ಬೆಂಗಳೂರು, ಸೆ.15 www.bengaluruwire.com : ತಮಗಿಷ್ಟ ಬಂದಂತೆ ಗಣೇಶ ಹಬ್ಬಕ್ಕೆ ಖಾಸಗಿ ಬಸ್ ಹಾಗೂ ಪ್ರಯಾಣಿಕ ವಾಹನಗಳ ಟಿಕೆಟ್ ದರ ಭಾರೀ ಏರಿಕೆ ಮಾಡಿರುವ ಬಗ್ಗೆ ಸಾರಿಗೆ ಇಲಾಖೆಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ತೀವ್ರವಾಗಿ ದರ ಹೆಚ್ಚಳ ಮಾಡದಂತೆ ಕಠಿಣ ಸೂಚನೆ ನೀಡಿದೆ.
ಒಂದೊಮ್ಮೆ ಖಾಸಗಿ ಬಸ್ ಮಾಲೀಕರು (Private Bus Owners), ಆನ್ಲೈನ್ ಬುಕ್ಕಿಂಗ್ (Online Booking) ಆಪರೇಟರ್ಗಳು ದುಬಾರಿ ದರ ಏರಿಕೆ ಮಾಡಿದಲ್ಲಿ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಇತ್ತೀಚಿಗೆ ವಾರಾಂತ್ಯ, ಹಬ್ಬಗಳಿಗೆಂದು ಖಾಸಗಿ ಪ್ರಯಾಣಿಕರ ವಾಹನಗಳ ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಕುರಿತು ತಿಳಿದು ಬಂದಿದೆ ಮತ್ತು ಇದೇ ವಿಷಯದ ಕುರಿತು ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ಹಲವು ದೂರುಗಳು ಸಹ ಬಂದಿವೆ ಎಂದು ಹೇಳಿದ್ದಾರೆ.
ಆದ್ದರಿಂದ ಖಾಸಗಿ ಪ್ರಯಾಣಿಕರ ವಾಹನಗಳ ಮಾಲೀಕರು ಮತ್ತು ಆನ್ಲೈನ್ ಟಿಕೆಟ್ ನೀಡುವ ವಿತರಕರಿಗೆ ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಅನಾನುಕೂಲತೆ ಮಾಡಬಾರದು. ಪ್ರಯಾಣಿಕರ ವಾಹನಗಳಲ್ಲಿ ಇತರೆ ಸರಕುಗಳನ್ನು ಅನಧಿಕೃತವಾಗಿ ಸಾಗಿಸದಂತೆ ಎಚ್ಚರಿಕೆ ನೀಡಿದೆ.
ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರ ಹಾಗೂ ಆನ್ಲೈನ್ ಟಿಕೆಟ್ ನೀಡುವ ವಿತರಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಟಿಕೆಟ್ ದರ ರಾಕೆಟ್ ನಂತೆ ಗಗನಕ್ಕೇರುತ್ತೆ :
ಯುಗಾದಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭದಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರ ದಿಢೀರ್ ಏರಿಕೆಯಾಗುತ್ತದೆ. ಹಬ್ಬದ ವೇಳೆ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಿಂದ ತಮ್ಮ ವಾಸಸ್ಥಳಗಳಿಗೆ ಜನರು ತೆರಳುತ್ತಾರೆ. ಇದನ್ನೇ ಬಳಸಿಕೊಳ್ಳುವ ಖಾಸಗಿ ವಾಹನಗಳ ಮಾಲೀಕರು ನಿಗದಿತ ದರಕ್ಕಿಂತ ದುಪ್ಪಟ್ಟು ದರವನ್ನು ನಿಗದಿ ಮಾಡುತ್ತಾರೆ. ಇದರಿಂದ ಜನರು ಅನಿವಾರ್ಯವಾಗಿ ಭಾರೀ ಬೆಲೆ ತೆತ್ತು ಟಿಕೆಟ್ ಪಡೆದು ಊರಿಗೆ ತೆರಳಬೇಕಾದ ಪರಿಸ್ಥಿತಿಯಿದೆ.