ಬೆಂಗಳೂರು, ಅ.07 www.bengaluruwire.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯ ವತಿಯಿಂದ 100 ನೂತನ ಕರ್ನಾಟಕ ಸಾರಿಗೆ, 40 ಹವಾ ನಿಯಂತ್ರಣ ರಹಿತ ಹಾಗೂ 4 ಎಸಿ ಅತ್ಯಾಧುನಿಕ ಸ್ಲೀಪರ್ ಬಸ್ಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಉದ್ಘಾಟಸಿದರು.
ವಿಧಾನಸೌಧದ ಪೂರ್ವದ್ವಾರ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ನೂತನ ಬಸ್ ಲೋಕಾರ್ಪಣೆ ಮಾಡಿದ ನಂತರ ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಂಮತ್ರಿ ಡಿ.ಕೆ.ಶಿವಕುಮಾರ್, ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಶಕ್ತಿ ಸೇರಿದಂತೆ ಐದು ಗ್ಯಾರಂಟಿ ಜಾರಿಗೆ ತರಲಾಯಿತು. ಹೆಣ್ಣುಮಕ್ಕಳ ಸಬಲೀಕರಣ ಇದರ ಉದ್ದೇಶವಾಗಿದೆ. ಈತನಕ ಯೋಜನೆ ಜಾರಿಯಾಗಿ 72 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಬಸ್ ಸಂಚರಿಸಿದ್ದಾರೆ. ಕಳೆದ ಏಳೆಂಟು ವರ್ಷದಿಂದ ಸಾರಿಗೆ ನಿಗಮಗಳಲ್ಲಿ ಡಿಕೆಟ್ ಬೆಲೆ ಏರಿಕೆ ಮಾಡಿಲ್ಲ. ಬರೀ ಲಾಭ ಮಾಡಲೆಂದೇ ಸರ್ಕಾರ ಮಾಡೋಕೆ ಆಗಲ್ಲ. ಮಹಿಳೆಯರಿಗೆ ಉಚಿತ ಬಸ್ ಕಲ್ಪಿಸಿದ್ದರಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ನಿಜ.
ಮೈಸೂರಿಗೆ ಹೋಗುವಾಗ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸಿ ಸಮಾಜದ ಸಾಮಾನ್ಯ ಜನರು ಹೇಗೆ ಸಂಚರಿಸುತ್ತಾರೆ ಎಂಬ ಅನುಭವ ಪಡೆದುಕೊಳ್ಳಲು ನನ್ನ ಪತ್ನಿಗೂ ಸಲಹೆ ನೀಡಿದ್ದೇನೆ. ನಾನು ಕೂಡ ಹಿಂದೆ ಶಾಸಕನಾಗಿದ್ದಾಗ ರಾಮಲಿಂಗಾರೆಡ್ಡಿ ಅವರ ಜೊತೆ ಬೆಂಗಳೂರಿಗೆ ಶಾಸಕರಿಗೆ ಮೀಸಲಾದ ಸೀಟಲ್ಲಿ ಕೂತು ಬಸ್ ನಲ್ಲಿ ಪ್ರಯಾಣಿಸಿದ್ದಿದೆ ಎಂದು ನೆನೆಸಿಕೊಂಡರು. ಕೆಸ್ ಆರ್ ಟಿಸಿ ಈ ಪಲ್ಲಕ್ಕಿಯನ್ನು ಪ್ರತಿ ಮನೆಯ ಮಹಾರಾಣಿಯನ್ನು ಹೊತ್ತೊಯ್ಯಲ್ಲಿದೆ ಎಂದು ಹೇಳಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಮಾತನಾಡುತ್ತಾ, ನಮ್ಮಲ್ಲಿ 24 ಸಾವಿರ ಬಸ್ ಗಲಕಿವೆ. ವರ್ಷಕ್ಕೆ ಶೇ.10ರಷ್ಟು ಬಸ್ ಸ್ಕ್ರಾಪ್ ಆಗುತ್ತಿರುತ್ತೆ. ಶೇ.10ರಷ್ಟು ಮಂದಿ ವರ್ಷಂಪ್ರತಿ ನಿವೃತ್ತಿಯಾಗುತ್ತಿದ್ದಾರೆ. ಸಾರಿಗೆ ಇಲಾಖೆಯಲ್ಲಿ 2016ರಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ. 13,000 ಹೊಸ ನೇಮಕಾತಿಗೆ ಸರ್ಕಾರದಲ್ಲಿ ಪ್ರಸ್ತಾವನೆಯಿದೆ. ಈಗಾಗಲೇ ರದ್ದಾದ ಸಾರಿಗೆ ಇಲಾಖೆಯ ಶೆಡ್ಯೂಲ್ ಗಳನ್ನು ಪುನರ್ ಆರಂಭಿಸುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ 12,000 ಬಸ್ ಅವಶ್ಯಕತೆಯಿದೆ. ಹಿಂದೆ ಸಾರಿಗೆ ನಾನು ಸಚಿವನಾಗಿದ್ದಾಗ ಎಷ್ಟು ಬಸ್ ಗಳಿದ್ದವೋ ಅಷ್ಟೇ ಬಸ್ ಗಳು ಈಗಿವೆ. ಹವಾ ನಿಯಂತ್ರಣ ರಹಿತ ಬಸ್ ಗಳಿಗೆ ಹಾಗೂ 300-400 ಕಿ.ಮೀ ವರೆಗೆ ಸಂಚರಿಸುವ ಬಸ್ ಗಳಿಗೆ ಹೆಚ್ಚು ಬೇಡಿಕೆಯಿದೆ ಎಂದು ಹೇಳಿದರು.
ಫೋನ್, ಕನ್ನಡಕ ಇಡಲು, ಮೊಬೈಲ್ ಚಾರ್ಜಿಂಗ್ ಚಾರ್ಜರ್ ಪಾಯಿಂಟ್ ಟು ಪಾಯಿಂಟ್ ನಲ್ಲಿ ಸಂಚರಿಸುವ ಹೊಸ ಬಸ್ ವ್ಯವಸ್ಥೆಯಿಲ್ಲದೆ. ಕೆಎಸ್ ಆರ್ ಟಿಸಿಗೆ 300, ಬಿಎಂಟಿಸಿಗೆ 145 ಪ್ರಶಸ್ತಿಗಳು ಬಂದಿವೆ. ನಗರ ಸಾರಿಗೆ ವ್ಯವಸ್ಥೆಯಲ್ಲಿ ಇಡೀ ದೇಶದಲ್ಲಿ ಬಿಎಂಟಿಸಿ ಪ್ರಮುಖವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ನಾಲ್ಕು ಮಂದಿಯ ಕುಟುಂಬಕ್ಕೆ ತಲಾ ಒಂದು ಕೋಟಿ ರೂ. ಚೆಕ್ ಅನ್ನು ಸಾಂಕೇತಿಕವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಶಾಸಕ ಪೊನ್ನಣ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತಿತರರು ಭಾಗವಹಿಸಿದ್ದರು.