ಬೆಂಗಳೂರು, ಸೆ.12 www.bengaluruwire.com : ರಾಜ್ಯ 19,935ಕ್ಕೂ ಹೆಚ್ಚಿನ ಪಡಿತರ ಅಂಗಡಿಗಳಿವೆ. ಸಾಕಷ್ಟು ರೈಸ್ ಮಿಲ್ ಗಳಿವೆ, ಆದರೆ ಇಲ್ಲಿ ಅಕ್ರಮವಾಗಿ ಅಗತ್ಯ ವಸ್ತುಗಳನ್ನು ಅಕ್ರಮ ಅವ್ಯವಹಾರವಾಗುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳವು 2020-21ರಿಂದ 2023-24ರ ಜೂನ್ 15ರ ತನಕ ಒಟ್ಟಾರೆ ರಾಜ್ಯದ ವಿವಿಧೆಡೆ 1,217 ಕಡೆಗಳಲ್ಲಿ ದಾಳಿ ನಡೆಸಿ, 65.74 ಕೋಟಿ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಈ ದಾಳಿಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 1,119 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ. ಹಾಗೂ 1,844 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣಗಳಲ್ಲಿ ಅಗತ್ಯ ವಸ್ತುಗಳಾದ ಅಕ್ಕಿ, ನುಚ್ಚು ಅಕ್ಕಿ, ಭತ್ತ, ಗೋಧಿ, ರಾಗಿ, ಜೋಳ, ಬೇಳೆ, ಬೇಳೆಕಾಳು, ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಗ್ಯಾಸ್ ಗಳನ್ನು ಅಕ್ರಮವಾಗಿಟ್ಟುಕೊಂಡು ಪ್ರಕರಣಗಳಲ್ಲಿ ವಶಪಡಿಸಿಕೊಂಡಿದೆ. 2020-21ರಿಂದ ಮೂರುವರೆ ವರ್ಷಗಳಲ್ಲಿ 9,676 ಟನ್ ಅಕ್ಕಿಯನ್ನು, 3,104 ಟನ್ ಭತ್ತ, 294 ಟನ್ ನುಚ್ಚು ಅಕ್ಕಿಯನ್ನು, 1950 ಟನ್ ರಾಗಿಯನ್ನು, 871 ಟನ್ ಜೋಳ, 27,451 ಲೀಟರ್ ಡೀಸೆಲ್, 5,171 ಲೀ ಪೆಟ್ರೋಲ್ ಅನ್ನು ವಶಪಡಿಸಿಕೊಂಡಿದೆ.
ಅನ್ನ ಭಾಗ್ಯದ ಯೋಜನೆಯನ್ನು ಪಾರದರ್ಶಕವಾಗಿ ನಾಗರಿಕರಿಗೆ – ಸರಬರಾಜು ಮಾಡುವ ನಿಟ್ಟಿನಲ್ಲಿ ಸರ್ಕಾರವು ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಆಧಾರಿತ ಬಯೋಮೇಟ್ರಿಕ್ (E-Pos) ಮುಖಾಂತರ ವಿತರಿಸಲಾಗುತ್ತದೆ. ಆದರೂ ಹಲವು ಕಡೆಗಳಲ್ಲಿ ಅಕ್ರಮ ಮಾರ್ಗಗಳಿಂದ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳು ಕಾಳಸಂತೆಗೆ ಅಕ್ರಮವಾಗಿ ಸೇರ್ಪಡೆಯಾಗುವುದು ಮಾತ್ರ ಸಂಪೂರ್ಣವಾಗಿ ನಿಂತಿಲ್ಲ.
ಪಡಿತರ ಆಹಾರ ಧಾನ್ಯಗಳ ಅವ್ಯವಹಾರ ತಡೆಗಟ್ಟಿ ಅರ್ಹ ಫಲಾನುಭವಿಗಳಿಗೆ ಪಡಿತರ ಆಹಾರ ಧಾನ್ಯಗಳು ತಲುಪುವುದನ್ನು ಖಾತರಿ ಪಡಿಸಿಕೊಳ್ಳಲು 1955ರ ಅಗತ್ಯ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಅಕ್ರಮ ತಡೆಯಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜೊತೆಗೆ ಆಹಾರ, ನಾಗರಿಕ, ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಅಧಿಕಾರಿಗಳನ್ನೊಳಗೊಂಡ “ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳ” ವನ್ನು ರಚಿಸಲಾಗಿದೆ.
