ಬೆಂಗಳೂರು, ಸೆ.16 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಹೀಗಾಗಿ ಆಗಸ್ಟ್ 7 ರಿಂದ ಗುತ್ತಿಗೆದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಂದಹಾಗೆ ಬಿಬಿಎಂಪಿ ಅನುದಾನ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದ ಒಟ್ಟಾರೆ 8.403 ಬಿಲ್ ಗಳ ಪೈಕಿ 6,088.56 ಕೋಟಿ ರೂ. ಹಣ ಕಾಂಟ್ರಾಕ್ಟರ್ ಗಳಿಗೆ ಪಾವತಿಯಾಗಬೇಕಿದೆ.
ಈ ಪೈಕಿ ಬಿಬಿಎಂಪಿ ಅನುದಾನದಲ್ಲಿ 7,087 ಕಾಮಗಾರಿಗಳಿಗೆ 3,263.56 ಕೋಟಿ ರೂ. ಬಾಕಿ ಬಿಲ್ ಬರಬೇಕಿದೆ. ಇನ್ನು ರಾಜ್ಯ ಸರ್ಕಾರದ ಅನುದಾನದಿಂದ ಕೈಗೊಂಡ 1,142 ಕಾಮಗಾರಿ ಬಿಲ್ ಗಳಿಗೆ 2,757.52 ಕೋಟಿ ರೂ. ಹಣ ಗುತ್ತಿಗೆದಾರರಿಗೆ ಬರುವುದು ಬಾಕಿಯಿದೆ. ಇನ್ನು ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ 174 ಕಾಮಗಾರಿಗಳಿಗೆ 67.48 ಕೋಟಿ ರೂ. ಹಣವನ್ನು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಪಾವತಿಯಾಗಬೇಕಿದೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಕಾಮಗಾರಿಗಳ ಬಾಕಿ ಬಿಲ್ಲುಗಳ ವಿವರ ಈ ಕೆಳಕಂಡಂತಿದೆ :
ಕ್ರಮ ಸಂಖ್ಯೆ | ವಿವರಗಳು | ಹಂತಗಳು | ಬಿಲ್ಲುಗಳು | ಮೊತ್ತ (ಕೋಟಿ ರೂ.ಗಳಲ್ಲಿ) |
ಬಿಬಿಎಂಪಿ ಅನುದಾನ | 25 ಲಕ್ಷ ರೂ.ಗಳ ವರೆಗೆ | 4024 | 430.88 | |
1 | 25 ಲಕ್ಷಗಳಿಂದ 50 ಲಕ್ಷ ರೂ. ವರೆಗೆ | 1076 | 394.80 | |
50 ಲಕ್ಷ ಮೇಲ್ವಟ್ಟು | 1987 | 2437.88 | ||
ಒಟ್ಟು | 7087 | 3263.56 | ||
2 | ರಾಜ್ಯ ಸರ್ಕಾರದ ಅನುದಾನ | 25 ಲಕ್ಷ ರೂ.ಗಳ ವರೆಗೆ | 393 | 26.81 |
25 ಲಕ್ಷಗಳಿಂದ 50 ಲಕ್ಷ ರೂ. ವರೆಗೆ | 48 | 19.43 | ||
50 ಲಕ್ಷ ಮೇಲ್ವಟ್ಟು | 701 | 2711.28 | ||
ಒಟ್ಟು | 1142 | 2757.52 | ||
ಕೇಂದ್ರ ಸರ್ಕಾರದ ಅನುದಾನ | 25 ಲಕ್ಷ ರೂ.ಗಳ ವರೆಗೆ | 116 | 10.20 | |
3 | 25 ಲಕ್ಷಗಳಿಂದ 50 ಲಕ್ಷ ರೂ. ವರೆಗೆ | 21 | 8.09 | |
50 ಲಕ್ಷ ಮೇಲ್ವಟ್ಟು | 37 | 49.18 | ||
ಒಟ್ಟು | 174 | 67.48 | ||
ಮೂರು ಅನುದಾನಗಳು ಸೇರಿಸಿ | ಒಟ್ಟಾರೆ | 8,403 | 6,088.56 |
“ಬಿಬಿಎಂಪಿಯ 225 ವಾರ್ಡ್ ಗಳಲ್ಲಿ ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ಬಿಲ್ಲುಗಳು ಪಾವತಿಯಾಗದ ಹೊರತು ಆಗಸ್ಟ್ 7ರಿಂದ ನಿಲ್ಲಿಸಿರುವ ಕೆಲಸವನ್ನು ಪುನಃ ಕೈಗೆತ್ತಿಕೊಳ್ಳದಿರಲು ಬಿಬಿಎಂಪಿ ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಬಾಕಿ ಬಿಲ್ಲುಗಳ ಪೈಕಿ ಮಾರ್ಚ್ 2022ರ ತನಕದ ಬಿಲ್ ಗಳನ್ನು ಪಾವತಿಸದಲ್ಲಿ ಮಾತ್ರ ಮುಂದೆ ಕೆಲಸ ಮಾಡಲು ಸಂಘ ತೀರ್ಮಾನಿಸಿದೆ. ಈ ಕುರಿತಂತೆ ಮುಂದಿನ ಮಂಗಳವಾರದಂದು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಈ ಬಗ್ಗೆ ಪುನಃ ಬೇಡಿಕೆ ಇಡಲಿದೆ” ಎಂದು ಸಂಘದ ಅಧ್ಯಕ್ಷ ಅಂಬಿಕಾಪತಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಕಳೆದ ವಾರ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರ ಜೊತೆ ಸಭೆ ನಡೆಸಿದಾಗ, ರಾಜ್ಯ ಸರ್ಕಾರದ ಅಮೃತ್ ನಗರೋತ್ಥಾನದ ಪೈಕಿ 675 ಕೋಟಿ ರೂ. ಹಾಗೂ ಬಿಬಿಎಂಪಿ ಅನುದಾನದಲ್ಲಿ ಶೇ.50ರಷ್ಟು ಕಾಮಗಾರಿ ಬಿಲ್ ಪೈಕಿ 700 ಕೋಟಿ ರೂ. ಹಣವನ್ನು 12 ತಿಂಗಳಿಗೆ ನೀಡುವುದಾಗಿ ಹೇಳಿದ್ದರು. ಆದರೆ ಶಾಸನಬದ್ಧ ತೆರಿಗೆ ಮತ್ತಿತರ ಕಡಿತದ ಬಳಿಕ ಪಾಲಿಕೆ ನೀಡುವ ಹಣ ಯಾವುದಕ್ಕೂ ಸಾಲದಾಗುತ್ತದೆ ಎಂದು ಸಂಘವು ತಿಳಿಸಿತ್ತು. ಆದ್ದರಿಂದ 12 ತಿಂಗಳ ಬದಲಿಗೆ 5 ತಿಂಗಳಿಗೆ ಶೇ.75ರ ಬಿಲ್ ಪಾವತಿಸುವುದಾಗಿ ಪಾಲಿಕೆ ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದರು.”
“ಆದರೆ ಮುಂದೆ ಪಾಲಿಕೆಯಲ್ಲಿ ಕಾಮಗಾರಿ ಮುಂದುವರೆಸಲು ಮಾರ್ಚ್ 2022ರ ವರೆಗಿನ ಕಾಮಗಾರಿಯ ಬಾಕಿ ಬಿಲ್ ಪೈಕಿ ಶೇ.75ರಷ್ಟು ಹಣ ಪಾವತಿಸಿದರಷ್ಟೇ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ ಸಾಲಸೋಲ ಮಾಡಿ, ಹಣ ಪಾವತಿಸದ ಕಾರಣ ಹಲವು ಗುತ್ತಿಗೆದಾರರು ಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಅಂಬಿಕಾಪತಿ ಅಳಲು ತೋಡಿಕೊಂಡಿದ್ದಾರೆ.
ನಿಗದಿತ ಕಾಲಾವಧಿಯಲ್ಲಿ ಗುತ್ತಿಗೆದಾರರು ರಸ್ತೆ ಕಾಮಗಾರಿ, ಚರಂಡಿ ಅಭಿವೃದ್ಧಿ, ಪಾಲಿಕೆ ಕಟ್ಟಡ ನಿರ್ಮಾಣ, ಆಸ್ಪತ್ರೆ, ಶಾಲೆಗಳ ನವೀಕರಣ ಕಾಮಗಾರಿ, ಉದ್ಯಾನವನ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಬೃಹತ್ ನೀರುಗಾಲುವೆಯ ಅಭಿವೃದ್ಧಿ ಸೇರಿದಂತೆ ಹಲವು ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ ನಿಲ್ಲಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಆಡಳಿತಾವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿಗಳ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದೆ. ಹೀಗಾಗಿ ಇತ್ತ ಗುತ್ತಿಗೆದಾರರು ಬಾಕಿ ಬಿಲ್ ಪಾವತಿಯಾಗದೆ ಕೆಲಸ ನಿಲ್ಲಿಸಿದ್ದಾರೆ. ಇದರ ದುಷ್ಪರಿಣಾಮ ಮಾತ್ರ ತೆರಿಗೆ ಪಾವತಿಸುವ ಸಾಮಾನ್ಯ ಜನರ ಮೇಲಾಗುತ್ತಿದೆ. ಈಗಾಗಲೇ ಸಾರ್ವಜನಿಕರು ತೊಂದರೆಗೊಳಗಾಗಿ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪಾಲಿಕೆ ಅಧಿಕಾರಿಗಳು ಆದಷ್ಟು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಬೇಕಿದೆ ಎಂಬ ಅಭಿಪ್ರಾಯಗಳು ನಾಗರೀಕ ವಲಯದಿಂದ ವ್ಯಕ್ತವಾಗಿದೆ.