ಬೆಂಗಳೂರು, ಅ.08 www.bengaluruwire.com : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS) ಹಾಗೂ ಸಮಾಜ ಕಲ್ಯಾಣ ಇಲಾಖೆ (Social Welfare Department) ಹಾಸ್ಟೆಲ್ ಗಳು ಸೇರಿದಂತೆ ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ (Uniforms) ಪೂರೈಕೆ ಮಾಡುವಲ್ಲಿ ಐವರು ಪೂರೈಕೆದಾರರು ಅಕ್ರಮವಾಗಿ ಕಾರ್ಟೆಲ್ ಸೃಷ್ಟಿಸಿಕೊಂಡಿದ್ದಾರೆ. ಈ ಮೂಲಕ ಕಳೆದ 8 ವರ್ಷಗಳಿಂದ 200 ಕೋಟಿ ರೂ.ಗಿಂತಲೂ ಹೆಚ್ಚಿಗೆ ರಾಜ್ಯ ಸರ್ಕಾರಕ್ಕೆ ವಂಚನೆಯಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.
“ಪ್ರೌಡ್ ಕರ್ನಾಟಕ ಸಿಟಿಜನ್” ಎಂಬ ಹೆಸರಿನಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ನಿಗಮದ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಸಚಿವರು ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರಿಗೆ 37 ಇಮೇಲ್ ಗಳ ಮೂಲಕ ವಿವರವಾಗಿ ದೂರು ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ದುಷ್ಟ ನಿಯಂತ್ರಣ ಕೂಟ ರಚಿಸಿಕೊಂಡು ರಾಜ್ಯದಲ್ಲಿನ 5 ಲಕ್ಷಕ್ಕೂ ಹೆಚ್ಚಿನ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ನೀಡಿ ಆ ಮೂಲಕ ನೂರಾರು ಕೋಟಿ ರೂ. ಹಣವನ್ನು ಸರ್ಕಾರಕ್ಕೆ ನಷ್ಟ ಮಾಡುತ್ತಿರುವ ಬಗ್ಗೆ ವಿಶಲ್ ಬ್ಲೋಯರ್ (whistleblower) ಕೆಲಸವನ್ನು ಅನಾಮಿಕ ವ್ಯಕ್ತಿ ಮಾಡಿದ್ದಾರೆ. ಇದರ ದಾಖಲೆ “ಬೆಂಗಳೂರು ವೈರ್” ಗೆ ಲಭ್ಯವಾಗಿದೆ.
ತಮ್ಮ ದೂರಿನಲ್ಲಿ ಈ ಕಾರ್ಟೇಲ್ ಗಳನ್ನು ಯಾರು ನಿಯಂತ್ರಿಸುತ್ತಿದ್ದಾರೆ? ಹೇಗೆಲ್ಲಾ ಕಳಪೆ ಸಮವಸ್ತ್ರಗಳನ್ನು ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ? ಇವುಗಳ ಗುಣಮಟ್ಟ ಎಂತದ್ದು? ಶಾಲಾ ಯೂನಿಫಾರ್ಮ್ ಪೂರೈಕೆ ಮಾಡುವಲ್ಲಿ ಹೊಸ ಪೂರೈಕೆದಾರರನ್ನು ಬರಲು ಬಿಡದಂತೆ ತಡೆಯುವ ಹುನ್ನಾರ ಹೇಗೆ ಮಾಡಲಾಗುತ್ತಿದೆ? ಎಂಬುದನ್ನು ವಿಸ್ತ್ರತವಾಗಿ ತಿಳಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಮಲ್ಲಿಕಾರ್ಜುನ್, ಪಾಟೀಲ್, ಶ್ರೀಕಾಂತ್ ಕುರುವಲ್ಲಿ, ಪುಟ್ಟಸ್ವಾಮಿ ಹಾಗೂ ಮಂಜು ಎಂಬುವರು ಕ್ರೈಸ್ ಶಿಕ್ಷಣ ಸಂಸ್ಥೆಗಳ ಸೊಸೈಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿನ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ನೀಡುವ ಕಾರ್ಯಾದೇಶ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (KHDC)ದ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಕಾರ್ಟೆಲನ್ನು ಮಲ್ಲಿಕಾರ್ಜುನ್ ಎಂಬ ವ್ಯಕ್ತಿ ಉಸ್ತುವಾರಿ ವಹಿಸಿದ್ದು, ಆತನ ಮಗ ಮಂಜು ಕೂಡ ಈ ಕಾರ್ಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಕಾರ್ಟೇಲ್ ಎಷ್ಟು ಪ್ರಬಲವಾಗಿದೆಯೆಂದರೆ ಈ ನಿಯಂತ್ರಣ ಕೂಟವನ್ನು ಬಿಟ್ಟು ಹೊಸ ಅಥವಾ ಹೊರಗಿನ ಪೂರೈಕೆದಾರನಿಗೆ ಈ ಟೆಂಡರ್ ಗಳನ್ನು ಪಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೂ ಇದನ್ನು ನಿಯಂತ್ರಿಸಲು ಸಾಧ್ಯವಾಗದು ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಪಾಲಿಸ್ಟರ್ ಕಾಟನ್ ಬದಲಿಗೆ ವಿಸ್ಕೋಸ್ ಕಳಪೆ ಬಟ್ಟೆ ಪೂರೈಕೆ ಆರೋಪ :
ಕ್ರೈಸ್ ಶಿಕ್ಷಣ ಸಂಸ್ಥೆಗಳ ಸೊಸೈಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿನ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಯೂನಿಫಾರ್ಮ್ ಪೂರೈಕೆ ಮಾಡುವುದರೊಂದಿಗೆ ಈ ಕಾರ್ಟೆಲ್ ನಲ್ಲಿನ ವ್ಯಕ್ತಿಗಳು ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ. ಕರ್ನಾಟಕದಲ್ಲಿ 2021-22ನೇ ಸಾಲಿನ ಹಾಗೂ 2022-23ರ ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡುವಾಗ ನೀಡಿರುವ ಖರೀದಿ ಆದೇಶದಲ್ಲಿ ಮಕ್ಕಳಿಗೆ ಪಾಲಿಸ್ಟರ್ ಕಾಟನ್ ದರ್ಜೆಯ ಯೂನಿಫಾರ್ಮ್ ಪೂರೈಕೆ ಮಾಡುವಂತೆ ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು. ಆದರೆ ಬಡ ಮಕ್ಕಳೇ ಹೆಚ್ಚಾಗಿ ಓದುವ ಈ ಶಾಲೆಗಳಿಗೆ ಪಾಲಿಸ್ಟರ್ ವಿಸ್ಕೋಸ್ ದರ್ಜೆಯ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿತ್ತು. ಈ ದರ್ಜೆಯ ಸಮವಸ್ತ್ರವು ಸಾಕಷ್ಟು ಕಳಪೆಯಾಗಿದ್ದು, ಪಾಲಿಸ್ಟರ್ ಕಾಟನ್ ಬೆಲೆಗಿಂತ ಶೇಕಡ 50ರಷ್ಟು ಕಡಿಮೆಯಿದ್ದು, ಮಕ್ಕಳಿಗೆ ಹಾನಿಕಾರಕವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಸ್ಯಾಂಪಲ್ ಟೆಸ್ಟಿಂಗ್ ನಲ್ಲಿ ಸತ್ಯ ಬಯಲು :
ಈ ರೀತಿ ಪೂರೈಕೆ ಮಾಡಿರುವ 100 ಯೂನಿಫಾರ್ಮ್ ಗಳ ಸ್ಯಾಂಪಲ್ ಗಳನ್ನು ಗುಣಮಟ್ಟ ಪರೀಕ್ಷೆಗೆ ನೀಡಿದಾಗ ಕೆಎಚ್ ಡಿಸಿ ನೀಡಿದ ಖರೀದಿ ಆದೇಶದ ಅನ್ವಯ ಒಂದೇ ಒಂದು ಪಾಲಿಸ್ಟರ್ ಕಾಟನ್ ಸಮವಸ್ತ್ರಗಳು ಆ 100 ಬಟ್ಟೆಗಳಲ್ಲಿರಲಿಲ್ಲ. ಬದಲಿಗೆ ಸಂಪೂರ್ಣವಾಗಿ ಪಾಲಿಸ್ಟರ್ ವಿಸ್ಕೋಸ್ ಬಟ್ಟೆಯಾಗಿತ್ತು. ಹೀಗಾಗಿ ಕ್ರೈಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಖುದ್ದಾಗಿ 2021-22 ಹಾಗೂ 2022-23ನೇ ಸಾಲಿನಲ್ಲಿ ಈ ಮೇಲಿನ ಸಂಬಂಧಿಸಿದ ವ್ಯಕ್ತಿಗಳು ಪೂರೈಸಿದ ಯೂನಿಫಾರ್ಮ್ ಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದರೆ ಸತ್ಯ ತಿಳಿಯುತ್ತದೆ ಎಂದು ಖಾರವಾಗಿ ತಿಳಿಸಿದ್ದಾರೆ.
