ಬೆಂಗಳೂರು, ಅ.02 www.bengaluruwire.com : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರತಿ ವರ್ಷ ಗಾಂಧಿ ಜಯಂತಿ ದಿನದಂದು ನೀಡುವ ‘ಗಾಂಧಿ ಗ್ರಾಮ ಪುರಸ್ಕಾರ’ವನ್ನು 233 ಗ್ರಾಮ ಪಂಚಾಯಿತಿಗಳಿಗೆ, 4 ಗ್ರಾಮ ಪಂಚಾಯಿತಿಗಳಿಗೆ ವಿಶೇಷ ‘ಗಾಂಧಿ ಗ್ರಾಮ ಪುರಸ್ಕಾರ ಹಾಗೂ 15 ಗ್ರಾಮ ಪಂಚಾಯಿತಿಗಳಿಗೆ, ‘ಸ್ವಚ್ಛ ಸರ್ವೇಕ್ಷಣ ಗ್ರಾಮ 2023’ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಾಡಿದರು.

ವಿಧಾನಸೌಧದ ಬ್ಯಾಂಕ್ವಟ್‌ಹಾಲ್ ಸಭಾಂಗಣದಲ್ಲಿ ಇಂದು ನಡೆದ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ವಚ್ಛ ಸರ್ವೇಕ್ಷಣ ಗ್ರಾಮಿಣ 2023 ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪ್ರಮಾಣಪತ್ರ, ಸ್ಮರಣಿಕೆ ಹಾಗೂ 5 ರೂ. ಲಕ್ಷ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು.

ಇದಕ್ಕೂ ಮುನ್ನ ಮಹಾತ್ಮಾಗಾಂಧಿ ಜಯಂತಿ ಅಂಗವಾಗಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ಮುಖ್ಯಮಂತ್ರಿಗಳು ಗೌರವ ಸಲ್ಲಿಸಿದರು.
2020-2021 ಮತ್ತು 2021-22ನೆ ಸಾಲುಗಳಲ್ಲಿ ಸತತವಾಗಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು 2022-23 ನೇ ಸಾಲಿನ ಪರಿಶೀಲನೆಯಲ್ಲಿ ಪುನಃ ಮೊದಲನೆಯ ಸ್ಥಾನ ಪಡೆದ ಗ್ರಾಮ ಪಂಚಾಯಿತಿಗಳಿಗೆ ವಿಶೇಷ ‘ಗಾಂಧಿ ಗ್ರಾಮ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳಾದ ಗೋವಿಂದರಾಜು, ನಸೀರ್ ಅಹ್ಮದ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
