ಬೆಂಗಳೂರು, ಸೆ.21 www.bengaluruwire.com : ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ಹಾಗೂ ಅವರ ತಂಡ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವೆ ಬೆಂಗಳೂರು ಮೆಟ್ರೊ ರೈಲ್ವೆ ನಿಗಮ (BMRCL) ಹೊಸದಾಗಿ ನಿರ್ಮಿಸಿರುವ 2 ಕಿ.ಮೀ ಮಾರ್ಗದ ಶಾಸನಬದ್ಧ ಸುರಕ್ಷತಾ ಪರಿಶೀಲನೆಯನ್ನು ಗುರುವಾರ(ಸೆ.21) ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ನಮ್ಮ ಮೆಟ್ರೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೃಷ್ಣರಾಜಪುರ ಮತ್ತು ಗರುಡಾಚಾರ್‌ಪಾಳ್ಯದವರೆಗೆ ಇಂದು ಇಡೀ ದಿನ ಮೆಟ್ರೊ ರೈಲು ಸಂಚಾರ ಸೇವೆ ಇರುವುದಿಲ್ಲ. ಬೈಯ್ಯಪ್ಪನಹಳ್ಳಿಯಿಂದ ಇಂದಿರಾನಗರ ಮೆಟ್ರೊ ನಿಲ್ದಾಣದ ವರೆಗೆ ಮಧ್ಯಾಹ್ನ 1.30ರಿಂದ 4.30ರವರೆಗೆ ರೈಲು ಸಂಚರಿಸುವುದಿಲ್ಲ ಎಂದು ಮೆಟ್ರೊ ನಿಗಮ ಬುಧವಾರ ತಿಳಿಸಿತ್ತು.
ಬೈಯಪ್ಪನಹಳ್ಳಿ – ಕೆಆರ್ ಪುರ 2 ಕಿ.ಮೀ. ಮಾರ್ಗವಾಗಿದ್ದು, ಇದಕ್ಕೆ ಮೆಟ್ರೊ ಸುರಕ್ಷತಾ ಆಯುಕ್ತರು ತಪಾಸಣೆ ನಡೆಸಿ ಹಸಿರು ನಿಶಾನೆ ತೋರಿದರೆ, ಕೆಂಗೇರಿಯಿಂದ ತಡೆರಹಿತವಾಗಿ ವೈಟ್ಫೀಲ್ಡ್ವರೆಗೆ ಸಂಚಾರ ಮಾಡಬಹುದಾಗಿದೆ.
ಕೆಂಗೇರಿಯಿಂದ ಹಾಗೂ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಐಟಿ ಹಬ್ ಆಗಿರುವ ವೈಟ್ ಫೀಲ್ಡ್ನ ಸಾವಿರಾರು ಟೆಕ್ಕಿಗಳಿಗೆ ಪ್ರಯೋಜನವಾಗಲಿದೆ. ಇಲ್ಲಿಯವರೆಗೆ ಕೆ.ಆರ್.ಪುರ – ಬೈಯಪ್ಪನಹಳ್ಳಿ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಕೆಂಗೇರಿಯಿಂದ ವೈಟ್ ಫೀಲ್ಡ್ಗೆ ಕಡೆಗೆ ತೆರಳುವವರು ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್ನಲ್ಲಿ ಸಾಗಿ ಮತ್ತೆ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು. ಇದು ಮೆಟ್ರೊ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿಗೆ ಕಾರಣವಾಗುತ್ತಿತ್ತು.