ಬೆಂಗಳೂರು, ಅ.4 www.bengaluruwire.com : ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಬಳಿಕ ಪಾಲಿಕೆಯು ಬೀದಿನಾಯಿ ಸಮೀಕ್ಷೆಯನ್ನು ಕೈಗೊಂಡಿದ್ದು ಒಟ್ಟಾರೆ 2,79,335 ಬೀದಿ ನಾಯಿಗಳು ಇರುವುದನ್ನು ಪತ್ತೆಹಚ್ಚಿದೆ.
ನಾಯಿಗಳ ಸಮೀಕ್ಷೆ ನಡೆಸಿರುವ ಬಗ್ಗೆ ಮಂಗಳವಾರ ವರದಿ ಬಿಡುಗಡೆಯ ಕುರಿತು ಬಿಬಿಎಂಪಿ ಆರೋಗ್ಯ ಇಲಾಖೆ ಹಾಗೂ ಪಶುಪಾಲನಾ ವಿಭಾಗದ ವಿಶೇಷ ಆಯುಕ್ತರಾದ ತ್ರಿಲೋಕ್ ಚಂದ್ರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಬಿಬಿಎಂಪಿಯ ಪಶುಪಾಲನಾ ವಿಭಾಗ ಹಾಗೂ ಕೇಂದ್ರ ಸರ್ಕಾರದ ಐಸಿಎಆರ್-ನಿವೇದಿ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಕೆ.ಪಿ.ಸುರೇಶ್ ಅವರ ನೇತೃತ್ವದಲ್ಲಿ ಈ ಸಮೀಕ್ಷೆಯನ್ನು ಒಟ್ಟು 100 ಸಮೀಕ್ಷೆದಾರರು ಹಾಗೂ 15 ಮೇಲ್ವಿಚಾರಕರನ್ನು ಒಳಗೊಂಡ 50 ತಂಡಗಳು ಜು.11ರಿಂದ ಆ.8ರವರೆಗೆ ಒಟ್ಟು 12 ದಿನಗಳಲ್ಲಿ ಬೀದಿ ನಾಯಿ ಸಮೀಕ್ಷೆಯನ್ನು ಕೈಗೊಳ್ಳಲಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಸಮೀಕ್ಷೆಯ ವೇಳೆ ನಾಯಿಗಳ ಫೊಟೊ, ಸ್ಥಳದ ಮಾಹಿತಿಯನ್ನು ರಾಂಡಮ್ ಆಗಿ ಸ್ಯಾಂಪಲ್ ಗಳನ್ನು ಪಡೆದು ವಿಶೇಷ ಆಪ್ ಗಳಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ.


ಪಾಲಿಕೆಯ 8 ವಲಯಗಳಲ್ಲಿ 2019ನೇ ಸಾಲಿನ ಬೀದಿನಾಯಿ ಸರ್ವೆಯಲ್ಲಿ 3.10 ಲಕ್ಷ ಬೀದಿನಾಯಿಗಳಿರುವುದಾಗಿ ಅಂದಾಜಿಸಲಾಗಿತ್ತು. ಅವುಗಳಲ್ಲಿ ಶೇ.51.16ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ (ABC)ಯಾಗಿರುವುದಾಗಿ ಅಂದಾಜಿಸಲಾಗಿತ್ತು. ಆದರೆ ಹಾಲಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಒಟ್ಟು ಶೇ.71.85ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯಾಗಿದ್ದು, ಒಟ್ಟಾರೆಯಾಗಿ ಶೇ.20ರಷ್ಟು ಎಬಿಸಿ ಶಸ್ತ್ರಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿದೆ. ಬೀದಿನಾಯಿ ಮರಿಗಳ ಸಂಖ್ಯೆಯು ಕಡಿಮೆಯಾಗಿದೆ. ಈ ಸಮೀಕ್ಷೆಗೆ ಒಟ್ಟಾರೆ 10 ಲಕ್ಷ ರೂ. ವೆಚ್ಚವಾಗಿದೆ ಎಂದು ತ್ರಿಲೋಕ್ ಚಂದ್ರ ಹೇಳಿದರು.