ಪ್ರತಿವರ್ಷವೂ ಈ ಕಾರ್ಟೆಲ್ ಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಅಡಿಯಿಂದ ಕನಿಷ್ಟ 40 ಕೋಟಿ ರೂ. ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 15 ಕೋಟಿ ರೂ. ಮೊತ್ತ ಸೇರಿದಂತೆ ಒಟ್ಟು 55 ಕೋಟಿ ರೂ. ಮೊತ್ತದ ಆರ್ಡರ್ ಗಳನ್ನು ಪಡೆಯುತ್ತಾರೆ. ಆದರೆ ಈ ಉತ್ಪಾದಕರು ಕೇವಲ 20 ಕೋಟಿ ರೂ. ಹಣಕ್ಕೆಲ್ಲಾ ಶಾಲಾ ಸಮವಸ್ತ್ರವನ್ನು ಉತ್ಪಾದಿಸುತ್ತಾರೆ. ಬಹಳ ಕೆಟ್ಟ ವಾತಾವರಣದಲ್ಲಿ ಈ ಬಟ್ಟೆಗಳನ್ನು ತಯಾರಿಸಲಾಗುತ್ತಿದೆ. ಉಳಿದ ಹಣವೆಲ್ಲಾ ಇವರಿಗೆ ಲಾಭ….!! ಇದರಿಂದ ಸರ್ಕಾರಕ್ಕೆ ವರ್ಷಂಪ್ರತಿ ಕೋಟ್ಯಾಂತ ರೂಪಾಯಿ ನಷ್ಟವಾಗುತ್ತಿದೆ ಎಂದು ದೂರಿದ್ದಾರೆ.
2023-24ರಲ್ಲೂ ಇದೇ ಪೂರೈಕೆದಾರರಿಗೆ ಆರ್ಡರ್ ಲಭಿಸಿದೆ :
2021-22 ಹಾಗೂ 2022-23ನೇ ಸಾಲಿನಲ್ಲಿ ಪೂರೈಸಿದ ಬಟ್ಟೆಗಳ ಗುಣಮಟ್ಟವನ್ನು ಪರೀಕ್ಷಿಸಿ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಸಮವಸ್ತ್ರಗಳನ್ನು ಪೂರೈಕೆ ಮಾಡುವಂತೆ ಹಲವಾರು ಜನರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದರು. ಆದರೆ ಇದೇ ಕಾರ್ಟೆಲ್ ತಂಡಗಳಿಗೆ ಈ ವರ್ಷವೂ ಶಾಲಾ ಸಮವಸ್ತ್ರ ಪೂರೈಕೆ ಮಾಡಲು ಅವಕಾಶ ದೊರಕಿದೆ. ಆದರೆ ಈ ಬಾರಿ ನಿಗಮದಿಂದ ನೀಡಲಾದ ನಿಗದಿತ ಸೂಚನೆಗಳಲ್ಲಿ ಶೇ.30ರಷ್ಟು ಪಾಲಿಸಿದ್ದು, ಶೇ.70ರಷ್ಟು ಸೂಚನೆಗಳನ್ನು ಪಾಲಿಸಿಲ್ಲ ಎಂದು ರಾಜ್ಯಪಾಲರಿಗೆ ಇ-ಮೇಲ್ ಮೂಲಕ ಸಲ್ಲಿಸಿದ ಕಂಪ್ಲೆಂಟ್ ನಲ್ಲಿ ತಿಳಿಸಲಾಗಿದೆ.
