ಬೆಂಗಳೂರು, ಸೆ.25 www.bengaluruwire.com : ಕಾಂಗ್ರೆಸ್ ನೇತೃತ್ವದ ಸರ್ಕಾರ ಬೃಹತ್ ಬೆಂಗಳೂರು ನಗರ ಪಾಲಿಕೆ (BBMP)ಯಲ್ಲಿ 225 ವಾರ್ಡ್ ಪುನರ್ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಸೋಮವಾರ ಪ್ರಕಟಸಿದ್ದು (ಸೆ.25), ಕರಡು ಅಧಿಸೂಚನೆಯಲ್ಲಿದ್ದ 16 ವಾರ್ಡ್ ಹೆಸರುಗಳನ್ನು ಅಂತಿಮವಾಗಿ ಬದಲಿಸಿದೆ.
ಈ 16 ವಾರ್ಡ್ ಗಳ ಪೈಕಿ 3 ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ವಾರ್ಡ್‌ಗಳ ಹೆಸರನ್ನು ಮುಲಾಜಿಲ್ಲದೆ ಬದಲಾಯಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ (ಶಾಸಕ ಕೆ.ಗೋಪಾಲಯ್ಯ), ರಾಜಾಜಿನಗರ (ಶಾಸಕ ಎಸ್.ಸುರೇಶ್ ಕುಮಾರ್) ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ (ಶಾಸಕ ಎಲ್.ಎ ರವಿಸುಬ್ರಮಣ್ಯ) ದಲ್ಲಿ ತಲಾ ಮೂರು ವಾರ್ಡ್ ಗಳ ಹೆಸರು ಬದಲಾವಣೆಯಾಗಿದೆ. ಅದರಲ್ಲೂ ಬಸವನಗುಡಿಯ ಕ್ಷೇತ್ರದಲ್ಲಿ 198ನೇ ವಾರ್ಡ್ ಬಸವನಗುಡಿ ಹೆಸರನ್ನು ದೊಡ್ಡ ಗಣಪತಿಯೆಂದೂ, ಹಲವು ದಶಕಗಳಿಂದ ಸ್ಥಳೀಯ ಜನರಿಗೆ ಹಾಗೂ ಬೆಂಗಳೂರಿನ ಸಂಸ್ಕೃತಿ ಹೆಗ್ಗುರುತಿನ ಹೆಸರಿದ್ದ 200ನೇ ವಾರ್ಡ್ ಗಿರಿನಗರ ಹೆಸರನ್ನು ಸ್ವಾಮಿ ವಿವೇಕಾನಂದ ವಾರ್ಡ್ ಎಂದೂ ಹಾಗೂ ಬಸವನಗುಡಿಗೆ ಕಲಶಪ್ರಾಯವಾಗಿದ್ದ 196ನೇ ವಾರ್ಡ್ ಹನುಮಂತನಗರ ಹೆಸರನ್ನು ಗವಿಗಂಗಾಧರೇಶ್ವರ ಹೆಸರಿಗೆ ಬದಲಾಯಿಸಲಾಗಿದೆ.
ಈ ಹಿಂದೆ 198 ವಾರ್ಡ್ ಹಾಗೂ 243 ವಾರ್ಡ್ ಮಾಡಿದಾಗಲೂ ಗಿರಿನಗರ, ಹನುಮಂತನಗರ ಹಾಗೂ ಬಸವನಗುಡಿ ಹೆಸರುಗಳು ವಾರ್ಡ್ ಪುನರ್ವಿಂಗಡಣೆ ಮಾಡಿದ್ದರೂ ಹಳೆಯ ಹೆಸರುಗಳನ್ನು ತೆಗೆದಿರಲಿಲ್ಲ. ಇದೀಗ 225 ವಾರ್ಡ್ ಗಳ ಅಂತಿಮ ಅಧಿಸೂಚನೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಸರ್ಕಸ್ ಮಾಡಿದೆ. 16 ವಾರ್ಡ್ ಗಳ ಹೆಸರು 225 ವಾರ್ಡ್ ಗಳ ಪುನರ್ ವಿಂಗಡಣೆ ಕರಡು ತಯಾರಿಸುವಾಗ ಇದ್ದ ಹೆಸರು ಅಂತಿಮ ಅಧಿಸೂಚನೆಯಲ್ಲಿ ಬದಲಾವಣೆ ಮಾಡಲಾಗಿದೆ.