ಪ್ರತಿ ವರ್ಷ ಎಬಿಸಿ ಆಪರೇಷನ್ ಗೆ 6-7 ಕೋಟಿ ರೂ. ವೆಚ್ಚವಾಗುತ್ತಿದೆ. ನಗರದಲ್ಲಿ ಕಳೆದ ವರ್ಷದಿಂದ ನಾಯಿ ಕಡಿತ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ 15 ಸಾವಿರ ನಾಯಿಕಡಿತ ಪ್ರಕರಣಗಳು ಕಂಡು ಬಂದಿದೆ.
ನಗರದಲ್ಲಿ ಪಾಲಿಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಯಲ್ಲಿ ರೇಬಿಸ್ ರೋಗ ನಿರೋಧಕ ಚುಚ್ಚುಮದ್ದು ಲಭ್ಯವಿದೆ. ಮುಂದಿನ ದಿನಗಳಲ್ಲಿ ನಮ್ಮ ಕ್ಲಿನಿಕ್‌ನಲ್ಲಿ ಫ್ರಿಡ್ಜ್ ವ್ಯವಸ್ಥೆ ಮಾಡಿದ ಮೇಲೆ ಅಲ್ಲಿಯೂ ರೇಬಿಸ್ ರೋಗ ನಿರೋಧಕ ಇಂಜಕ್ಷನ್ ಸಿಗಲಿದೆ ಎಂದು ತ್ರಿಲೋಕ್ ಚಂದ್ರ ಹೇಳಿದರು.
ನಾಯಿಗಳ ಸಂಖ್ಯೆ ಸಮೀಕ್ಷೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ನಾಯಿ ಸರ್ವೆಗೆ ಸಿಎಸ್ ಆರ್ ಅನುದಾನದಡಿಯಲ್ಲಿ ದ್ರೋಣ್ ಮೂಲಕ ಸಮೀಕ್ಷೆ ಮಾಡಲಾಗಿದೆ. ಈ ಸರ್ವೇ ಆಧಾರದ ಮೇಲೆ ಸದ್ಯದಲ್ಲೇ ಬೀದಿನಾಯಿ ರೇಬಿಸ್ ಚುಚ್ಚುಮದ್ದು ಹಾಗೂ ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲು ಟೆಂಡರ್ ಸದ್ಯದಲ್ಲೇ ಕರೆಯುತ್ತೇವೆ. ಬೀದಿನಾಯಿಗಳಿಗೆ 200 ಮೈಕ್ರೋಚಿಪ್ ಅನ್ನು ಪೈಲೆಟ್ ಆಧಾರದ ಮೇಲೆ ಪಶುಪಾಲನಾ ಕಾಲೇಜಿನಿಂದ ಅಳವಡಿಸುವ ಕೆಲಸ ಆಗುತ್ತಿದೆ, ಜಿಯೋ ಟ್ಯಾಕಿಂಗ್ ಕಾಲರ್ ಆಧಾರಿತ ತಂತ್ರಜ್ಞಾನವನ್ನು 200 ನಾಯಿಗಳಿಗೆ ಹಾಕಲು ನಿರ್ಧರಿಸಿದ್ದೇವೆ. ಇದರ ಸಾಧಕ ಭಾದಕಗಳನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸಾಕು ನಾಯಿ ಲೈಸೆನ್ಸ್ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸಮೀಕ್ಷಾ ವರದಿಯು ಶೇ.98ರಷ್ಟು ನಿಖರ :
ಈ ಸಮೀಕ್ಷಾ ವರದಿಯು ಶೇ.98ರಷ್ಟು ನಿಖರವಾಗಿದೆ. ಪ್ರತಿ ಬಿಬಿಎಂಪಿಯನ್ನು 0.5 ಚ.ಕಿ.ಮೀ ವ್ಯಾಪ್ತಿಯ 6850 ಮೈಕ್ರೋ ಜೋನ್ ಗಳನ್ನಾಗಿ ವಿಂಗಡಣೆ ಮಾಡಿದೆವು. ಅದರಲ್ಲಿ ಶೇ.20ರಷ್ಟು ರ್ಯಾಂಡಮ್ ಸ್ಯಾಂಪಲ್ ಗಳನ್ನು ಅಂದರೆ 1,360 ಮೈಕ್ರೋ ಜೋನ್ ಗಳನ್ನು ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿದೆ. ರೀ-ರೀ ಸೈಟ್ ವಿಧಾನದಲ್ಲಿ ಒಂದೇ ಬಾರಿಗೆ ಎರಡು ಸಲ ಶ್ವಾನ ಕಂಡು ಬಂದ ಫೋಟೊಗಳನ್ನು ದತ್ತಾಂಶ ತೆಗೆದುಕೊಂಡು, ವಿಡಿಯೋ ಮಾಡಿ ವಿಶ್ಲೇಷಿಸಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಬೀದಿನಾಯಿ ಸರ್ವೆ ಕೈಗೊಂಡ ತಂಡದ ಪ್ರಧಾನ ವಿಜ್ಞಾನಿ ಡಾ.ಕೆ.ಪಿ.ಸುರೇಶ್ ತಿಳಿಸಿದ್ದಾರೆ.
