ನವದೆಹಲಿ, ಸೆ.29 www.bengaluruwire.com : ದೇಶದ ವಿವಿಧ ರಾಜ್ಯಗಳಲ್ಲಿ ಪ್ರಸ್ತುತ 23 ಅಣುವಿದ್ಯುತ್ ಸ್ಥಾವರಗಳಿದೆ. 2031ರ ಇಸವಿ ವೇಳೆಗೆ ಈ ವರ್ಷ ಆರಂಭವಾಗಿರುವ ಗುಜರಾತ್ ನ ಕಾಕ್ರಾಪಾರ್ ಅಣುವಿದ್ಯುತ್ ಸ್ಥಾವರ ಘಟಕ ಸ್ಥಾಪನೆ ಸೇರಿದಂತೆ ಹೊಸದಾಗಿ 15,700 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ 21 ಅಣುವಿದ್ಯುತ್ ಉತ್ಪಾದನೆಗೆ ಕೇಂದ್ರ ಅಣುಶಕ್ತಿ ಇಲಾಖೆ ಯೋಜನೆ ರೂಪಿಸಿದೆ.
2031ನೇ ಇಸವಿ ವೇಳೆಗೆ ಹೊಸದಾಗಿ 21 ಆಟೊಮಿಕ್ ವಿದ್ಯುತ್ ಉತ್ಪಾದನಾ ಯೂನಿಟ್ ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜಿಸಿದ್ದು, ಆ ಪೈಕಿ ಗುಜರಾತ್ ಕಾಕ್ರಾಪಾರ್ ನಲ್ಲಿ 30 ಜೂನ್ 2023ರಂದು 700 ಮೆಗಾವ್ಯಾಟ್ ಸಾಮರ್ಥ್ಯದ ಅಣುಶಕ್ತಿ ವಿದ್ಯುತ್ ವಾಣಿಜ್ಯ ಉತ್ಪಾದನೆ ಆರಂಭವಾಗಿದೆ. ಕರ್ನಾಟಕದ ಕೈಗಾದಲ್ಲಿ 1,400 ಮೆಗಾವ್ಯಾಟ್ ಸಾಮರ್ಥ್ಯದ 5 ಮತ್ತು 6ನೇ ಯೂನಿಟ್ ಸ್ಥಾಪನೆ ಕೂಡ ಈ ಯೋಜನೆಯಲ್ಲಿದೆ.
ಲೋಕಸಭೆಯ ಜು.26ರಂದು ನಡೆದ ಸಂಸತ್ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಐದು ಪ್ರಶ್ನೆಗಳಿಗೆ ಕೇಂದ್ರ ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಹಾಗೂ ಪ್ರಧಾನಮಂತ್ರಿಗಳ ಕಚೇರಿ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಲಿಖಿತ ಉತ್ತರ ನೀಡಿದ್ದರು.
2022-23ನೇ ಸಾಲಿನವರೆಗೆ ದೇಶದಲ್ಲಿ ಅಣುಶಕ್ತಿ ಮೂಲ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟಾರೆ 416 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. ಆ ಪೈಕಿ ಅಣುಶಕ್ತಿ ಇಂಧನ ಮೂಲದಿಂದ ದೇಶದ 6 ರಾಜ್ಯಗಳ 23 ಅಣುಶಕ್ತಿ ಸ್ಥಾವರಗಳು 7,480 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
1969ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದ ತಾರಾಪುರದಲ್ಲಿ 160 ಮೆಗಾ ವ್ಯಾಟ್ ಸಾಮರ್ಥ್ಯದ ನ್ಯೂಕ್ಲಿಯರ್ ಪ್ಲಾಂಟ್ ಅನ್ನು ಶುರು ಮಾಡಲಾಯಿತು. ಅಲ್ಲಿಂದ 2023ರ ಇಸವಿವರೆಗೆ ಮಹಾರಾಷ್ಟ್ರ, ರಾಜಸ್ತಾನ, ತಮಿಳುನಾಡು, ಕರ್ನಾಟಕ, ಗುಜರಾತ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೇಂದ್ರ ಅಣುಶಕ್ತಿ ಇಲಾಖೆ ನ್ಯೂಕ್ಲಿಯರ್ ಪ್ಲಾಂಟ್ ಗಳನ್ನು ಸ್ಥಾಪಿಸಿದೆ.
ಮಹಾರಾಷ್ಟ್ರದಲ್ಲಿ ತಾರಾಪುರದಲ್ಲಿ ಒಟ್ಟಾರೆ 1,400 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಅಣುಶಕ್ತಿ ಸ್ಥಾವರ ಸ್ಥಾಪಿಸಲಾಗಿದೆ. ರಾಜಸ್ತಾನದ ರಾವತ್ ಬಾಟಾದ 6 ರಿಯಾಕ್ಟರ್ ಗಳಿಂದ 1,200 ಮೆಗಾವ್ಯಾಟ್, ತಮಿಳುನಾಡಿನ ಕಲ್ಪಕಂ ನಲ್ಲಿ ಎರಡು ಯೂನಿಟ್ ಗಳ 440 ಮೆಗಾವ್ಯಾಟ್, ಕುಡಂಕುಲಮ್ ನಲ್ಲಿ ಎರಡು ಯೂನಿಟ್ ಗಳ 2000 ಮೆಗಾವ್ಯಾಟ್ ಸೇರಿದಂತೆ 2,440 ಮೆಗಾವ್ಯಾಟ್ ಸಾಮರ್ಥ್ಯದ ಪ್ಲಾಂಟ್ ಗಳನ್ನು ಹೊಂದಿದೆ.
ರಾಜ್ಯದ ಕೈಗಾದಲ್ಲಿ 880 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಅಣುಸ್ಥಾವರಗಳನ್ನು ಸ್ಥಾಪಿಸಿದ್ದರೆ, ಗುಜರಾತ್ ನ ಕಾಕ್ರಾಪಾರ್ ನಲ್ಲಿ 1,140 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಹಾಗೂ ಉತ್ತರಪ್ರದೇಶದ ನರೋರಾದಲ್ಲಿ ಒಟ್ಟು 440 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಅಣುಶಕ್ತಿ ಸ್ಥಾವರಗಳನ್ನು ಸ್ಥಾಪಿಸಲಾಗಿದೆ.
ಅಣುಶಕ್ತಿ ವಿದ್ಯುತ್ ಉತ್ಪಾದನೆ ಲಾಭವೇನು?
ಬೇರೆ ಸಾಂಪ್ರದಾಯಿಕ ಇಂಧನ ಮೂಲಕ್ಕೆ ಹೋಲಿಸಿದರೆ ಅಣುಶಕ್ತಿ ವಿದ್ಯುತ್ ಉತ್ಪಾದನೆಯು ಮಿತವ್ಯಯಕಾರಿಯಾಗಿದೆ.