ಈ ಇಲಾಖೆಗಳಲ್ಲಿ ಸದಾ ಬೀಡು ಬಿಡುವ ಕಾರ್ಟೆಲ್ ಸದಸ್ಯರು :
ಈ ಕಾರ್ಟೆಲ್ ಎಷ್ಟು ಪ್ರಬಲವಾಗಿದೆಯಂದರೆ ಇದರ ಒಬ್ಬಲ್ಲ ಒಬ್ಬ ಸದಸ್ಯ ಯಾವಾಗಲೂ ಕೆಎಚ್ ಡಿಸಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಚೇರಿ (BCM), ಬಿಬಿಎಂಪಿ ಹಾಗೂ ಕ್ರೈಸ್ ಆಫೀಸ್ ಗಳಲ್ಲಿ ಬೀಡುಬಿಟ್ಟಿರುತ್ತಾರೆ. ಹೊರಗಿನಿಂದ ಹೊಸದಾಗಿ ಶಾಲಾ ಸಮವಸ್ತ್ರ ಪೂರೈಕೆ ಮಾಡಲು ಹೊಸ ಮಾರಾಟಗಾರ ಬಂದು ಈ ಕಚೇರಿಗಳಲ್ಲಿ ರಿಜಿಸ್ಟರ್ ಆಗಲು ಬಿಡುವುದಿಲ್ಲ. ಇದಕ್ಕೆ ಒಂದು ಪ್ರಧಾನ ಸಾಕ್ಷಿಯೆಂದರೆ ಈತನಕ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಸಿಸಿಟಿವಿ ಹಾಕಲು ಈ ಕಾರ್ಟೆಲ್ ಕೂಟ ಅವಕಾಶ ನೀಡಿಲ್ಲ ಎಂದರೆ, ಈ ಕಚೇರಿಗಳ ಅಧಿಕಾರಿ, ಸಿಬ್ಬಂದಿ ಎಷ್ಟರ ಮಟ್ಟಿಗೆ ಇವರ ಕೈಗೊಂಬೆಯಾಗಿ ಕುಣಿಯುತ್ತಿರುವುದು ಇದರಿಂದ ಸ್ಟಷ್ಟವಾಗಿದೆ.
ರಾಜ್ಯ ಸರ್ಕಾರವು ಸ್ಪರ್ಧಾತ್ಮಕ ದರದಲ್ಲಿ ಎಲ್ಲಾ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಪೂರೈಸಲು ಸಮನಾದ ಅವಕಾಶಗಳನ್ನು ಕೊಟ್ಟಿರುವಾಗ ಕೇವಲ ನಾಲ್ಕೈದು ಮಂದಿ ಕಳೆದ ಎಂಟು ಹತ್ತು ವರ್ಷಗಳಿಂದ ಶಾಲಾ ಸಮವಸ್ತ್ರ ಪೂರೈಸುವ ಆರ್ಡರ್ ಗಳನ್ನು ಪಡೆಯುತ್ತಿದ್ದು, ಹೊಸ ಮಾರಾಟಗಾರರು ಈ ಇಲಾಖೆಗಳಲ್ಲಿ ರಿಜಿಸ್ಟರ್ ಮಾಡಲು ಬಿಡದಿರುವುದು ದುರದೃಷ್ಟಕರ ಎಂದು “ಪ್ರೌಡ್ ಕರ್ನಾಟಕ ಸಿಟಿಜನ್” ತಮ್ಮ ಇಮೇಲ್ ನಲ್ಲಿ ತಿಳಿಸಿದ್ದಾರೆ.
ಕಳಪೆ ಸಮವಸ್ತ್ರ ಪೂರೈಕೆ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹ :
ಕಳಪೆ ಸಮವಸ್ತ್ರ ಪೂರೈಕೆ ಸಂಬಂಧ ಸಂಬಂಧಿಸಿದ ಇಲಾಖೆಗಳು ಈ ಕಾರ್ಟೆಲ್ ಸದಸ್ಯರು ಪೂರೈಸಿರುವ ಉತ್ಪನ್ನಗಳ ಬಗ್ಗೆ ಗುಣಮಟ್ಟ ಪರೀಕ್ಷೆ ನಡೆಸಬೇಕು. ಅಲ್ಲಿಯವರೆಗೆ ಇವರಿಗೆ ನೀಡುವ ಬಿಲ್ ಮೊತ್ತವನ್ನು ತಡೆಹಿಡಿಯಬೇಕು. ಒಂದೊಮ್ಮೆ ಈ ಕಾರ್ಟೆಲ್ ಸದಸ್ಯರು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ, ಇವರನ್ನು ಕಪ್ಪುಪಟ್ಟಿಗೆ ಸೇರಿಸಿ. ಇಲ್ಲವಾದರೆ, ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸುವ ಹೊಸ ಮಾರಾಟಗಾರರಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ಈ ಕಾರ್ಟೆಲ್ ಗಳ ಗೂಂಡಾಯಿಸಮ್ ನಿಂದ ಹೊಸಬರು ಕೆಎಚ್ ಡಿಸಿ ಹೊಸ್ತಿಲು ತುಳಿಯಂದಾಗಿದೆ ಎಂದು ಅವರು ದೂರಿದ್ದಾರೆ.
