ಆನೇಕಲ್, ಅ.8 www.bengaluruwire.com : ತಮಿಳುನಾಡು ಗಡಿಯಲ್ಲಿರುವ ಅತ್ತಿಬೆಲೆಯಲ್ಲಿ 12 ಮಂದಿ ಬಲಿ ತೆಗೆದುಕೊಂಡಿರುವ ಪಟಾಕಿ ದುರಂತ ನಡೆದ ಅತ್ತಿಬೆಲೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೊಂದು ಘೋರ ದುರಂತ. ಅಮಾಯಕ ಯುವಕರು ಮೃತಪಟ್ಟಿದ್ದಾರೆ. ಕೆಲವರು ವ್ಯಾಪಾರ ಮಾಡಲು ಬಂದಿದ್ದವರೂ ಇದ್ದರು. 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಸತ್ತವರ ಕುಟುಂಬಕ್ಕೆ ಸರಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಘಟನೆ ಸ್ಥಳದಲ್ಲಿ ಮಾಧ್ಯಮದವರಿಗೆ ಶನಿವಾರ ರಾತ್ರಿ ತಿಳಿಸಿದರು.
ದುರಂತ ಸ್ಥಳದಲ್ಲಿ 20 ಮಂದಿ ಇದ್ದರು. ನಾಲ್ವರು ತಪ್ಪಿಸಿಕೊಂಡಿದ್ದಾರೆ. 12 ಮಂದಿಯ ಶವ ಪತ್ತೆಯಾಗಿದೆ. ಉಳಿದವರು ಏನಾದರೂ ಎಂದು ತನಿಖೆ ನಡೆಸಲಾಗುತ್ತಿದೆ. ಹಿಂದಿನ ಕಟ್ಟಡದಲ್ಲಿ ಏನಾದರೂ ಇದ್ದಾರೆಯೇ? ಬೇರೆ ಎಲ್ಲಾದರೂ ಹೋದರೆ? ಹಿಂದಿನ ಕಟ್ಟಡದಲ್ಲೂ ಪಟಾಕಿಗಳು ಇವೆಯಂತೆ. ಅದೂ ಅಪಾಯಕಾರಿ. ಹೀಗಾಗಿ ಎಚ್ಚರಿಕೆಯಿಂದ ಬಾಗಿಲು ತೆರೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದರು.