ಬೆಂಗಳೂರು, ಅ.6 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗರದಲ್ಲಿರುವ 31 ಖಾಸಗಿ ಆಸ್ಪತ್ರೆಗಳು ಸಿ.ಜಿ.ಹೆಚ್.ಎಸ್ (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು- CGHS) ದರದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಇದರಿಂದ ಖಾಯಿಲೆ ಬಂದ ಅವರು ಹಾಗೂ ಅವರ ಕುಟುಂಬದವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘವು ಆರೋಪಿಸಿದೆ.
ಈ ಆಸ್ಪತ್ರೆಗಳು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಸೂಕ್ತ ರೀತಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಪಾಲಿಕೆ ಆರೋಗ್ಯ ಇಲಾಖೆ ವಿಶೇಷ ಆಯುಕ್ತರಾದ ಡಾ.ತ್ರಿಲೋಕ್ ಚಂದ್ರ ಅವರಿಗೆ ಶುಕ್ರವಾರ ಪತ್ರ ಬರೆದಿದೆ.
ರಿಯಾಯಿತಿ ದರದಲ್ಲಿ ಪಾಲಿಕೆ ನೌಕರರು ಹಾಗೂ ನಗರದ ಬಡ ಜನರಿಗೆ ಚಿಕಿತ್ಸೆ ನಿರಾಕರಿಸುತ್ತಿರುವುದರಿಂದ, ಬಿಬಿಎಂಪಿ ಅಧಿಕಾರಿ, ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಖಾಯಿಲೆ ಹಾಗೂ ಶಸ್ತ್ರಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ಅ.5ರಂದು ಪಾಲಿಕೆ ಆರೋಗ್ಯ ಇಲಾಖೆ ವಿಶೇಷ ಆಯುಕ್ತರಿಗೆ ಬರೆದ ಪತ್ರದಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿರುವ ಮಣಿಪಾಲ್ ಗ್ರೂಪಿನ ಐದು ಆಸ್ಪತ್ರೆಗಳು, ನಾಲ್ಕು ಫೋರ್ಟಿಸ್ ಆಸ್ಪತ್ರೆಗಳು, ಮೂರು ಅಪೋಲೊ ಆಸ್ಪತ್ರೆಗಳು, ತಲಾ ಎರಡು ಸೇಂಟ್ ಫಿಲೋಮಿನಾ ಆಸ್ಪತ್ರೆಗಳು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು, ಮಲ್ಯ (ವೈದೇಹಿ) ಆಸ್ಪತ್ರೆ, ಮಾರ್ಥಾಸ್ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಬ್ಯಾಪಿಸ್ಟ್ ಆಸ್ಪತ್ರೆ, ಸೇಂಟ್ ಥೆರೆಸಾ ಆಸ್ಪತ್ರೆ, ಆಸ್ಟರ್ ಆಸ್ಪತ್ರೆ, ಸಕರ ಆಸ್ಪತ್ರೆ, ಮಹಾವೀರ್ ಜೈನ್ ಆಸ್ಪತ್ರೆ, ಶಂಕರ ಕ್ಯಾನ್ಸರ್ ಆಸ್ಪತ್ರೆ, ಸಿಎಸ್ ಐ ಆಸ್ಪತ್ರೆ, ನಾರಾಯಣ ಹೃದಯಾಲಯ, ವೆಗಾಸ್ ಆಸ್ಪತ್ರೆ ಮತ್ತು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗಳು ಸೇರಿದಂತೆ ಒಟ್ಟು 31 ಖಾಸಗಿ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಅಮೃತ್ ರಾಜ್ ಆರೋಪಿಸಿದ್ದಾರೆ.
“ನಗರದ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಆಸ್ಪತ್ರೆಗಳು ಸೇರಿದಂತೆ 31 ಆಸ್ಪತ್ರೆಗಳು ಬಡಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿ ಬಿಬಿಎಂಪಿ ವತಿಯಿಂದ ಲಕ್ಷಾಂತರ ರೂ. ತೆರಿಗೆಯನ್ನು ಪಾವತಿಸದೆ, ಕೇವಲ ಸೇವಾ ಶುಲ್ಕವನ್ನು ಮಾತ್ರ ಪಾವತಿ ಮಾಡಿ ಪಾಲಿಕೆಗೆ ಲಕ್ಷಾಂತರ ರೂ. ಗಳನ್ನು ವಂಚಿಸುತ್ತಿದ್ದಾರೆ. ಆದ್ದರಿಂದ ಈ ಕೆಳಕಂಡ ಖಾಸಗಿ ಆಸ್ಪತ್ರೆಯವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ, ನೌಕರರು ಮತ್ತು ಕುಟುಂಬ ಸದಸ್ಯರಿಗೆ ಚಿಕಿತ್ಸೆ ನೀಡಲು ಒಪ್ಪದಿದ್ದಲ್ಲಿ ಆ ಆಸ್ಪತ್ರೆಗಳ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಿ” ಎಂದು ಸಂಘದ ಅಧ್ಯಕ್ಷರು ಪಾಲಿಕೆ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರಿಗೆ ಮನವಿ ಮಾಡಿದ್ದಾರೆ.