ. ಈ ವಿಚಾರದಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಬಗ್ಗೆ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತಕರು ಏನಂತಾರೆ? :
“ಪಾಲಿಕೆಯ ಮಹದೇವಪುರ ವಲಯದ ಲೆಕ್ಕಾಧೀಕ್ಷಕರಾದ ವಿ.ಸೌಮ್ಯ ನಿಗಧಿತ ನಿಯೋಜನಾ ಅವಧಿ ಪೂರ್ಣಗೊಳಿಸಿ 11 ವರ್ಷಗಳಿಂದಲೂ ಹೆಚ್ಚು ಕಾಲದಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಿರುವುದು ಈಗ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಬಿಬಿಎಂಪಿ ಕಾಯ್ದೆ 2020ರಂತೆ, ಬಿಬಿಎಂಪಿಯ ಆಯಾ ವಲಯ ಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರ ಪ್ರತ್ಯಾಯೋಜನೆ ಅಧಿಕಾರವನ್ನು ಹಸ್ತಾಂತರಿಸಿದಲ್ಲಿ ಮುಂದೆ ಇಂತಹ ಪ್ರಕರಣಗಳಲ್ಲಿ ವಲಯ ಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳಬಹುದು. ಆ ಕೆಲಸಗಳು ನಡೆಯುತ್ತಿದೆ.”
- ಹರೀಶ್ ಕುಮಾರ್, ವಿಶೇಷ ಆಯುಕ್ತರು, ಬಿಬಿಎಂಪಿ ಆಡಳಿತ ವಿಭಾಗ