ಬೆಂಗಳೂರು, ಸೆ.22 www.bengaluruwire.com : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ ( Valuation Committee) 2023-24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸೆ.23 ರಿಂದ ಜಾರಿಗೆ ಬರುವಂತೆ ಕಚೇರಿ ಅವಧಿಯನ್ನು ಹೆಚ್ಚಿಸಿ ಆದೇಶಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳ ಕೆಲಸದ ಅವಧಿಯನ್ನು ಸೆ.23 ರಿಂದ ಜಾರಿಗೆ ಬರುವಂತೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲು ಅನುವಾಗುವಂತೆ, ಕಛೇರಿ ಅವಧಿಯನ್ನು ವಿಸ್ತರಿಸಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಬಿ.ಆರ್.ಮಮತಾ ಆದೇಶಿಸಿದ್ದಾರೆ.
ಸೆಪ್ಟೆಂಬರ್ 23 ನಾಲ್ಕನೇ ಶನಿವಾರದಂದೂ ಕೂಡ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದ್ದು, ಈ ಕೆಲಸದ ಅವಧಿಯು ಸೆ.30 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದು ಕೊಳ್ಳಬಹುದು ಎಂದು ಮಮತಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.