ಬೆಂಗಳೂರು, ಅ.17 www.bengaluruwire.com : ದೇಶದ ಮೊದಲ ಮಾನವ ಸಹಿತ ‘ಗಗನಯಾನ’ ಯೋಜನೆಗೆ (Gaganyaan mission) ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ (Unmanned flight tests) ಇದೇ 21 ರಂದು ಶ್ರೀಹರಿ ಕೋಟದಿಂದ ನಡೆಯಲಿದೆ.
ಶನಿವಾರ ಬೆಳಿಗ್ಗೆ 7ರಿಂದ 9ರ ಮಧ್ಯೆ ಈ ಉಡಾವಣೆ ಕಾರ್ಯ ನಡೆಯಲಿದೆ. ಈ ಪರೀಕ್ಷೆಯಲ್ಲಿ ಗಗನಯಾನಿಗಳು ಪಾರಾಗುವ ವ್ಯವಸ್ಥೆಯ (ಕ್ರೂ ಎಸ್ಕೆಪ್ ಸಿಸ್ಟಂ) ಪ್ರಾತ್ಯಕ್ಷಿಕೆಯೂ ಇರಲಿದೆ. ಈ ಮಾಹಿತಿಯನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯು (ಇಸ್ರೋ) ‘ಎಕ್ಸ್’ ಮೂಲಕ ಹಂಚಿಕೊಂಡಿದೆ.
ಇದು ಗಗನಯಾನದ ಕ್ರ್ಯೂ ಮಾಡ್ಯೂಲ್ನಷ್ಟೇ ಗಾತ್ರ ಮತ್ತು ದ್ರವ್ಯರಾಶಿಯನ್ನು ಹೊಂದಿರುತ್ತದೆ. ಅಲ್ಲದೆ, ನೈಜ ಮಾಡ್ನೂಲ್ನಲ್ಲಿರುವ ಎಲ್ಲ ವ್ಯವಸ್ಥೆಗಳು ಅಂದರೆ ಪ್ಯಾರಾಚೂಟ್, ಪತ್ತೆ ಸಾಧನ ಮತ್ತಿತರ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಅ.21ರಂದು ನಡೆಯುವ ಪರೀಕ್ಷೆ ವೇಳೆ ಈ ಮಾಡ್ನೂಲ್ ಅನ್ನು ಉಡಾವಣೆ ಮಾಡಿ ಬಂಗಾಳ ಕೊಲ್ಲಿಯಲ್ಲಿ ಇಳಿಯುವಂತೆ ಮಾಡಲಾಗುತ್ತದೆ. ಭೂಮಿಯಿಂದ 17 ಕಿ.ಮೀ. ಎತ್ತರದಲ್ಲಿ ಪರೀಕ್ಷಾ ನೌಕೆಯಿಂದ ಕ್ರ್ಯೂ ಮಾಡ್ಯೂಲ್ ಪ್ರತ್ಯೇಕಗೊಳ್ಳುತ್ತದೆ. ನಂತರ, ನೌಕಾಪಡೆಯ ತಂಡ ಹಾಗೂ ನೌಕೆಯೊಂದನ್ನು ಬಳಸಿಕೊಂಡು ಮಾಡ್ಯೂಲ್ ಅನ್ನು ಪತ್ತೆ ಹಚ್ಚಿ ಹೊರತರಲು ಇಸ್ರೋ ವಿಜ್ಞಾನಿಗಳು ನಿರ್ಧರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಒಟ್ಟು ಮೂರು ಸರಣಿ ಪರೀಕ್ಷಾ ಉಡಾವಣೆಗಳು ನಡೆಯಲಿವೆ. ಇವುಗಳನ್ನು ಮಾನವ ಸಹಿತ ‘ಗಗನಯಾನ’ಕ್ಕೆ ಪೂರ್ವ ಭಾವಿ ಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆ ಗಳ ಮೊದಲ ಮಾನವರಹಿತ ಪರೀಕ್ಷಾ ವಾಹನ ಗಗನಯಾನ ಕಾರ್ಯಕ್ರಮದಡಿ ನಡೆಸಲಾಗುವುದು. ಗಗನಯಾನದ ಮೂಲಕ ಗಗನಯಾನಿಗಳನ್ನು ಭೂಮಿಯ 400 ಕಿ.ಮೀ ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಸುರಕ್ಷಿತವಾಗಿ ಕರೆತರಲಾಗುವುದು. ಈ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನದ ಸಾಮರ್ಥ್ಯವನ್ನು ಇಸ್ರೋ ಪ್ರದರ್ಶಿಸಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷದ ಕೊನೆಯ ವೇಳೆಗೆ ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶ ನೌಕೆಯು ಹೊತ್ತೂಯ್ಯಲಿದೆ. ಇದಕ್ಕಾಗಿ ಗಗನಯಾನಿಗಳು ಕುಳಿತು ಪಯಣಿಸುವ ಕೋಶ ಅಥವಾ ‘ಕ್ರೋ ಮಾಡ್ಯೂಲ್’ನ ಪರೀಕ್ಷೆಯನ್ನು ಟಿವಿ-ಡಿ1 (ಟೆಸ್ಟ್ ವೆಹಿಕಲ್ ಡೆವಲಪ್ಮೆಂಟ್ ಫ್ಲೈಟ್ – Tv-D1) ಮೂಲಕ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಪರೀಕ್ಷೆಯಲ್ಲಿ ಮಾಡ್ಯೂಲ್ ಅನ್ನು ಬಾಹ್ಯಾಕಾಶಕ್ಕೆ ಒಯ್ದು ಅದನ್ನು ವಾಪಸ್ ಭೂಮಿಗೆ ತರಲಾಗುವುದು. ಇದು ಬಂಗಾಳಕೊಲ್ಲಿಗೆ ಬಂದು ಇಳಿಯಲಿದೆ. ಅಲ್ಲಿಂದ ಕ್ಯೂ ಮಾಡ್ಯೂಲ್ ಅನ್ನು ವಶಕ್ಕೆ ಪಡೆಯುವ ಯೋಜನೆಯನ್ನು ಇಸ್ರೋ ಹಾಕಿಕೊಂಡಿದೆ.