ಬೆಂಗಳೂರು, ಸೆ.10 www.bengaluruwire.com : ಬೆಂಗಳೂರಿನ ಅತಿ ಹಳೆಯ ಸಹಕಾರ ಬ್ಯಾಂಕ್ ಗಳಲ್ಲಿ ಒಂದಾದ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ 2022-23ನೇ ಸಾಲಿನಲ್ಲಿ ಒಟ್ಟು 14.57 ಕೋಟಿ ಲಾಭಾಂಶವನ್ನು ದಾಖಲಿಸಿದ್ದು, ಬ್ಯಾಂಕಿನ ಠೇವಣಿ ಮೊತ್ತ 563.91 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಭಾನುವಾರ ಚಾಮರಾಜಪೇಟೆಯಲ್ಲಿ ನಡೆದ ಬ್ಯಾಂಕಿನ 57ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಪಿ.ಎನ್.ಶ್ರೀಪತಿರಾವ್ ಮಾತನಾಡುತ್ತಾ, 2020-21ರಲ್ಲಿ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನ ಠೇವಣಿಗಳ ಮೊತ್ತ 489.77 ಕೋಟಿ ರೂ.ಗಳಾಗಿತ್ತು ಅದು 2021-22ನೇ ಸಾಲಿನಲ್ಲಿ 525.65 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 2022-23ನೇ ಸಾಲಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿರುವ ಮೊತ್ತ 563.91 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಇದೇ ಸಂದರ್ಭದಲ್ಲಿ ಬ್ಯಾಂಕಿನ ನಿವ್ವಳ ಲಾಭ ಹಿಂದಿನ ವರ್ಷ 9.88 ಕೋಟಿ ರೂ.ಗಳಿಂದ 14.57 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಬ್ಯಾಂಕಿನ ಆದಾಯವು 56.51 ಕೋಟಿಯಾಗಿದೆ ಎಂದು ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದರು.
ಠೇವಣಿ ಸಂಗ್ರಹಣೆಯಲ್ಲಿನ ಹೆಚ್ಚಳದ ಜೊತೆಯಲ್ಲಿ ಸಾಲ ವಿತರಣೆ ಮತ್ತು ವಸೂಲಿ ಮೊತ್ತದಲ್ಲಿ ಗಣನೀಯ ಏರಿಕೆ ಕಂಡಿರುವುದರಿಂದ ಲಾಭ ಗಳಿಕೆಯಲ್ಲಿ ಶೇ.47.41 ಏರಿಕೆ ಕಂಡಿದೆ. ಬ್ಯಾಂಕಿನ ಅನುತ್ಪಾದಕ ಆಸ್ತಿಗಳ ಪ್ರಮಾಣ (NPA) ಒಟ್ಟು ಸಾಲದ ಶೇ.17.18ರಷ್ಟಿದ್ದು, ನಿವ್ವಳ ಎನ್.ಪಿ.ಎ ಪ್ರಮಾಣವು ಶೇ.4.4ಕ್ಕೆ ಇಳಿಕೆಯಾಗಿದೆ. 2021-22ರ ಸಾಲಿನಲ್ಲಿ ನಿವ್ವಳ ಎನ್.ಪಿ.ಎ ಪ್ರಮಾಣವು ಶೇ.15.82ರಷ್ಟಿತ್ತು. ನಿವ್ವಳ ಎನ್.ಪಿ.ಎ ಪ್ರಮಾಣವು ಶೇ.15.82ರಷ್ಟಿತ್ತು.
ಬ್ಯಾಂಕು ನೀಡಿರುವ ಒಟ್ಟು ಸಾಲದ ಪೈಕಿ ಶೇ.99ಕ್ಕೂ ಹೆಚ್ಚಿನ ಸಾಲಗಳು ಸಂಪೂರ್ಣ ಭದ್ರತೆಯಿಂದ ಕೂಡಿದ್ದು, ಚರ-ಸ್ಥಿರಾಸ್ತಿಗಳನ್ನು ಬ್ಯಾಂಕಿನ ಅಡಮಾನವಾಗಿಟ್ಟುಕೊಳ್ಳಲಾಗಿದೆ. ಈ ಬಾರಿ ಬ್ಯಾಂಕಿನಲ್ಲಿ 11,839 ಸದಸ್ಯರಿದ್ದು ರಿಸರ್ವ್ ಬ್ಯಾಂಕ್ (RBI)ನ ಒಪ್ಪಿಗೆ ಬಳಿಕ ಶೇ.4ರಷ್ಟು ಲಾಭಾಂಶ ಹಂಚಿಕೆ ಮಾಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷರಾದ ಪಿ.ಎನ್.ಶ್ರೀಪತಿರಾವ್ ಸಭೆಗೆ ತಿಳಿಸಿದರು.