ಆದರೆ ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳ 2021-22ರಲ್ಲಿ 472 ಕಡೆಗಳಲ್ಲಿ ದಾಳಿ ನಡೆಸಿ 442 ಎಫ್ ಐಆರ್ ದಾಖಲಿಸಿ, 783 ಜನರನ್ನು ಬಂಧಿಸಿತ್ತು. ಈ ಪ್ರಕರಣಗಳಲ್ಲಿ 30.46 ಕೋಟಿ ರೂ. ಮೌಲ್ಯದ ಅಗತ್ಯ ವಸ್ತುಗಳ್ನು ವಶಪಡಿಸಿಕೊಂಡಿತ್ತು. ಆದರೆ 2022-23ರಲ್ಲಿ 627 ಕಡೆಗಳಲ್ಲಿ ದಾಳಿ ನಡೆಸಿ 571 ಎಫ್ ಐಆರ್ ದಾಖಲಿಸಿ 874 ಜನರನ್ನು ಬಂಧಿಸಲಾಗಿತ್ತು. ಇವರುಗಳಿಂದ 29.77 ಕೋಟಿ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2023-24ರಲ್ಲಿ ಕೇವಲ 53 ಕಡೆ ಮಾತ್ರ ದಾಳಿ!! :
ಕಳೆದ ಮೂರವರೆ ವರ್ಷಗಳಿಂದ 2021-22 ಹಾಗೂ 2022-23ರನೇ ಸಾಲಿನಲ್ಲಿ ಮಾತ್ರ ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳ ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಆದರೆ 2023-24ರ ಐದೂವರೆ ತಿಂಗಳಿನಲ್ಲಿ ತನಿಖಾ ದಳ ಕೇವಲ 53 ಕಡೆಗಳಲ್ಲಿ ಮಾತ್ರ ದಾಳಿಯನ್ನು ನಡೆಸಿ, 46 ಎಫ್ ಐಆರ್ ಗಳನ್ನು ದಾಖಲಿಸಿ, 82 ಜನರನ್ನು ಬಂಧಿಸಿದೆ. ಕೇವಲ 2.91 ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಮಾತ್ರ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಅಲ್ಲಗೆ ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳ ಪರಿಣಾಮಕಾಯಾಗಿ ಕೆಲಸ ನಿರ್ವಹಿಸದಿರುವುದು ಉನ್ನತ ಮೂಲಗಳು ನೀಡಿದ ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ.
ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು :
10-07-2023ರಂದು ವಿಧಾನಪರಿಷತ್ತಿನಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವರಾಜ ಕೆ.ಎಚ್.ಮುನಿಯಪ್ಪ ಲಿಖಿತ ಉತ್ತರದಲ್ಲಿ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ 1,202 ಪ್ರಕರಣ ಪತ್ತೆ ಹಚ್ಚಲಾಗಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 1104 ಎಫ್ ಐಆರ್ ದಾಖಲಿಸಿ, 1814 ಜನರನ್ನು ಬಂಧಿಸಿ ಮೊಕದ್ದಮೆ ದಾಖಲು ಮಾಡಲಾಗಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿರುವುದಿಲ್ಲ ಎಂದು ಸದನಲ್ಲಿ ಹೇಳಿದ್ದರು.
ಭ್ರಷ್ಟ ಸರ್ಕಾರಿ ಅಧಿಕಾರಿಗಳು, ನೌಕರರ ಹಸ್ತಕ್ಷೇಪವಿಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಅಗತ್ಯ ವಸ್ತುಗಳ ಅವ್ಯವಹಾರ ನಡೆಯುವುದು ಸಾಧ್ಯವಾಗದ ಮಾತು. ಇದಕ್ಕೆ ಮೇಲೆ ತಿಳಿಸಿದ ತಾಜಾ ಉದಾಹರಣೆಗಳೇ ಸಾಕ್ಷಿ. ಆದರೂ ಈ ತನಕ ಒಬ್ಬೇ ಒಬ್ಬ ಅಧಿಕಾರಿ, ಸಿಬ್ಬಂದಿ ತಪ್ಪಿತಸ್ತ ಎಂಬುದು ಪತ್ತೆಯಾಗದಿರುವುದು ದುರದೃಷ್ಟಕರ.
ಆಗಸ್ಟ್ ತಿಂಗಳಲ್ಲಿ ಶೇ.97.4ರಷ್ಟು ಹಣ ಡಿಬಿಟಿ ಮುಖಾಂತರ ವರ್ಗಾವಣೆ :
ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ರಾಜ್ಯದಲ್ಲಿ ಅಂತ್ಯೋದಯ (AAY) ಮತ್ತು ಬಿಪಿಎಲ್ ಕಾರ್ಡ್ (PHH) ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ವಿತರಿಸುವುದಾಗಿ ಘೋಷಿಸಿತ್ತು.ಈ ಅಕ್ಕಿಯ ಅಗತ್ಯವನ್ನು ಭಾರತೀಯ ಆಹಾರ ನಿಗಮ (FCI) ಯಿಂದ ಅಕ್ಕಿಯನ್ನು ಖರೀದಿಸುವ ಮೂಲಕ ಪೂರೈಸಲು ಯೋಜಿಸಲಾಗಿತ್ತು.ಆದರೆ, ಕೇಂದ್ರ ಸರ್ಕಾರ I ಜುಲೈ 2023 ರಿಂದ ಒಎಮ್ಎಸ್ಎಸ್ (ಡಿ) OMSS(D) ಅಕ್ಕಿಯ ಮಾರಾಟವನ್ನು ಸ್ಥಗಿತಗೊಳಿಸಿದೆ.
ಹೀಗಾಗಿ ರಾಜ್ಯ ಸರ್ಕಾರ 20223ರ ಜುಲೈ ನಿಂದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ನೇರ ನಗದು ವಗಾ೯ವಣೆಯನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ ಒಟ್ಟು 1,03,68,897 ಕೋಟಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿಗಳಿದ್ದು, ಅದರಲ್ಲಿ 3,62,43,064 ಸದಸ್ಯರಿದ್ದಾರೆ. ಇವರಿಗೆಲ್ಲಾ ಮಾಸಿಕವಾಗಿ ಒಟ್ಟಾರೆ 605.90 ಕೋಟಿ ರೂ. ಹಣವನ್ನು ಅವರ ನೋಂದಾಯಿತ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅನ್ನಭಾಗ್ಯ ಯೋಜನೆಯಡಿ 5ಕೆಜಿ ಅಕ್ಕಿಯ ಹೆಚ್ಚುವರಿ ಪಡಿತರ ಕುರಿತು ಡಿಬಿಟಿ ವಿಧಾನದ (DBT) ಮೂಲಕ ನೇರ ಹಣ ವರ್ಗಾವಣೆ ಯನ್ನು ಶೇ.97.4ರಷ್ಟು ಪಡಿತರ ದಾರರ ಖಾತೆಗೆ ಆಗಸ್ಟ್ ತಿಂಗಳ ಹಣವನ್ನು ಪಾವತಿ ಮಾಡಲಾಗಿದೆ ಎಂದು ಇಲಾಖೆಯ ಸಚಿವರು ಹೇಳಿದ್ದಾರೆ.
ಅವ್ಯವಹಾರ ತಡೆಗೆ ತನಿಖಾ ದಳ ಚುರುಕಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ :
ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ ಉದ್ಯಮವಾದ ಭಾರತೀಯ ಆಹಾರ ನಿಗಮದಿಂದ ಅಕ್ಕಿಯು ಅಗತ್ಯ ಪ್ರಮಾಣದ ಅಕ್ಕಿ ಲಭ್ಯವಾಗದ ಕಾರಣ ಫಲಾನುಭವಿಗಳ ಖಾತೆಗೆ ನೇರ ನಗದು ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಗತ್ಯ ಆಹಾರ ವಸ್ತುಗಳ ಕಳ್ಳ ಸಾಗಾಣಿಕೆ ಮೇಲೆ ಹದ್ದುಗಣ್ಣನಿಟ್ಟು, ಅಕ್ರಮವಾಗಿ ಇಂತಹ ಅಗತ್ಯ ವಸ್ತುಗಳ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳದ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವ್ಯವಹಾರ ಪತ್ತೆ, ದಾಳಿ ನಡೆಸುವ ಕಾರ್ಯವನ್ನು ಚುರುಕುಗೊಳಿಸುವ ಅನಿವಾರ್ಯತೆಯಿದೆ ಎಂಬ ಅಭಿಪ್ರಾಯ ನಾಗರೀಕ ವಲಯದಿಂದ ವ್ಯಕ್ತವಾಗುತ್ತಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.