ನಗರದ ಎಂಟು ವಲಯಗಳ ಪೈಕಿ ಮಹದೇವಪುರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚು :
ನಗರದಲ್ಲಿರುವ ಒಟ್ಟಾರೆ 2,79,335 ನಾಯಿಗಳಿದ್ದು ಅವುಗಳ ಪೈಕಿ 1,65,341 ಗಂಡು, 82,757 ಹೆಣ್ಣು ನಾಯಿಗಳು ಹಾಗೂ ಗುರುತಿಸಲು ಸಾಧ್ಯವಾಗದ ಪ್ರಕರಣಗಳಲ್ಲಿ 31,237 ನಾಯಿಗಳಿವೆ. 8 ವಲಯಗಳ ಪೈಕಿ ಮಹದೇವಪುರದಲ್ಲಿ 58,371 ನಾಯಿಗಳಿದ್ದು ಇಡೀ ಪಾಲಿಕೆಯಲ್ಲಿ ಅತಿಹೆಚ್ಚು ಬೀದಿ ನಾಯಿಗಳನ್ನು ಹೊಂದಿದ ವಲಯವಾಗಿದೆ. ಇನ್ನು ಆರ್.ಆರ್.ನಗರ ವಲಯದಲ್ಲಿ 41,266, ಬೊಮ್ಮನಹಳ್ಳಿ 39,183, ಪೂರ್ವ ವಲಯದಲ್ಲಿ 37,685, ಯಲಹಂಕ 36,343, ದಕ್ಷಿಣ 23,241, ಪಶ್ಚಿಮ 22,025 ಹಾಗೂ ದಾಸರಹಳ್ಳಿ ವಲಯದಲ್ಲಿ 21,221 ಬೀದಿ ನಾಯಿಗಳಿವೆ ಎಂದು ಅವರು ಹೇಳಿದ್ದಾರೆ.
ಐಸಿಎಆರ್-ನಿವೇದಿ ಸಂಸ್ಥೆಯ ನಿರ್ದೇಶಕರಾದ ಡಾ. ಬಲದೇವ್ ರಾಜ್ ಗುಲಾಟಿ ಮಾತನಾಡಿ, ಬೀದಿನಾಯಿಗಳ ಕಡಿತ ಔಷಧಿಯು ಪ್ರತಿ ಆರೋಗ್ಯ ಕೇಂದ್ರದಲ್ಲಿ ಇಡಬೇಕು. ಬೆಂಗಳೂರು ರಾಜ್ಯದ ಟೈರ್-1 ಸಿಟಿಯಾಗಿದ್ದು ರೇಬಿಸ್ ಮುಕ್ತ ನಗರವಾಗಬೇಕು. ರೇಬಿಸ್ ಬಗ್ಗೆ ವರದಿ ಮಾಡುವ ವ್ಯವಸ್ಥೆ ಮತ್ತಷ್ಟು ಬಲಪಡಿಸಬೇಕಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ.ಕವಿಕುಮಾರ್, ಐಸಿಎಆರ್-ನಿವೇದಿ ಸಂಸ್ಥೆಯ ಪ್ರಿನಿಪಾಲ್ ಸೈಂಟಿಸ್ಟ್ ಡಾ.ದಿವಾಕರ್ ಹೇಮಾದ್ರಿ ಅವರು ಉಪಸ್ಥಿತರಿದ್ದರು.