ಬೆಂಗಳೂರು, ಸೆ.23 www.bengaluruwire.com : ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ 64 ನೇ ಜನ್ಮದಿನದ ಅಂಗವಾಗಿ ಅದಮ್ಯ ಚೇತನ ಸಂಸ್ಥೆ ಬೆಂಗಳೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಅನಂತ ನಮನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಗಣ್ಯರು “ಅನಂತ ನಮನ” ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಟಿ.ಎಸ್.ಗೋಪಾಲ್ ಸಂಕಲನ ಮತ್ತು ಸಂಪಾದಿಸಿದ ಈ ಪುಸ್ತಕ ಅನಂತ್ ಕುಮಾರ್ ಜೀವನದ ಅನೇಕ ಸಂಗತಿಗಳನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಅದಮ್ಯ ಚೇತನವು ಪಾತ್ರೆಗಳನ್ನು ತೊಳೆಯಲು ರಾಸಾಯನಿಕವಲ್ಲದ ಸೋಪ್ ಬಳಕೆಯನ್ನು ಇದೇ ದಿನದಂದು ಪ್ರಾರಂಭಿಸಿತು. ಇದು ಅದಮ್ಯ ಚೇತನ ಸಂಸ್ಥೆಯ ಪರಿಸರ ಸಂರಕ್ಷಣೆಯಲ್ಲಿ ಮತ್ತೊಂದು ಹೆಜ್ಜೆಯನ್ನು ಇರಿಸಿದೆ. ಅಲ್ಲದೆ ಇಂದು ವಿವಿಧ ಕ್ಷೇತ್ರಗಳಲ್ಲಿನ ಸಾಧಕರು ಮತ್ತು ಅನಂತಕುಮಾರ್ ಅವರ ನಿಕಟವರ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭಾರತದ ಶ್ರೀಮಂತ ದೇವಾಲಯ ಸಂಸ್ಕೃತಿಯನ್ನು ಎತ್ತಿ ತೋರಿಸುವ 64 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಗೋವಿಂದ ಕಾರಜೋಳ, ಶಾಸಕ ರವಿ ಸುಬ್ರಮಣ್ಯ, ಎಂಎಲ್ಸಿ ಗಳಾದ ಯು. ಬಿ ವೆಂಕಟೇಶ್, ಪ್ರತಾಪ್ ಸಿಂಹ ನಾಯಕ್, ಅ.ದೇವೇಗೌಡ, ಪದ್ಮಭೂಷಣ ವಿಜ್ಞಾನಿ ಡಾ.ಅತ್ರೆ, ಪ್ರೊ.ಪಿ.ವಿ.ಕೃಷ್ಣಭಟ್, ಅನಂತಕುಮಾರ್ ಅವರ ಧರ್ಮಪತ್ನಿ ಹಾಗೂ ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.