ಶಾಲಾ ಸಮವಸ್ತ್ರ ಪೂರೈಕೆಗೆ ಇ-ಟೆಂಡರ್ ವಿಧಾನ ಬಳಕೆಗೆ ಸಲಹೆ :
ಸರ್ಕಾರವು ಬಡ ಶಾಲಾ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಯೂನಿಫಾರ್ಮ್ ಪೂರೈಸುವ ಸಂಬಂಧ ಹೊಸ ಹೊಸ ದಾರಿಗಳನ್ನು ಕಂಡು ಕೊಳ್ಳಬೇಕಿದೆ. ಇ- ಟೆಂಡರ್ ನಂತಹ ವಿಧಾನಗಳಿಂದ ಯೂನಿಫಾರ್ಮ್ ಖರೀದಿಸಿದಲ್ಲಿ ನೈಜ ಮಾರಾಟಗಾರರು ಟೆಂಡರ್ ನಲ್ಲಿ ಭಾಗವಹಿಸಿ ಗುಣಮಟ್ಟದ ಬಟ್ಟೆಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಸಿದರೆ, ಸರ್ಕಾರಕ್ಕೆ ಆ ಮೂಲಕ ಕೋಟ್ಯಾಂತರ ರೂಪಾಯಿ ಹಣ ಉಳಿತಾಯವಾಗಲಿದೆ ಎಂದು ಸಲಹೆ ನೀಡಿದ್ದಾರೆ.
ತಮ್ಮಲ್ಲೇ ವಿವಿಧ ಇಲಾಖೆಗಳ ಹಂಚಿಕೆ – ವಾರ್ಷಿಕ ಕನಿಷ್ಠ 250 ಕೋಟಿ ರೂ. ಆರ್ಡರ್ :
ಕಾರ್ಟೆಲ್ ನಲ್ಲಿನ ಸದಸ್ಯರು ಹೇಗೆ ವಿವಿಧ ಇಲಾಖೆಗಳನ್ನು ತಮ್ಮಲ್ಲೇ ವಿಭಾಗಿಸಿಕೊಂಡು ಅಲ್ಲಿ ಸರ್ಕಾರದ ಆರ್ಡರ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಲವು ಸ್ಯಾಂಪಲ್ ಗಳನ್ನು ದೂರುದಾರರು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ :
ಕ್ರೈಸ್, ಸಮಾಜ ಕಲ್ಯಾಣ ಇಲಾಖೆ ಶಾಲಾ ಸಮವಸ್ತ್ರ ಪೂರೈಕೆ ಮಲ್ಲಿಕಾರ್ಜುನ್ ಕಾರ್ಟೆಲ್ ಗೆ, ಪರಿಶಿಷ್ಠ ಪಂಗಡಗಳ ಇಲಾಖೆ ಶ್ರೀಕಾಂತ್ ಕುರಿವಲ್ಲಿಗೆ ಹಾಗೂ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಚೇರಿ, ಬಿಬಿಎಂಪಿ, ಇತರ ಕಾರ್ಪೊರೇಷನ್ ಗಳು ಮತ್ತು ಎಲೆಕ್ಟ್ರಿಕಲ್ ಬೋರ್ಡ್ ಮಂಡಳಿಗಳಲ್ಲಿ ಸಾಮಗ್ರಿಗಳ ಪೂರೈಕೆ ಚಂದ್ರಶೇಖರ್ ಎಂಬುವರಿಗೆ ಹಂಚಿಕೊಳ್ಳಲಾಗಿದೆ. ಇದು ಕೇವಲ ಸ್ಯಾಂಪಲ್ ಗಳಷ್ಟೆ. ಇದೇ ಐದಾರು ಮಂದಿ ಕಾರ್ಟೆಲ್ ಗಳ ಸದಸ್ಯರು ತಮ್ಮಲ್ಲೇ ಪ್ರತಿವರ್ಷ ವಿವಿಧ ಇಲಾಖೆಗಳಿಂದ ಏನಿಲ್ಲವೆಂದರೂ 250 ಕೋಟಿ ರೂ.ನಷ್ಟು ಆರ್ಡರ್ ಪಡೆಯುತ್ತಾರೆ ಎಂದು “ಪ್ರೌಡ್ ಕರ್ನಾಟಕ ಸಿಟಿಜನ್” ಆರೋಪಿಸಿದ್ದಾರೆ.
