ಬೆಂಗಳೂರು, ಸೆ.26 www.bengaluruwire.com : ಬೆಂಗಳೂರಿನ ನಗರದ ಬಡವರು, ಕೊಳಗೇರಿ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಬಿಬಿಎಂಪಿಯ ನಮ್ಮ ಕ್ಲಿನಿಕ್ ಈ ವರ್ಷದ ಫೆ.7 ರಿಂದ ಸೆಪ್ಟೆಂಬರ್ 7ನೇ ತಾರೀಖಿನವರೆಗಿನ ಏಳು ತಿಂಗಳಲ್ಲಿ 4.84 ಲಕ್ಷ ರೋಗಿಗಳು ಹೊರರೋಗಿಗಳ ಸೇವೆಯನ್ನು ಪಡೆದುಕೊಂಡಿದ್ದಾರೆ. ಇನ್ನು 1.87 ಲಕ್ಷ ಜನರು ವಿವಿಧ ರೀತಿಯ ಉಚಿತ ಪ್ರಯೋಗ ಶಾಲಾ ಸೇವೆಗಳನ್ನು ಬಳಸಿಕೊಂಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ ಗಳ ಪೈಕಿ 232 ನಮ್ಮ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿದೆ. ಈ ಕ್ಲಿನಿಕ್ ಗಳಲ್ಲಿ ಒಟ್ಟಾರೆ 2.09 ಲಕ್ಷ ಪುರುಷರು ಹಾಗೂ 2.72 ಲಕ್ಷ ಮಹಿಳೆಯರು ಹಾಗೂ 1,797 ಲಿಂಗತ್ವ ಅಲ್ಪಸಂಖ್ಯಾತರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಡಿ ಪ್ರತಿ 15,000 ರಿಂದ 20,000 ಜನಸಂಖ್ಯೆಗೆ ಒಂದು ನಮ್ಮ ಕ್ಲಿನಿಕ್ ಸ್ಥಾಪಿಸಲು ಅನುಮೋದನೆಗೊಂಡಿದೆ. ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳ (Indian Public Helath Standard) ಪ್ರಕಾರ ನಮ್ಮ ಕ್ಲಿನಿಕ್ ಗಳಲ್ಲಿ 245 ಔಷಧಿಗಳು ಇರಬೇಕು. 245 ಬಗೆಯ ಔಷಧಿಗಳು ಇರಬೇಕಾದ ನಮ್ಮ ಕ್ಲಿನಿಕ್ ಗಳಲ್ಲಿ ಕೇವಲ 50ರಷ್ಟು ಅಗತ್ಯ ಔಷಧಿಗಳು ಮಾತ್ರ ಇವೆ. ಕೆಲವೊಂದು ಸಲ ರೋಗಿಗಳಿಗೆ ಅಗತ್ಯವಾದ ಔಷಧಿಗಳು ಸಿಗುತ್ತಿಲ್ಲ.
ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಪ್ರಕಾರ ಮೂರನೇ ಎರಡರಷ್ಟು ಔಷಧಿಗಳನ್ನು ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (Karnataka State Medical Supplies Corporation Limited- KSMSCL) ದಿಂದ ಟೆಂಡರ್ ಕರೆದು ಅಲ್ಲಿಂದ ಔಷಧಿಗಳನ್ನು ಪೂರೈಸಬೇಕು. ಅದೇ ರೀತಿ ತುರ್ತಾಗಿ ಔಷಧಿ ಪೂರೈಸಲು ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ವಿಭಾಗ ಇ-ಪ್ರಕ್ಯೂರ್ ಮೆಂಟ್ ನಿಂದ ಟೆಂಡರ್ ಕರೆದು ಔಷಧಿ ಖರೀದಿಸಿ ನಮ್ಮ ಕ್ಲಿನಿಕ್ ಗಳಿಗೆ ಪೂರೈಸಬೇಕು.
ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಟೆಂಡರ್ ಗೆ ಸ್ಪಂದನೆಯಿಲ್ಲ :
ಆದರೆ ಕೆಎಸ್ಎಂಎಸ್ ಸಿಎಲ್ ನಿಂದ ರಾಜ್ಯ ಮಟ್ಟದ ಟೆಂಡರ್ ಕರೆಯುವ ಬದಲು ಬಿಬಿಎಂಪಿಗೆ ಸೀಮಿತಗೊಳಿಸಿ ಔಷದಿಗೆ ಟೆಂಡರ್ ಗಳನ್ನು ಕರೆಯುತ್ತಿರುವುದರಿಂದ ಅಗತ್ಯವಾದ ಔಷದಿಗಳನ್ನು ಪೂರೈಸಲು ಔಷಧ ಪೂರೈಕೆ ಕಂಪನಿಗಳು ಮುಂದೆ ಬರುತ್ತಿಲ್ಲ. ಮೊದಲೇ ರಾಜ್ಯ ಸರ್ಕಾರದ ಔಷಧಿ ಖರೀದಿ ದರವು ಕಡಿಮೆಯಾಗಿದ್ದು, ಔಷದಿ ಕಂಪನಿಗಳು ಟೆಂಡರ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ನಮ್ಮ ಕ್ಲಿನಿಕ್ ಗಳಿಗೆ ಅಗತ್ಯವಾದ ಔಷಧಿಗಳು ಲಭ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಜೊತೆ ವಾಸ್ತವ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಇತ್ತೀಚೆಗೆ ಪಾಲಿಕೆ ವತಿಯಿಂದ ಇ-ಪ್ರಕ್ಯೂರ್ ಮೆಂಟ್ ಟೆಂಡರ್ ಕರೆಯಲಾಗಿತ್ತು. ಆಗ ಒಟ್ಟು 245 ಔಷಧಿಗಳಲ್ಲಿ ಕೇವಲ 31 ಔಷಧಿಗಳಿಗೆ ಅರ್ಹ ಸಂಸ್ಥೆಗಳಿಂದ ಆರ್ಥಿಕ ಪ್ರಸ್ತಾವನೆಯಲ್ಲಿ ಕೇವಲ 3 ಸಂಸ್ಥೆಗಳು ಎಲ್-1 (ಕಡಿಮೆ ದರ ಕೋಟ್ ಮಾಡಿ ಸಂಸ್ಥೆ) ಆಗಿ ಆಯ್ಕೆಗೊಂಡಿದೆ. ಹೀಗಾಗಿ 3 ಕೋಟಿ ವೆಚ್ಚದ ಅಡಿಯಲ್ಲಿ ಶೇ.37.5 ಪ್ರಮಾಣದ ರೀತಿ 31 ಔಷಧಿಗಳಿಗೆ ಒಟ್ಟು 81 ಲಕ್ಷ ರೂ.ಗಳಿಗೆ ಸರಬರಾಜು ಆದೇಶ ನೀಡಿದ ಬಳಿಕ ಈ ಔಷಧಿಗಳು ಸರಬರಾಜು ಆಗಿವೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಡಿಸೆಂಬರ್ ವೇಳೆಗೆ ಸಮಸ್ಯೆಗೆ ಪರಿಹಾರ ದೊರಕುವ ಸಾಧ್ಯತೆ :
ಇತ್ತೀಚೆಗೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದ ಸಂದರ್ಭದಲ್ಲೂ ನಮ್ಮ ಕ್ಲಿನಿಕ್ ಔಷಧಿ ಖರೀದಿಗೆ ಕೆಎಸ್ಎಂಎಸ್ ಸಿಎಲ್ ನಿಂದ ಔಷಧಿ ಟೆಂಡರ್ ಕರೆದು ಪೂರೈಸುವಲ್ಲಿ ಆಗುತ್ತಿರುವ ವಿಳಂಬ, ಅಗತ್ಯ ಔಷಧ ದೊರೆಯದಿರುವುದರ ಬಗ್ಗೆ ಸಚಿವರ ಗಮನ ಸೆಳೆಯಲಾಗಿತ್ತು. ಇದೇ ವರ್ಷದ ಡಿಸೆಂಬರ್ ವೇಳೆಗೆ ಈ ಸಮಸ್ಯೆಗೆ ಪರಿಹಾರ ದೊರೆಯುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಗೊತ್ತಾಗಿದೆ. ಆದರೆ ಅಲ್ಲಿಯವರೆಗೂ ನಮ್ಮ ಕ್ಲಿನಿಕ್ ಗಳಲ್ಲಿ ಕೇಂದ್ರ ಸರ್ಕಾರದ ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳ ಅನ್ವಯ 245 ಔಷಧಿಗಳು ಲಭ್ಯವಾಗುವುದು ಅನುಮಾನವೇ ಸರಿ.
