ಬೆಂಗಳೂರು, ಸೆ.11 www.bengaluruwire.com : ಬಿಬಿಎಂಪಿಯಲ್ಲಿ ಎಂಜಿನಿಯರಿಂಗ್ ವಿಭಾಗ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಗುತ್ತಿಗೆ ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನವಾಗಿಲ್ಲ ಎಂದು “ಬೆಂಗಳೂರು ವೈರ್” ವರದಿಯಿಂದ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಆ ಮೂಲಕ ಎಂಜಿನಿಯರಿಂಗ್ ವಿಭಾಗದ 128 ಮೇ ತಿಂಗಳ ಸಂಬಳ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ 22 ಎಂಜಿನಿಯರ್ ಗಳಿಗೆ ಆಗಸ್ಟ್ ತನಕ ವೇತನ ಪಾವತಿಯಾಗಿದೆ. ಇದು “ಬೆಂಗಳೂರು ವೈರ್” ವರದಿ ಪರಿಣಾಮ. ಅಲ್ಲದೆ “ಬೆಂಗಳೂರು ವೈರ್” ಕನ್ನಡ ವೆಬ್ ನ್ಯೂಸ್ ಪೋರ್ಟಲ್ ಸ್ವತಂತ್ರ ಮತ್ತು ವಾಸ್ತವ ಸುದ್ದಿಯನ್ನು ಸಾಮಾಜಿಕ ಕಾಳಜಿಯಿಂದ ಹಾಕಿರುವುದರ ಪರಿಣಾಮವಾಗಿದೆ.
ಇನ್ನು ಬಿಬಿಎಂಪಿ ಕೇಂದ್ರ ಕಚೇರಿ ಯೋಜನೆ, ರಸ್ತೆ ಮತ್ತು ಮೂಲಭೂತ ಸೌಕರ್ಯ, ವಲಯ ಕಚೇರಿ ಹಾಗೂ ವಾರ್ಡ್ ಮತ್ತಿತರ ಕಡೆ ಪ್ರಧಾನ ಎಂಜಿನಿಯರ್ ಕಚೇರಿಯಿಂದ 128 ಕಿರಿಯ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಗಳನ್ನು ಕೆಎಎಸ್ ಎಫ್ -9 ಇನ್ ಫ್ರಾ ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯಿಂದ ಮೇ ತಿಂಗಳ ವೇತನ ಪಾವತಿಯಾಗಿದೆ.
ಅದೇ ರೀತಿ ಮಾನವ ಸಂಪನ್ಮೂಲ ಪೂರೈಸುವ ಲಿಬ್ರಾ ಡಿಟೆಕ್ಟಿವ್ ಸಂಸ್ಥೆಯು, ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ 22 ಎಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿತ್ತು. ಆದರೆ ಈ ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನ ಪಾವತಿಯಾಗಿರಲಿಲ್ಲ. ಯಾವಾಗ ಆಗಸ್ಟ್ 13ರಂದು “BW Special | BBMP No Salary | ಬಿಬಿಎಂಪಿ 150 ಕಾಂಟ್ರಾಕ್ಟ್ ಎಂಜಿನಿಯರ್ ಗಳಿಗೂ ತಪ್ಪದ ಗೋಳು : ಮೇ ನಿಂದ ಸಂಬಳವಿಲ್ಲ” ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಸಾರ ಮಾಡಿತೋ, ಆಗ ಬಿಬಿಎಂಪಿ ಸಿಎಒ ಕಚೇರಿಯಲ್ಲಿ ಹಲವು ದಿನಗಳಿಂದ ವಿಲೇವಾರಿಯಾಗದೆ ಉಳಿದ ಬಾಕಿ ವೇತನ ಪಾವತಿ ಬಿಲ್ ಕ್ಲಿಯರ್ ಆಗಿ, ಗುತ್ತಿಗೆ ಎಂಜಿನಿಯರ್ ಗಳಿಗೆ ವೇತನ ಪಾವತಿಯಾಗಿದೆ.
ಹೊರಗುತ್ತಿಗೆ ಎಂಜಿನಿಯರ್ ಗಳ ವೇತನ ಪಾವತಿಗೆ 6 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ ಆ ಅನುದಾನವನ್ನು ಹಳೆಯ ಬಾಕಿ ಪಾವತಿಗೆ ಬಳಸಿರುವ ಕಾರಣ ಆ ಹಣ ಕರ್ಚಾಗಿದೆ. ಹಾಗಾಗಿ ಏಪ್ರಿಲ್ ನಿಂದ ಹೊರಗುತ್ತಿಗೆ ಎಂಜಿನಿಯರ್ ಗಳನ್ನು ಪೂರೈಸುವ ಗುತ್ತಿಗೆ ಸಂಸ್ಥೆಗಳಿಗೆ ಹಣ ಪಾವತಿಯಾಗಿಲ್ಲ. ಅನುದಾನ ಕೊರತೆಯಿಂದ ವೇತನ ಪಾವತಿಯಾಗಿಲ್ಲ ಎಂದು ಗುತ್ತಿಗೆ ಎಂಜಿನಿಯರ್ ಒಬ್ಬರು ಬೆಂಗಳೂರು ವೈರ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದರು. ಇವೆಲ್ಲದರ ಬಗ್ಗೆ “ಬೆಂಗಳೂರು ವೈರ್” ಸವಿವರವಾಗಿ ಸುದ್ದಿ ಪ್ರಸಾರ ಮಾಡಿತ್ತು.