ಬೆಂಗಳೂರು, ಸೆ.30 www.bengaluruwire.com : ಭಾರತದಲ್ಲಿ ಈ ವರ್ಷ ಜನವರಿಯಿಂದ ಸೆಪ್ಟೆಂಬರ್ 28 ರವರೆಗೆ 146 ಹುಲಿ ಸಾವುಗಳು ದಾಖಲಾಗಿವೆ, ಇದು 2012 ರ ನಂತರದ ಅತ್ಯಧಿಕ ಅಂಕಿ ಅಂಶವಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಅಂಕಿಅಂಶಗಳು ಬಹಿರಂಗಪಡಿಸಿದೆ.
ಈ ದತ್ತಾಂಶವು ಹುಲಿಗಳ ಸಂಖ್ಯೆಯನ್ನು ರಕ್ಷಿಸುವ ಭಾರತದ ಪ್ರಯತ್ನಗಳಲ್ಲಿ ಬಹಳ ಗಂಭೀರ ವಿಚಾರವಾಗಿದೆ. ಈ ವರ್ಷ ಅತಿ ಹೆಚ್ಚು ಹುಲಿ ಸಾವುಗಳು ಮಧ್ಯಪ್ರದೇಶದಿಂದ (34) ವರದಿಯಾಗಿದ್ದು, ಮಹಾರಾಷ್ಟ್ರ (32) ನಂತರದ ಸ್ಥಾನದಲ್ಲಿದೆ. 146 ಹುಲಿ ಸಾವುಗಳಲ್ಲಿ 24 ಮರಿಗಳು. ಇದು ಹುಲಿ ಜನಸಂಖ್ಯೆಯ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಉತ್ತರಾಖಂಡದಲ್ಲಿ ಸುಮಾರು 17, ಅಸ್ಸಾಂನಿಂದ 11, ಕರ್ನಾಟಕದಿಂದ 9 ಮತ್ತು ರಾಜಸ್ಥಾನದಿಂದ ಐದು ಹುಲಿಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಅಲ್ಲದೆ, ಈ ಅವಧಿಯಲ್ಲಿ ದೇಶದ ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 70 ಸಾವುಗಳು ವರದಿಯಾಗಿವೆ.
ದೇಶದಲ್ಲಿ 2018ರಲ್ಲಿ ಹುಲಿಗಣತಿ ಅನ್ವಯ 2967 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1411 ಇತ್ತು. ಕಾಲಕ್ರಮೇಣ ರಾಷ್ಟ್ರದಲ್ಲಿ ಹುಲಿ ಸಂರಕ್ಷಣೆ ನಿಟ್ಟಿನಲ್ಲಿ ಹಲವು ವ್ಯಾಪಕ ಕ್ರಮಗಳನ್ನು ಕೈಗೊಂಡ ಪರಿಣಾಮ ಅವುಗಳ ಸಂಖ್ಯೆಯಲ್ಲಿ ಏರಿಕೆಯಾಗಿವೆ. ಆದರೆ 2023ರಲ್ಲಿ ಕೇವಲ 9 ತಿಂಗಳಲ್ಲಿ ಹುಲಿಗಳು ಮೃತಪಟ್ಟಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಹುಲಿಗಳ ಕಳ್ಳಬೇಟೆ ಪ್ರಕರಣಗಳು ಎಗ್ಗಿಲ್ಲದೆ ಹೆಚ್ಚಾಗುತ್ತಿದೆ :
“ದೇಶಾದ್ಯಂತ 11 ವರ್ಷದಲ್ಲೇ ಅತಿ ಹೆಚ್ಚು ಹುಲಿಗಳ ಸಾವಾಗಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ಈ ಬಾರಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಕಡೆ ಹುಲಿಗಳು ಹೆಚ್ಚಾಗಿ ಮೃತಪಟ್ಟಿವೆ. ಹುಲಿಗಳ ಮೂಳೆ, ಉಗುರು, ಚರ್ಮ, ಅದರ ವಿವಿಧ ಅಂಗಾಂಗಳಿಗಾಗಿ ಕಳ್ಳಬೇಟೆಯಾಡಿ ಹೆಚ್ಚು ಹೆಚ್ಚು ಸಾಯಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಹುಲಿ ನುಗ್ಗಿದಾಗ ಅವುಗಳನ್ನು ಹಿಡಿದು ಮೃಗಾಲಯ ಅಥವಾ ವನ್ಯಜೀವಿ ಪುನಶ್ಚೇತನ ಕೇಂದ್ರಕ್ಕೆ ಬಿಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಕಾಡಿನಲ್ಲಿ ಹುಲಿಗಳ ಸ್ವಚ್ಛಂದ ಸಂಚಾರ, ಸಂತಾನೋತ್ಪತ್ತಿ ಪ್ರಕ್ರಿಯೆಗೆ ತೊಡಕಾಗಿ ಹುಲಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತಿದೆ” ಎಂದು ಕರ್ನಾಟಕ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಜೋಸೆಫ್ ಹೂವರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಇತ್ತೀಚೆಗೆ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 34 ದಿನದಲ್ಲಿ 12 ಹುಲಿಗಳು ಸತ್ತಿವೆ. ಅವುಗಳಲ್ಲಿ 2 ತಾಯಿ ಹುಲಿಗಳನ್ನು ಬೇಟೆಗಾರರು ಕೊಂದಿದ್ದರಿಂದ, ಊಟ ಇಲ್ಲದೆ 6 ಮರಿ ಹುಲಿಗಳು ಸಾವನ್ನಪ್ಪಿವೆ. ಎರಡು ಹುಲಿಗೆ ವಿಷ ಹಾಕಿದ್ದಾರೆ. ಇನ್ನೆರಡು ಹುಲಿಗಳು ಕಾದಾಡಿ ಸಾವನ್ನಪ್ಪಿವೆ. ಇದು ಕೂಡ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ. ಈ ಸಂಖ್ಯೆ ಇನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತನಿಖಾ ಹಂತದಲ್ಲಿರುವುದರಿಂದ ಇನ್ನೂ ಗಣನೆಗೆ ತೆಗೆದುಕೊಂಡಿಲ್ಲ” ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ 2012 ರಲ್ಲಿ 88, 2013 ರಲ್ಲಿ 68, 2014 ರಲ್ಲಿ 78, 2015 ರಲ್ಲಿ 82, 2016 ರಲ್ಲಿ 121, 2017 ರಲ್ಲಿ 117, 2018 ರಲ್ಲಿ 101, 2019 ರಲ್ಲಿ 96, 2020 ರಲ್ಲಿ 106, 2021 ರಲ್ಲಿ 127 ಹಾಗೂ 2022 ರಲ್ಲಿ 121 ಹುಲಿ ಮರಣಗಳಾಗಿರುವುದನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವರದಿ ಮಾಡಿದೆ. ಎನ್ ಟಿಸಿಎ ಪ್ರಕಾರ, ಹುಲಿಗಳ ಸಾವಿನ ಕಾರಣಗಳು ನೈಸರ್ಗಿಕ ಅಥವಾ ಅಸ್ವಾಭಾವಿಕವಾಗಿರಬಹುದು. ಅಸ್ವಾಭಾವಿಕ ಕಾರಣಗಳು ಅಪಘಾತಗಳಿಂದಾಗುವ ಸಾವುಗಳು, ಘರ್ಷಣೆಯಲ್ಲಿ ಹುಲಿಗಳನ್ನು ಹೊರಹಾಕಿರುವ ಸಂದರ್ಭಗಳನ್ನು ಉಲ್ಲೇಖಿಸಿದೆ. ಇನ್ನು ಹುಲಿ ಬೇಟೆಯಾಡಿರುವ ಪ್ರಕರಣಗಳದ್ದು ಪ್ರತ್ಯೇಕ ವರ್ಗವಾಗಿಸಿದೆ.
ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಸರ್ಕಾರಗಳು :
“ದೇಶದಲ್ಲಿ ಈ ವರ್ಷ 9 ತಿಂಗಳಲ್ಲಿ ಹುಲಿಗಳ ಸಾವು, ಕಳ್ಳಬೇಟೆ, ನೈಸರ್ಗಿಕ ಸಾವು ಮತ್ತಿತರ ಕಾರಣದಿಂದ ಹೆಚ್ಚಾಗಿದೆ. ಕಾಡು ಸಾಂದ್ರತೆ ಕಡಿಮೆಯಾಗುತ್ತಿರುವುದು. ಕರೋನಾ ನಂತರ ಹುಲಿ ಸಂರಕ್ಷಣೆ ಬಗ್ಗೆ ರಾಜ್ಯಗಳು ವನ್ಯಜೀವಿ ಸಂರಕ್ಷಣೆ ಬಜೆಟ್ ಮೀಸಲಿಡುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅರಣ್ಯ ಇಲಾಖೆಗಳು ವನ್ಯಜೀವಿ ಸಂರಕ್ಷಣೆ ಹೆಚ್ಚು ಗಮನ ಬಿಟ್ಟು ಕಾಡಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಕಾಡಿನ ಮಧ್ಯಭಾಗದ ತನಕ ಪ್ರವಾಸೋದ್ಯಮ ಹೆಸರಲ್ಲಿ ಬಿಡುತ್ತಿರುವ ಕಾರಣ ಹುಲಿಗಳ ಖಾಸಗಿತನ, ಕಾಡಿನ ಸಂಚಾರಕ್ಕೂ ತೊಡಕಾಗಿದೆ” ಎಂದು ಹೇಳುತ್ತಾರೆ ವನ್ಯಜೀವಿ ಕಾರ್ಯಕರ್ತ ರಾಜೇಶ್.
ವನ್ಯಜೀವಿಗಳ ಸಂಘಟಿತ ಕಳ್ಳಬೇಟೆ ವ್ಯವಸ್ಥಿತವಾಗಿ ಹೆಚ್ಚಾಗಿರುವುದು ಹುಲಿಗಳ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಅಂಚಿನ ಜನರ ಅಭಿವೃದ್ಧಿಯನ್ನು ಆಯಾ ಸರ್ಕಾರಗಳು ಕಲ್ಪಿಸಬೇಕು. ಇದರಿಂದ ಸ್ಥಳೀಯರಿಂದ ಹುಲಿಗಳ ಕಳ್ಳಬೇಟೆ ನಿಯಂತ್ರಿಸಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.