ಒಟ್ಟಾರೆ ರಾಜ್ಯದ ಹಳ್ಳಿಗಾಡು, ನಗರ ಪ್ರದೇಶಗಳಲ್ಲಿನ 5 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಸಮವಸ್ತ್ರ ಪೂರೈಸಿರುವ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಯಡಿಯಲ್ಲಿ ರಾಜ್ಯಾದ್ಯಂತ ನೂರಾರು ಶಾಲೆಗಳಿದ್ದು, 2023-24ನೇ ಸಾಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಒಟ್ಟಾರೆ 2,05,108 (2.05 ಲಕ್ಷ) ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇನ್ನು ಸಮಾಜ ಕಲ್ಯಾಣ ಇಲಾಖೆಯಡಿ ಹಲವು ನಿಗಮಗಳು, ಮಂಡಳಿಗಳು ಬರುತ್ತಿದ್ದು, ಅವುಗಳ ಹಾಸ್ಟೆಲ್ ಗಳಲ್ಲಿ ಲಕ್ಷಾಂತರ ಬಡ ಶಾಲಾ ಮಕ್ಕಳು ಓದುತ್ತಿದ್ದಾರೆ. ಹೀಗಿರುವಾಗ ಸರ್ಕಾರದ ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅಗತ್ಯವಿದೆ. “ಪ್ರೌಡ್ ಕರ್ನಾಟಕ ಸಿಟಿಜನ್” ಆರೋಪಿಸಿದಂತೆ ದುಷ್ಟಕೂಟ ಕಾರ್ಟೆಲ್ ಗಳಿಂದ ಈ ರೀತಿ ಕಳಪೆ ಗುಣಮಟ್ಟ ಸಮವಸ್ತ್ರ ಖರೀದಿ ಮಾಡುವುದಕ್ಕಿಂತ ದೇಶಾದ್ಯಂತ ಪಾರದರ್ಶಕತೆ ಕಾಯ್ದುಕೊಳ್ಳುವ ಇ- ಟೆಂಡರ್, ಇ-ಪ್ರಕ್ಯೂರ್ ಮೆಂಟ್ ವಿಧಾನವನ್ನು ಈ ಖರೀದಿ ವಿಷಯದಲ್ಲೂ ಅಳವಡಿಸಿಕೊಂಡು ಮುಂದುವರೆದರೆ ಶಾಲಾ ಮಕ್ಕಳಿಗೆ ಗುಣಮಟ್ಟದ ಯೂನಿಫಾರ್ಮ್ ಲಭ್ಯವಾಗಲಿದೆ.
ವಿಶಲ್ ಬ್ಲೋವರ್ ಅರ್ಥವೇನು? :
ಒಬ್ಬ ವ್ಯಕ್ತಿ, ಸಾಮಾನ್ಯವಾಗಿ ಉದ್ಯೋಗಿ, ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಯೊಳಗೆ ನಡೆಯುವ ಕಾನೂನುಬಾಹಿರ, ಅನೈತಿಕ, ಅಕ್ರಮ, ಅಸುರಕ್ಷಿತ ಅಥವಾ ಮೋಸದ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುತ್ತಾನೆ. ಆತನನ್ನು ವಿಶಲ್ ಬ್ಲೋವರ್ ಅಥವಾ ಶಿಳ್ಳೆ ಹೊಡೆಯುವವನು