ನಮ್ಮ ಕ್ಲಿನಿಕ್ ಗಳಲ್ಲಿ ಒದಗಿಸಲಾಗುವ 12 ಆರೋಗ್ಯ ಸೇವೆಗಳು ಹೀಗಿವೆ :
1. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ.
2. ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ಆರೈಕೆ.
3. ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು. ಸಾರ್ವತ್ರಿಕ ಲಸಿಕಾಕರಣ ಸೇವೆಗಳು.
4. ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ, ಆರೋಗ್ಯ ಸೇವೆಗಳು.
5. ಸಾಂಕ್ರಾಮಿಕ ರೋಗಗಳ ನಿರ್ವಹಣೆ.
6. ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆಗಳು
7. ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ (ಮಧುಮೇಹ, ಹೆಚ್ಚು ರಕ್ತದೊತ್ತಡ, ದೀರ್ಘಾವಧಿ ಶ್ವಾಸಕೋಶ ಕಾಯಿಲೆ, ಕೀಲು ನೋವು ಮತ್ತು ಸಂಧಿವಾತ, ಬಾಯಿ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಇತ್ಯಾದಿ) ತಡೆಗಟ್ಟುವಿಕೆ ಮತ್ತು ನಿರ್ವಹಣೆ ಸ್ಕ್ರೀನಿಂಗ್
8. ಮೂಲಭೂತ ಬಾಯಿ ಆರೋಗ್ಯ ಸೇವೆಗಳು
9. ಮೂಲಭೂತ ನೇತ್ರ ಹಾಗೂ ಕಿವಿ, ಮೂಗು, ಗಂಟಲು ಆರೋಗ್ಯ ಆರೈಕೆ ಸೇವೆಗಳು.
10. ಮಾನಸಿಕ ಆರೋಗ್ಯದ ಮೂಲಭೂತ ಸ್ತ್ರೀನಿಂಗ್ ಸೇವೆಗಳು.
11. ಮೂಲಭೂತ ವೃದ್ಯಾಪ್ಯ ಆರೈಕೆ ಮತ್ತು ಉಪಶಮನಕಾರಿ ಆರೈಕೆ ಸೇವೆಗಳು.
12. ಸುಟ್ಟ ಗಾಯಗಳು, ಅಪಘಾತ, ಮತ್ತಿತರ ಗಾಯಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ, ಉಚಿತ ಪ್ರಯೋಗಶಾಲಾ ಸೇವೆಗಳು(ರಕ್ತ ಹೀನತೆ, ಸಕ್ಕರೆ ಖಾಯಿಲೆ, ಮೂತ್ರ ಪರೀಕ್ಷೆ, ಕ್ಷಯ,
ಗರ್ಭದಾರಣ ಪರೀಕ್ಷೆ, ಡೆಂಗಿ, ಮಲೇರಿಯಾ ದಂತಹ ಕನಿಷ್ಠ-14 ಪರೀಕ್ಷೆಗಳು) ಟೆಲಿ ಕನ್ಸಲ್ಟೇಷನ್ ಸೇವೆಗಳು.
ಕ್ಷೇಮ ಚಟುವಟಿಕೆಗಳು ಉಚಿತ ರೆಫರಲ್ ಸೇವೆಗಳನ್ನು ನಮ್ಮ ಕ್ಲಿನಿಕ್ ಗಳಿಂದ ಪಡೆಯಬಹುದಾಗಿದೆ.