16 ವಾರ್ಡ್ ಗಳ ಹೆಸರು ಬದಲಾಗಿರುವ ವಿವರ :
ಕ್ರಮ ಸಂಖ್ಯೆ | ವಿಧಾನಸಭಾ ಕ್ಷೇತ್ರ | ಪುನರ್ವಿಂಗಡಣೆಯಾದ ವಾರ್ಡ್ ಸಂಖ್ಯೆ ಮತ್ತು ಹೆಸರು (ಆವರಣದಲ್ಲಿರುವುದು ಹಳೆಯ ಹೆಸರು) |
1) | ಮಹಾಲಕ್ಷ್ಮಿಲೇಔಟ್ | 46. ರಾಜೀವ್ ನಗರ (ಮಾರಪ್ಪನಪಾಳ್ಯ) |
47. ಡಾ.ಪುನೀತ್ ರಾಜ್ ಕುಮಾರ್ (ನಂದಿನಿ ಲೇಔಟ್) | ||
50. ನಾಲ್ವಡಿ ಕೃಷ್ಣರಾಜ ಒಡೆಯರ್ (ಡಾ.ಪುನೀತ್ ರಾಜ್ ಕುಮಾರ್) | ||
2) | ರಾಜಾಜಿನಗರ | 130. ಶ್ರೀ ರಾಮಮಂದಿರ (ಪ್ರಕಾಶ್ ನಗರ) |
131. ಶಿವನಗರ (ಶ್ರೀರಾಮಮಂದಿರ) | ||
132. ರಾಜಾಜಿನಗರ (ಶಿವನಗರ) | ||
3) | ಬಸವನಗುಡಿ | 196. ಗವಿಗಂಗಾಧರೇಶ್ವರ (ಹನುಮಂತನಗರ) |
198. ದೊಡ್ಡ ಗಣಪತಿ (ಬಸವನಗುಡಿ) | ||
200. ಸ್ವಾಮಿ ವಿವೇಕಾನಂದ (ಗಿರಿನಗರ) | ||
4) | ಮಹದೇವಪುರ | 98. ಹೂಡಿ (ಬೆಲತ್ತೂರು) |
99. ಭೈರತಿ (ಹೂಡಿ) | ||
5) | ಯಶವಂತಪುರ | 27. ಲಿಂಗಧೀರನಹಳ್ಳಿ (ಬ್ಯಾಡರಹಳ್ಳಿ) |
6) | ಸರ್ವಜ್ಞನಗರ | 83.ಸುಬ್ಬಯ್ಯನಪಾಳ್ಯ (ಕೆಎಸ್ ಎಫ್ ಸಿ ಲೇಔಟ್) |
7) | ಶಿವಾಜಿನಗರ | 118. ಸಂಪಂಗಿರಾಮನಗರ (ಎಸ್.ಆರ್.ನಗರ) |
8) | ಶಾಂತಿನಗರ | 167. ಅಶೋಕ್ ನಗರ (ಶಾಂತಲಾ ನಗರ) |
9) | ಚಿಕ್ಕಪೇಟೆ | 165. ಬಿ.ವೆಂಕಟರೆಡ್ಡಿ ನಗರ (ಸೋಮೇಶ್ವರ ನಗರ) |
ನಿರೀಕ್ಷೆಯಂತೆಯೇ ನಗರಾಭಿವೃದ್ಧಿ ಇಲಾಖೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸಂಬಂಧಿಸಿದಂತೆ 225 ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ಆ.18 ರಂದು ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿತ್ತು. ಈ ಕರಡಿನ ವಾರ್ಡ್ ವಾರು ಪುನರ್ ವಿಂಗಡಣೆ ಕುರಿತಂತೆ ಸಾರ್ವಜನಿಕರು – ಸಂಸ್ಥೆಗಳಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಿತ್ತು. ಬಿಬಿಎಂಪಿ ವಾರ್ಡುಗಳ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್, ಆಗಸ್ಟ್ 8ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸರ್ಕಾರಕ್ಕೆ ಆಗಸ್ಟ್ 14ರಂದು ವಾರ್ಡ್ ವಾರು ಕರಡು ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದ್ದರು. ಇದನ್ನು ಒಪ್ಪಿದ ಸರ್ಕಾರವು 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿತ್ತು.
