ಬೆಂಗಳೂರು, ಅ.7 www.bengaluruwire.com : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ವಿಭಾಗದಿಂದ ರಾಜ್ಯಮಟ್ಟದ ವಿಪ್ರ ವ್ಯಾಪಾರ ಮತ್ತು ವಾಣಿಜ್ಯೋದ್ಯಮಿಗಳ ಸಮಾವೇಶವನ್ನು ಅ.8 ರಂದು ಮಧ್ಯಾಹ್ನ 2.30ರಿಂದ ರಾತ್ರಿ 8.30ರ ವರೆಗೆ ನಗರದ ಎಫ್ ಕೆಸಿಸಿಐ ಭವನದ ಸರ್.ಎಂ.ವಿ.ಆಡಿಟೋರಿಯಮ್ ನಲ್ಲಿ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ರಾಜ್ಯಾದ್ಯಂತ ಇರುವ ವಿಪ್ರ ವಾಣಿಜ್ಯೋದ್ಯಮಿಗಳನ್ನು ಸೇರಿಸಿ, ವಾಣಿಜ್ಯೋದ್ಯಮ ವಿಭಾಗದಲ್ಲಿ ಮಹಿಳೆಯರ, ಯುವ ಉದ್ಯಮಿಗಳ ಹಾಗೂ ಹಿರಿಯ ಉದ್ಯಮಿಗಳಿಂದ ವಿಶ್ವ ಸಮುದಾಯಕ್ಕೆ ಉಪಯುಕ್ತವಾಗುವಂತಹ ಚರ್ಚೆಗಳನ್ನು ನಡೆಸಿ, ಸಮುದಾಯದ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶವನ್ನು ಈ ಸಮಾವೇಶದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಮಾವೇಶವನ್ನು ಭಾನುವಾರ (ಅ.8) ಮಧ್ಯಾಹ್ನ 2.15ಕ್ಕೆ ವಾಣಿಜ್ಯೋದ್ಯಮಿ ಮೇಧಿನಿ ಉದಯ ಗರುಡಾಚಾರ್ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ನೆರವೇರಲಿರುವ ಸಭಾ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾಜಿ ಸಚಿವರು ಮತ್ತು ಶಾಸಕರಾದ ಆರ್.ವಿ. ದೇಶಪಾಂಡೆ, ಸಿ.ಕೆ. ರಾಮಮೂರ್ತಿ, ಉದ್ಯಮಿ ಚೇತನ್ ರಾಮ್ ಮತ್ತು ಗಣ್ಯರು ಅತಿಥಿಗಳಾಗಿಯೂ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ, ಉಪಾಧ್ಯಕ್ಷ ಹಾಗೂ ರಾಜ್ಯ ವ್ಯಾಪಾರ ಮತ್ತು ವಾಣಿಜ್ಯೋದ್ಯಮ ವಿಭಾಗದ ಉಸ್ತುವಾರಿ ಪಿ.ಸಿ. ರಾವ್, ರೂಪಾ ಶಾಸ್ತ್ರಿ ಉಪಸ್ಥಿತರಿರುತ್ತಾರೆ.
ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಜೀವಮಾನ ಸಾಧನೆಗೈದ ವಿವಿಧ ಕ್ಷೇತ್ರಗಳ ಎಂಟು ಮಂದಿ ವಿಪ್ರ ಸಮಾಜದ ಬಂಧುಗಳಿಗೆ “ವಿಪ್ರ ವಾಣಿಜ್ಯ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಸಮಾವೇಶದ ಸಂಪೂರ್ಣ ರೂಮರೇಷೆಯ ಸಂಚಾಲಕ ಉಮೇಶ್ ಶಾಸ್ತ್ರಿ ತಿಳಿಸಿದ್ದಾರೆ.