ನಮ್ಮ ಕ್ಲಿನಿಕ್ ಸೇವೆ ಪಡೆಯಲು ಹೀಗೆ ಮಾಡಿ :
ಬೆಂಗಳೂರಿನ ನಾಗರೀಕರು ನಿಮ್ಮ ಹತ್ತಿರದ ನಮ್ಮ ಕ್ಲಿನಿಕ್ ಗಳ ಮಾಹಿತಿ ಬೇಕಿದ್ದರೆ, ಬಿಬಿಎಂಪಿ ಸಹಾಯವಾಣಿ 1533 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು. ಅಥವಾ ಬಿಬಿಎಂಪಿ ಅಧಿಕೃತ ವೆಬ್ ಸೈಟ್ https://site.bbmp.gov.in/departmentwebsites/Health/nammaclinic/index.html ಮೇಲೆ ಮೊಬೈಲ್ ಅಥವಾ ಕಂಪ್ಯೂಟರ್, ಲ್ಯಾಪ್ ಟಾಪ್ ಮೇಲೆ ಕ್ಲಿಕ್ ಮಾಡಿದರೆ, ಸಂಬಂಧಿಸಿದ ಹತ್ತಿರದ ನಮ್ಮ ಕ್ಲಿನಿಕ್ ಲೋಕೇಶನ್ ಮೇಲೆ ಕ್ಲಿಕ್ ಮಾಡಿದರೆ ನಾವಿಗೇಷನ್ ಮೂಲಕ ಕ್ಲಿನಿಕ್ ಗಳನ್ನು ಪತ್ತೆ ಹಚ್ಚಬಹುದು.
ಬಿಬಿಎಂಪಿಯ ಇನ್ನಿತರ ಆಸ್ಪತ್ರೆಗಳ ವಿವರ :
ಬಿಬಿಎಂಪಿಯಲ್ಲಿ ಪ್ರಸ್ತುತ “ನಮ್ಮ ಕ್ಲಿನಿಕ್” ಗಳಲ್ಲದೆ 144 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 87 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಅಮೃತ್ ನಗರೋತ್ಥಾನ ಯೋಜನೆಯಡಿ ಮೇಲ್ದರ್ಜೆಗೇರಿಸಿ ನವೀಕರಿಸಲಾಗುತ್ತಿದೆ. ಅಲ್ಲದೆ 60 ಹೊಸ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ 48.80 ಕೋಟಿ ರೂ. ಅನುದಾನ ನೀಡಲಾಗಿದ್ದು, ಈಗಾಗಲೇ 40 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಟೆಂಡರ್ ಅಂತಿಮಗೊಳಿಸಲಾಗಿದೆ. ಇನ್ನು 26 ಹೆರಿಗೆ ಆಸ್ಪತ್ರೆ, 6 ರೆಫರಲ್ ಆಸ್ಪತ್ರೆ ಹಾಗೂ 2 ಜನರಲ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.
ನಮ್ಮ ಕ್ಲಿನಿಕ್ ಗೆ ಬಲ ತುಂಬುವ ಕೆಲಸವಾಗಬೇಕು :
“ನಮ್ಮ ಕ್ಲಿನಿಕ್ ಗಳಲ್ಲಿ ಅಗತ್ಯ ಔಷಧಿಗಳು ಸಿಗುತ್ತಿಲ್ಲ. ಸಕಾಲಕ್ಕೆ ವೈದ್ಯರು ಲಭ್ಯವಾಗುತ್ತಿಲ್ಲ. ಬರುವಂತಹ ಬಡ ರೋಗಿಗಳಿಗೆ ಕೆಲವು ನಮ್ಮ ಕ್ಲಿನಿಕ್ ಗಳಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವ್ಯಾಪಕ ದೂರುಗಳಿವೆ. ಈ ಕ್ಲಿನಿಕ್ ಗಳಲ್ಲಿ ಕೆಲವು ಕಡೆ ಕುಳಿತುಕೊಳ್ಳಲು ಸೂಕ್ತ ಚೇರುಗಳಿಲ್ಲ. ಬಡಜನರು, ಕೊಳಗೇರಿ ಜನರು, ಅಶಕ್ತರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಪ್ರಾರಂಭಿಸಲಾದ ಯೋಜನೆಗೆ ಬಲ ತುಂಬುವ ಕೆಲಸ ಆಗಬೇಕು.”
– ಎ.ಎಚ್.ಬಸವರಾಜು, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು