ಬೆಂಗಳೂರು, ಅ.2 www.bengaluruwire.com : ಕನ್ನಡದ ಮೊಟ್ಟ ಮೊದಲ ವನ್ಯಜೀವಿ ಸಂಗೀತ ಆಧಾರಿತ ಕನ್ನಡ ಸಾಕ್ಷ್ಯಾಚಿತ್ರ ‘ಕಪ್ಪೆರಾಗ’ಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರುವಾಸಿಯಾದ ಜಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿಯನ್ನು ಈ ಸಾಕ್ಷ್ಯಚಿತ್ರ ಮುಡಿಗೇರಿಸಿಕೊಂಡಿದೆ.
ಇದೊಂದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಕೂಡ ಹೌದು. ಪ್ರಶಾಂತ್ ಎಸ್. ನಾಯ್ಕ ನಿರ್ದೇಶನದ ಕಪ್ಪೆರಾಗ ಸಾಕ್ಷ್ಯಚಿತ್ರವನ್ನು ಕುಂಬಾರ ಕಪ್ಪೆ ನಡವಳಿಕೆ ಕುರಿತು ನಿರ್ಮಾಣ ಆಗಿರುವ ಸಾಕ್ಷ್ಯಚಿತ್ರವಾಗಿದೆ. ‘ಕಪ್ಪೆರಾಗ’ಕ್ಕೆ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವನ್ಯಜೀವಿ ಸಂಗೀತ ಆಧಾರಿತ ಸಾಕ್ಷ್ಯಾಚಿತ್ರ ಇದಾಗಿದೆ.
ಕುಂಬಾರ ಕಪ್ಪೆ ಅತ್ಯಂತ ಸೂಕ್ಷ್ಮ ಮತ್ತು ಬಹುಪಾಲು ನಿಶಾಚರಿ ಜೀವಿಯಾಗಿದೆ. ಆ ಕುಂಬಾರ ಕಪ್ಪೆಯ ಆವಾಸ ಸ್ಥಾನ, ಸಂತಾನೋತ್ಪತ್ತಿ ಪ್ರಕ್ರಿಯೆಗಳು, ಜೀವನ ವಿಧಾನ, ಆಹಾರ ಹೀಗೆ ಎಲ್ಲವೂ ನೀರಿನ ತೊರೆಯಲ್ಲೇ ಸಾಗುತ್ತದೆ. ಇವುಗಳ ನಡವಳಿಕೆ ಮತ್ತಿತರ ವಿಷಯಗಳನ್ನು ಚಿತ್ರೀಕರಿಸಿ, ಕನ್ನಡದ ಗೀತೆಯ ಮೂಲಕ ಸಾಕ್ಷ್ಯಾಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ‘ಕಪ್ಪೆರಾಗ’ ಡಾಕ್ಯುಮೆಂಟ್ರಿಯ ನಿರ್ದೇಶಕ ಪ್ರಶಾಂತ್ ಎಸ್.ನಾಯಕ ತಿಳಿಸಿದ್ದಾರೆ.
