ಬೆಂಗಳೂರು, ಸೆ.28 www.bengaluruwire.com : ರಾಜಧಾನಿಯಲ್ಲಿ ಸೆ.30 ರಿಂದ ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗಾಗಿ ಬೃಹತ್ ವಿಜ್ಞಾನೋತ್ಸವ ಕಾರ್ಯಕ್ರಮ ನಡೆಯಲಿದೆ.
“ಸೈನ್ಸ್ ಇನ್ ಆಕ್ಷನ್” ಎಂಬ ಶೀರ್ಷಿಕೆಯಲ್ಲಿ ಬಿ.ವಿ ಜಗದೀಶ್ ವಿಜ್ಞಾನ ಕೇಂದ್ರವು ಜವಾಹರಲಾಲ್ ನೆಹರು ತಾರಾಲಯದ ಸಂಯುಕ್ತ ಆಶ್ರಯದಲ್ಲಿ ಈ ಒಂದು ಬೃಹತ್ ವಿಜ್ಞಾನೋತ್ಸವವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮಕ್ಕೆ ಇಸ್ರೋ, ಇನ್ನೋವೇಶನ್ ಅಂಡ್ ಸೈನ್ಸ್ ಪ್ರಮೋಷನ್ ಫೌಂಡೇಶನ್, ಪರಂ ಇನ್ನೊವೇಶನ್ ಸೈನ್ಸ್ ಎಕ್ಷೀರಿಯನ್ಸ್ ಸೆಂಟರ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಅಗಸ್ತ್ಯ ಅಂತರಾಷ್ಟ್ರೀಯ ಸಂಸ್ಥೆಗಳು ಕೈಜೋಡಿಸಿದ್ದಾರೆ. 8,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಜ್ಞಾನೋತ್ಸವ ನೋಡಲು ಬರುವ ನಿರೀಕ್ಷೆಯಿದೆ.
ಈ ವಿಜ್ಞಾನೋತ್ಸವದ ಪ್ರಮುಖ ಆಕರ್ಷಣೆಗಳೆಂದರೆ ಮಾನವಾಕೃತಿಯ ರೋಬೋಟ್ಸ್, ವಿಜ್ಞಾನದ ಮೂಲ ಸೂತ್ರಗಳ ಆಧಾರಿತ ಮಾದರಿಗಳು, ಚಂದ್ರಯಾನ 3ರ ವಾಸ್ತವಿಕ ಮಾದರಿ, ಲೈವ್ ಮ್ಯೂಸಿಕ್ ಹಾಗೂ ರಾತ್ರಿ ಬಾಹ್ಯಾಕಾಶ ವೀಕ್ಷಣೆ ಇನ್ನೂ ಹಲವಾರು ಆಕರ್ಷಣೆಗಳಿರುತ್ತವೆ. ಸೆ.30ರಂದು ಬೆಳಗ್ಗೆ 8.30ಕ್ಕೆ ಜಯನಗರ ನಾಲ್ಕನೇ ಬ್ಲಾಕ್ ಸುತ್ತಮುತ್ತಲು ವಿಜ್ಞಾನದ ಪ್ರಾಮುಖ್ಯತೆ ಕುರಿತಂತೆ ವಿಜ್ಞಾನ ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ವಿ ಜಗದೀಶ್ ವಿಜ್ಞಾನ ಕೇಂದ್ರ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜಯನಗರ ನ್ಯಾಷನಲ್ ಕಾಲೇಜಿನ ಆವರಣದಲ್ಲಿರುವ ಬಿ.ವಿ ಜಗದೀಶ್ ವಿಜ್ಞಾನ ಕೇಂದ್ರವು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣದ ಉತ್ತೇಜನಕ್ಕೆ ಮೀಸಲಾಗಿರುವ ಕ್ರಿಯಾತ್ಮಕ ಮತ್ತು ಸಂವಾದಾತ್ಮಕ ಸಂಸ್ಥೆಯಾಗಿದ್ದು ಮ್ಯೂಸಿಯಂ ಮಲ್ಟಿಮೀಡಿಯಾ ಹಾಲ್, ಡಿ ಐ ವೈ ಲ್ಯಾಬ್ ಗಳನ್ನು ಹೊಂದಿದೆ. ಇದು ಕಲಿಕೆ ಮತ್ತು ಮನರಂಜನೆ ಎರಡಕ್ಕೂ ಪ್ರಮುಖ ಕೇಂದ್ರವಾಗಿದೆ.