ಬಿಬಿಎಂಪಿ ವ್ಯಾಪ್ತಿಗೆ 2021ರ ನವೆಂಬರ್ 20ರಂದು ವಾರ್ಡುಗಳ ಪುನರ್ ವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನ ಅನ್ವಯ, ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು 243 ವಾರ್ಡುಗಳಾಗಿ ವಿಂಗಡಣೆಗೊಳಿಸಿ ಅಧಿಸೂಚಿಸಲಾಗಿತ್ತು. ಆದರೆ ಈ ಅಧಿಸೂಚನೆಯನ್ನು ಪ್ರಶ್ನಿಸಿ, ಅದರ ವಿರುದ್ಧ ದಾಖಲಾಗಿದ್ದ ರಿಟ್ ಅರ್ಜಿಗಳನ್ನು, ಹೈಕೋರ್ಟ್ 2022ರ ಸೆಪ್ಟೆಂಬರ್ 16ರ ಆದೇಶದಲ್ಲಿ ವಜಾಗೊಳಿಸಿತ್ತು. ಈ ಆದೇಶವನ್ನು, ಪ್ರಶ್ನಿಸಿ ಮಾಜಿ ಮೇಯರ್ ಬಿ.ಎಸ್. ಮಂಜುನಾಥ ರೆಡ್ಡಿ ಮತ್ತು ಇತರರು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ರಿಟ್ ಅಪೀಲು ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠ ಈ ವರ್ಷದ ಜೂನ್ 19ರಂದು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡಣೆ ಕುರಿತಂತೆ ನಿಗದಿತ ಮಾರ್ಗಸೂಚಿಗಳು ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ 12 ವಾರಗಳ ಸಮಯವನ್ನು ನೀಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರವು ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ಗಳ ಪುನರ್ ವಿಂಗಡಣಾ ಆಯೋಗವನ್ನು ಜೂನ್ 23ರಂದು ಪುನರ್ ರಚಿಸಿ ಆದೇಶಿಸಿತ್ತು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರ ನವೆಂಬರ್ 20ರಂದು 243 ಬಿಬಿಎಂಪಿ ಕೌನ್ಸಿಲರ್ ಗಳನ್ನು ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದು ಪಾಲಿಕೆ ಪುರಪಿತೃಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿತ್ತು. ಇದರ ಆಧಾರದ ಮೇಲೆ ಪ್ರಸ್ತುತ 225 ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿದ್ದು, ಸೆ.25ರಂದು ಈ ಬಗ್ಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಸೋಮವಾರದಿಂದಲೇ ನಗರದಲ್ಲಿ 225 ವಾರ್ಡ್ ಗಳು ಅಧಿಕೃತವಾಗಿ ಚಾಲ್ತಿಗೆ ಬಂದಂತಾಗಿದೆ.
ಬ್ರಾಂಡ್ ಬೆಂಗಳೂರಿನ ಮೂಲ ಹೆಸರುಗಳ ಬದಲಾವಣೆ ಬಗ್ಗೆ ಮಾಜಿ ಮೇಯರ್ ಹೇಳಿದ್ದೇನು?:
“ಐವತ್ತು ವರ್ಷಗಳ ಹಿಂದೆ ಬಸವನಗುಡಿ ವಾರ್ಡ್ ಹೆಸರು ಬಸವೇಶ್ವರ ಎಂದಾಗಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ಈ ವಾರ್ಡ್ ಹೆಸರನ್ನು ಬಸವನಗುಡಿ ಎಂದು ಹೆಸರಿಡಲಾಯಿತು. ಈಗ ದೊಡ್ಡ ಗಣಪತಿ ಎಂದು ಹೆಸರು ಬದಲಾಯಿಸಲಾಗಿದೆ. ಹನುಮಂತ ನಗರ ವಾರ್ಡ್ ನಲ್ಲಿ ಶ್ರೀರಾಮ ಹಾಗೂ ಹನುಮಂತನನ್ನು ಅಪ್ಪಿಕೊಂಡಿಕೊಂಡಿರುವ ಬೃಹದಾಕಾರದ ಪ್ರತಿಮೆಯಿರುವ ಬಹಳ ಹಳೆಯ ದೇವಸ್ಥಾನದಿಂದ ಹನುಮಂತನಗರ ಎಂದೇ ಎಲ್ಲೆಡೆ ಜನ ಜನಿತವಾಗಿತ್ತು. ಈಗ ಅದನ್ನು ಗವಿಗಂಗಾಧರೇಶ್ವರ ಎಂದು ಬದಲಾವಣೆ ಮಾಡಲಾಗಿದೆ. ಅದೇ ರೀತಿ 40 ವರ್ಷಗಳ ಹಿಂದೆ ಕೃಷ್ಣಭಟ್ ಎಂಬುವರು ಲೇಔಟ್ ಮಾಡಿದ್ದ ಸ್ಥಳವನ್ನು ಗಿರಿನಗರ ಮಾಡಲಾಗಿತ್ತು. ಆ ಹೆಸರು ಈಗ ಸ್ವಾಮಿ ವಿವೇಕಾನಂದ ಎಂದು ಹೆಸರು ನೀಡಿದ್ದಾರೆ. ಬೆಂಗಳೂರಿನ ಹೆಗ್ಗುರುತಾಗಿರುವ ಈ ಹೆಸರುಗಳನ್ನು ಬದಲಾಯಿಸಿದ್ದು ಬಹಳ ಬೇಸರದ ಸಂಗತಿ. ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸಿ ಕೌನ್ಸಿಲ್ ಆಡಳಿತ ಬಂದರೆ ಸಾಮಾನ್ಯ ನಾಗರೀಕರಿಗೆ ಅನುಕೂಲವಾಗಲಿದೆ.”
– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್