ಸಾವಿರಾರು ವರ್ಷಗಳಿಂದ ನಮ್ಮ ಭಾರತ ದೇಶದ ಸಂಗೀತ, ಸಾಹಿತ್ಯ ಮತ್ತು ವನ್ಯಜೀವಿಗಳ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ವರ್ಷ ಇವೆಲ್ಲವುಗಳ ಸಂಯೋಜನೆಯು ವಿಶ್ವ ಪ್ರತಿಷ್ಠಿತ ಆಸ್ಕರ್‌ಗೆ ಸಮಾನವಾದ ಪ್ರಶಸ್ತಿಯಾದ ಜಾಕ್ಸನ್ ವೈಲ್ಡ್ ಮೀಡಿಯಾ ಅವಾರ್ಡ್ ಅನ್ನು ಪಡೆದುಕೊಂಡಿದೆ ಎಂದು ಎಕ್ಸ್ ಜಾಲತಾಣದಲ್ಲಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಗೌತಮ್ ಶಂಕರ್ ಈ ಡಾಕ್ಯುಮೆಂಟರಿ ನಿರ್ಮಿಸಿದ್ದರೆ, ಅಶ್ವಿನ್.ಪಿ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಹುಬ್ಬಳ್ಳಿಯ ವಿಕಾಸ್ ಪಾಟೀಲ್ ಕೈಗೊಂಡಿದ್ದರು. ಆಗಸ್ಟ್ ತಿಂಗಳಲ್ಲೇ ಈ ಚಿತ್ರದ ಟ್ರೈಲರ್ ಅನ್ನು ಯೂಟ್ಯೂಬ್ (Youtubue) ನಲ್ಲಿ ಚಿತ್ರ ತಂಡ ಹಂಚಿಕೊಂಡಿತ್ತು.
ಕುಂಬಾರ ಕಪ್ಪೆಯ ಆ ನಡವಳಿಕೆ ಚಿತ್ರ ನಿರ್ಮಾಣಕ್ಕೆ ನಾಂದಿಯಾಯ್ತು :
“ಕುಂಬಾರ ಕಪ್ಪೆಯ ಜೀವನಕ್ರಮವೇ ವಿಶಿಷ್ಟವಾದದ್ದು. ಮಳೆಕಾಡುಗಳಲ್ಲಿ ಕಾಣಸಿಗುವ ಈ ಅಪರೂಪದ ಕಪ್ಪೆ ರಾತ್ರಿಯ ವೇಳೆಯಲ್ಲಿ ಹೆಚ್ಚಾಗಿ ಚಟುವಟಿಕೆ ನಡೆಸುವುದು. ಹೆಣ್ಣು ಕಪ್ಪೆ ಸಂತಾನೋತ್ಪತ್ತಿ ಪ್ರಕ್ರಿಯೆ ಶುರು ಮಾಡಿದಾಗ, ಗಂಡು ಕಪ್ಪೆಯು ಆ ಮೊಟ್ಟೆಗಳನ್ನು ಮಳೆಗಾಲದಲ್ಲಿ ಹರಿಯುವ ತೊರೆಯ ಅಂಚಿನಲ್ಲಿ ಸಿಗುವ ಮಣ್ಣನ್ನು ಮೊಟ್ಟೆಯೊಳಗೆ ಕಟ್ಟಿಟ್ಟು ರಕ್ಷಿಸುವ ಕೆಲಸ ಮಾಡುತ್ತದೆ. ಇದೊಂದು ಅನನ್ಯ ಪ್ರಕ್ರಿಯೆ. ರಾತ್ರಿ ವೇಳೆಯೇ ಈ ಪ್ರಕ್ರಿಯೆ ನಡೆಯುವುದರಿಂದ ‘ಕಪ್ಪೆರಾಗ’ ಚಿತ್ರತಂಡ ಮಳೆಕಾಡಿನ ದಟ್ಟ ಅಡವಿಯಲ್ಲಿ ವಿವಿಧ ಜಾತಿಯ ಕಪ್ಪೆಗಳ ಮಧ್ಯೆ ಕುಂಬಾರ ಕಪ್ಪೆಯ ಜಾಡನ್ನು ಹಿಡಿದು ಚಿತ್ರೀಕರಿಸಿ ಈ ಸಂಗೀತ ಆಧಾರಿತ ಚಿತ್ರವನ್ನು ನಿರ್ಮಿಸುವ ಸವಾಲನ್ನು ಎದುರಿಸಿ ಯಶಸ್ವಿಯಾಗಿತ್ತು” ಎನ್ನುವುದನ್ನು ಹೇಳಲು ಚಿತ್ರ ನಿರ್ದೇಶಕ ಪ್ರಶಾಂತ್ ಮರೆತಿಲ್ಲ.