ಮೈಸೂರು, ಅ.15 www.bengaluruwire.com : ಇಂದಿನಿಂದ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಸಾಂಪ್ರದಾಯಕವಾಗಿ, ಅರ್ಥಪೂರ್ಣವಾಗಿ ಉದ್ಘಾಟಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳ ಜತೆಗಿದ್ದರು. ಪಲ್ಲಕ್ಕಿಯಲ್ಲಿ ಅಲಂಕೃತ ಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಾನು ಈಗ ಕನ್ನಡದ ದೀಪ ಹಚ್ಚಿದ್ದೇನೆ. ಕನ್ನಡಿಗರ ಆಶಯದಂತೆ ದೀಪ ಹಚ್ಚಿದ್ದೇನೆ. ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ. ವಿಜಯನಗರದ ಮಹಾ ಸಾಮ್ರಾಜ್ಯ ಆರಂಭಿಸಿದ ಮಹಾಕಾವ್ಯವಿದು. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದು ಆಶಿಸಿದರು.
ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಭಾವಕ್ಕೆ ಮಿತಿ ಎಲ್ಲಿದೆ? ನಮಗೆ ದೆಹಲಿ ಬೇಕು. ದೆಹಲಿಗೂ ನಾವು ಬೇಕು. ಆದರೆ ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ. ಇದಕ್ಕೆ ತಲೆ ಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲೆಡೆ ಎತ್ತಿ ಹಿಡಿಯಬೇಕಿದೆ. ಕರ್ನಾಟಕದ ಶಾಂತಿ- ಸಮೃದ್ಧಿ ಕನ್ನಡಿಗರ ಮಂತ್ರವಾಗಬೇಕು. ಕರ್ನಾಟಕದಲ್ಲಿ ನೆಲೆಸಿರುವವರೆಲ್ಲಾ ಕನ್ನಡಿಗರು. ಇವರಲ್ಲಿ ಯಾರಿಗೆ ಕನ್ನಡ ಮಾತಾಡಲು ಬರಲ್ಲ? ಯಾರಿಗೆ ಕನ್ನಡ ಭಾಷೆ ಅರ್ಥವಾಗಲ್ಲ? ಎಂಬ ಕುರಿತು ಸಮೀಕ್ಷೆ ಕೈಗೊಳ್ಳಬೇಕಿದೆ. ಕಾರ್ಪೊರೇಟ್ ಸಂಸ್ಥೆಯೇ ಈ ಸಮೀಕ್ಷೆ ಮಾಡುತ್ತದೆ. ಇದಕ್ಕೆ ಜನರ ಸಹಕಾರ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮೇಯರ್ ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾಜ್೯, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ನಾಗರೀಕ ಫೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ತನ್ವೀರ್ ಸೇಠ್, ಎ.ಆರ್.ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ,ವ ಸದಸ್ಯ ಮರಿತಿಬ್ಬೇಗೌಡ, ಉಪ ಮೇಯರ್ ಡಾ.ಜಿ.ರೂಪ, ಜಿಲ್ಲಾಧಿಕಾರಿ ದಸರಾ ವಿಶೇಷಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿ.ಪಂ. ಸಿಇಓ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಈ ಬಾರಿಯ ದಸರಾದಲ್ಲಿ ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶಿಷ್ಯ ದೀಪಾಲಂಕಾರ, ಸರ್ಕಾರದ 5 ಗ್ಯಾರಂಟಿಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ, ಕಲಾವಿದರಿಂದ ಆಕರ್ಷಕ ಕಾರ್ಯಕ್ರಮಗಳು ಜರುಗಲಿವೆ. ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಂದ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಕೂಡ ವೈಭವದಿಂದ ನಡೆಯಲಿದೆ.