ಬೆಂಗಳೂರು, ಸೆ.27 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹಾಗೂ ಉದ್ದೇಶಿತ ಫ್ರಧಾನ ಆರ್ಟಿರಿಯಲ್ ರಸ್ತೆ (MAR) ಗೆ ಭೂಸ್ವಾಧೀನಪಡಿಸಿಕೊಂಡ 5 ಎಕರೆ ಜಮೀನನ್ನು ಕಂದಾಯ ನಿವೇಶನದಾರರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ಪ್ರಾಧಿಕಾರವು ಇಂದು ತೆರವುಗೊಳಿಸಿ ತನ್ನ ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಚಲ್ಲಘಟ್ಟ ಗ್ರಾಮದ ಸರ್ವೆ ನಂ. 4 ಮತ್ತು 8 ಅನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹಾಗೂ ಉದ್ದೇಶಿತ ಆರ್ಟಿರಿಯಲ್ ರಸ್ತೆಗೆ ಭೂಸ್ವಾಧೀನಪಡಿಸಿಕೊಂಡಿದ್ದು, ಇದರಲ್ಲಿ ಅನಧಿಕೃತವಾಗಿ ಕಂದಾಯ ನಿವೇಶನದಾರರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಕಾಮಗಾರಿಗೆ ಅಡಚಣೆ ಉಂಟುಮಾಡುತ್ತಿದ್ದರಿಂದ ಸುಮಾರು 5 ಎಕರೆ ಜಮೀನನ್ನು ತೆರವುಗೊಳಿಸಿ ಪ್ರಾಧಿಕಾರವು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇದರಿಂದ ರಸ್ತೆಯನ್ನು ನಿರ್ಮಿಸಲು ಅನುಕೂಲವಾಗುತ್ತದೆ.
ಈ ಕಾರ್ಯಾಚರಣೆಯನ್ನು ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಕೆ. ನಂಜುಂಡೇಗೌಡ ಅವರ ನೇತೃತ್ವದೊಂದಿಗೆ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಅಶೋಕ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಿಬ್ಬಂದಿಯವರೊಡನೆ ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಆದ ಶಿವಾರೆಡ್ಡಿರವರ ಸಹಕಾರದೊಂದಿಗೆ ನೆರವೇರಿಸಲಾಯಿತು.