ಇದಕ್ಕೂ ಮುನ್ನ ಬ್ಯಾಂಕಿನ ಸದಸ್ಯರು ಬ್ಯಾಂಕಿನ ಲಾಭಮಶ ಹಂಚಿಕೆಯನ್ನು ಶೇ.4ರ ಬದಲಿಗೆ ಶೇ.6ರಷ್ಟು ಏರಿಕೆ ಮಾಡುವಂತೆ ತಮ್ಮ ಅಭಿಪ್ರಾಯ ಸಲ್ಲಿಸಿದರು. ಮತ್ತೋರ್ವ ಸದಸ್ಯರು ಬ್ಯಾಂಕಿನ ಅನುತ್ಪಾದಕ ಆಸ್ತಿಗಳನ್ನು ನಿವ್ವಳ ಶೇ.4.44ಕ್ಕೆ ಇಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಅಧಿಕಾರಿ, ಸಿಬ್ಬಂದಿಗೆ ಅಭಿನಂದಿಸುವುದಾಗಿ ಹೇಳಿದರು.
2023-24ನೇ ಸಾಲಿಗೆ 600 ಕೋಟಿ ರೂ. ಠೇವಣಿ ಸಂಗ್ರಹದ ಗುರಿ, 420 ಕೋಟಿ ರೂ.ಗಳ ಸಾಲ ವಿತರಣೆ, 5.50 ಕೋಟಿ ರೂ. ನಿವ್ವಳ ಲಾಭ ಹಾಗೂ ಬ್ಯಾಂಕಿನ ಅನುತ್ಪಾದಕ ಆಸ್ತಿಗಳನ್ನು ನಿವ್ವಳ ಶೇ.3ರ ಒಳಗೆ ಇಳಿಕೆ ಮಾಡುವ ಗುರಿ ಹಾಗೂ ವಾರ್ಷಿಕ ಯೋಜನೆಯ ವಿವರವನ್ನು ಸಾಮಾನ್ಯ ಸಭೆಯಲ್ಲಿ ಬ್ಯಾಂಕಿನ ಕಾರ್ಯದರ್ಶಿ ಕೆ.ಶ್ಯಾಮಸುಂದರ ಐತಾಳರು ತಿಳಿಸಿದರು.
57ನೇ ವಾರ್ಷಿಕ ಸಾಮಾನ್ಯ ಸಭೆ ಬಳಿಕ ಕಾರ್ಯಕ್ರಮದಲ್ಲಿ 2020-21ನೇ ಸಾಲಿನ 63 ಜನ ಮಕ್ಕಳಿಗೆ ಹಾಗೂ 2021-22ನೇ ಸಾಲಿನ 92 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಯೋಜನೆಯಲ್ಲಿ ಪ್ರಶಸ್ತಿ, ನಗದು ಚೆಕ್ ನೀಡಿ ಸನ್ಮಾನಿಸಲಿದ್ದಾರೆ. ಸಂಜೆಯ ನಂತರ ಕರಾವಳಿಯ ಕಲೆ ಯಕ್ಷಗಾನವನ್ನು ಏರ್ಪಡಿಸಲಾಗಿದೆ.
57ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಡಾ.ಪಿ.ವಿಷ್ಣುಮೂರ್ತಿ ಐತಾಳ, ಎಸ್.ಅರುಣಕುಮಾರ್ ಅಡಿಗ ಸೇರಿದಂತೆ 14 ಮಂದಿ ನಿರ್ದೇಶಕರು, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರುಗಳು ಪಾಲ್ಗೊಂಡಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.