ಬೆಂಗಳೂರು, ಸೆ.13 www.bengaluruwire.com : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ((KIAL) ಹಾಗೂ ಮಂಗಳೂರು ಏರ್ ಪೋರ್ಟಿ (Mangalore Airport)ನ ಕಸ್ಟಮ್ಸ್ ಅಧಿಕಾರಿ (Customs Officers)ಗಳು ಭರ್ಜರಿ ಬೇಟೆಯಾಡಿದ್ದಾರೆ.
ಬೆಂಗಳೂರಿನಲ್ಲಿ ವಿದೇಶದಿಂದ ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ 1.14 ಕೆಜಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದು ಆಕೆಯಿಂದ ಕೋಟ್ಯಾಂತರ ರೂ. ಬೆಲೆ ಬಾಳುವ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಇತ್ತ ಮಂಗಳೂರಿನಲ್ಲಿ ವಿದೇಶದಿಂದ ರಟ್ಟಿನ ಪೆಟ್ಟಿಗೆ ಒಳಭಾಗದಲ್ಲಿ 242 ಗ್ರಾಂ ಚಿನ್ನದ ಪುಡಿಯಿಟ್ಟುಕೊಂಡು ಕಳ್ಳಸಾಗಣಿಕೆ ಮಾಡುತ್ತಿದ್ದ ಪ್ರಯಾಣಿಕನ್ನು ವಶಕ್ಕೆ ಪಡೆದು ಆತನಿಂದ 14.50 ಲಕ್ಷ ರೂ. ಮೌಲ್ಯದ ಚಿನ್ನದ ಪುಡಿಯನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು ಏರ್ಪೋರ್ಟ್ ನಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಕೀನ್ಯಾ (Kinya) ಮೂಲದ ಮಹಿಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈಕೆಯು ಏರಿಗೂ ಅನುಮಾನ ಬಾರದಂತೆ ಅಥಿಸ್ ಅಬಬಾದಿಂದ ಬೆಂಗಳೂರಿಗೆ ಇಥಿಯೊಪಿಯನ್ ಏರ್ ಲೈನ್ಸ್ ವಿಮಾನದಿಂದ ಗುಪ್ತಾಂಗದಲ್ಲಿ ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ವಿದೇಶದಿಂದ ಡ್ರಗ್ಸ್ ಸಾಗಿಸುತ್ತಿದ್ದಳು. ಅನುಮಾನ ಬಂದು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ಆಕೆಯಿಂದ ಕೋಟ್ಯಂತರ ರೂ. ಮೌಲ್ಯದ 1.12 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಬಳಿಕ ಆಕೆಯನ್ನು ಎನ್ ಸಿಬಿ ಅಧಿಕಾರಿಗಳ ವಶಕ್ಕೆ ಹಸ್ತಾಂತರಿಸಿದ್ದಾರೆ.
ರಟ್ಟಿನ ಪೆಟ್ಟಿಗೆ ಒಳಭಾಗದಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಪೌಡರ್ ವಶಕ್ಕೆ :
ಪ್ರಯಾಣಿಕರೊಬ್ಬರು ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರೋಪಿ ಪ್ರಯಾಣಿಕನೊಬ್ಬ, ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದಿದ್ದ.
ಈತನು ತನ್ನೊಂದಿಗೆ ತಂದಿದ್ದ ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ನಾಲ್ಕು ನೀಲಿ ಬಣ್ಣದ ಕಾರ್ಬನ್ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ನಡುವೆ ಚಿನ್ನದ ಪೌಡರ್ ಅಡಗಿಸಿಟ್ಟಿದ್ದ. ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಪತ್ತೆ ಹಚ್ಚಿ, ಆತನು ರಟ್ಟಿನಲ್ಲಿ ಬಚ್ಚಿಟ್ಟ 242 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 14.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಆ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.