ಬೆಂಗಳೂರು, ಅ.06 www.bengaluruwire.com : ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಗರ್ಭಿಣಿ ಮಹಿಳೆ ಕುಟುಂಬ ವೈದ್ಯಕೀಯ ವೆಚ್ಚ ಭರಿಸಲು ಸಂಕಷ್ಟದಲ್ಲಿರುವ ವಿಷಯ ತಿಳಿದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವೈಯುಕ್ತಿಕವಾಗಿ 50 ಸಾವಿರ ರೂ. ಸೇರಿದಂತೆ 2.5 ಲಕ್ಷ ರೂ. ಬಿಲ್ ಪಾವತಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆಯ ಮೃತದೇಹವನ್ನು ಸ್ವಗ್ರಾಮವಾದ ಚಿಕ್ಕನಾಯಕನ ಹಳ್ಳಿಯ ಹುಳಿಯಾರುಪಾಳ್ಯಕ್ಕೆ ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಿಸಿದ್ದಾರೆ. ಚಿಕ್ಕ ನಾಯಕನಹಳ್ಳಿ ಹುಳಿಯಾರು ಪಾಳ್ಯದ ಹಣ್ಣಿನ ವ್ಯಾಪಾರಿ ಜಬಿವುಲ್ಲಾ ಎಂಬುವರ ಪತ್ನಿ ಮೂವತ್ತು ವರ್ಷದ ಫಾತಿಮಾಬಿ ಎಂಬುವರು ತಿಪಟೂರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಗರದ ಜೆಪಿ ನಗರದ ಕ್ಷೇಮ ಆಸ್ಪತ್ರೆ ಯಲ್ಲಿ ಕಳೆದ 20 ದಿನಗಳ ಹಿಂದೆ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರ ಅನಾರೋಗ್ಯ ಕಾಣಿಸಿಕೊಂಡು ಅಲ್ಲಿಂದ ಹಾಸನ ಆಸ್ಪತ್ರೆ ಹೋಗಿ ಬಳಿಕ ಅಲ್ಲಿ ಆರೋಗ್ಯ ಸುಧಾರಿಸದ ಕಾರಣ ಪುನಃ ಬೆಂಗಳೂರಿನ ಕ್ಷೇಮ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದರು.
ಈ ಸಂದರ್ಭದಲ್ಲಿ ಅವರ ಆಸ್ಪತ್ರೆ ಚಿಕಿತ್ಸೆ ವೆಚ್ಚ 3.80 ಲಕ್ಷ ರೂ. ಆಗಿದ್ದು ಹಣ್ಣಿನ ವ್ಯಾಪಾರಿ ಜಬಿವುಲ್ಲಾ ಬಳಿ ಕೇವಲ 50 ಸಾವಿರ ರೂ. ಮಾತ್ರ ಹಣವಿತ್ತು. ಹೀಗಾಗಿ ಮೃತದೇಹ ತೆಗೆದುಕೊಂಡು ಹೋಗಲು ಕ್ಷೇಮ ಆಸ್ಪತ್ರೆಗೆ 3 ಲಕ್ಷ ರೂ. ಪಾವತಿಸಬೇಕಿತ್ತು. ಪತ್ನಿಯನ್ನು ಕಳೆದುಕೊಂಡ ಪತಿ ಹಣ ಪಾವತಿ ಮಾಡಲು ಆಗದೆ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸುದ್ದಿಯ ಮಾಹಿತಿ ಪಡೆದ ಸಚಿವರು, ತಕ್ಷಣ ಅಧಿಕಾರಿಗಳ ಮೂಲಕ ಆಸ್ಪತ್ರೆ ಆಡಳಿತ ಮಂಡಳಿ ಅವರ ಜತೆ ಚರ್ಚಿಸಿ ಚಿಕಿತ್ಸಾ ವೆಚ್ಚವನ್ನು 80 ಸಾವಿರ ರೂ. ಕಡಿಮೆ ಮಾಡಿಸಿದರು. ಅಲ್ಲದೆ ಸಚಿವರೇ ಅಧ್ಯಕ್ಷರಾಗಿರುವ ವಕ್ಫ್ ಕೌನ್ಸಿಲ್ ಫಾರ್ ವುಮೆನ್ಸ್ ಮೂಲಕ ಎರಡು ಲಕ್ಷ ರೂ. ಹಾಗೂ ವೈಯಕ್ತಿಕ ವಾಗಿ 50 ಸಾವಿರ ರೂ.ಪಾವತಿ ಮಾಡಿದರು. ಜೊತೆಗೆ ಆ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ಸಹ ವ್ಯವಸ್ಥೆ ಮಾಡಿಸಿದರು.
ಹಾಸನದಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿ ಎಂದಾಗ ಆಂಬುಲೆನ್ಸ್ ಚಾಲಕ ಜೆಪಿ ನಗರದ ಆಸ್ಪತ್ರೆ ಗೆ ಕರೆತಂದು ದಾಖಲು ಮಾಡಿದ್ದ, ಅಲ್ಲಿ ಚಿಕಿತ್ಸೆ ವೆಚ್ಚ ಪಾವತಿಸಲು ಆಗಿರಲಿಲ್ಲ. ತಾಯಿ ಅನಾರೋಗ್ಯದ ನಡುವೆಯೇ ಮಗು ನೋಡಲು ಹಂಬಲಿಸಿ ಮಗುವನ್ನು ಅಪ್ಪಿಕೊಂಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದ ಸಚಿವರು, ವಿಶೇಷ ಪ್ರಕರಣ ಎಂದು ಭಾವಿಸಿ ಈ ನೆರವು ಕಲ್ಪಿಸಿದ್ದಾರೆ. ಸಚಿವರ ಸಂದರ್ಭೋಚಿತ ನೆರವಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.