ಬೆಂಗಳೂರು, ಸೆ.6 www.bengaluruwire.com : ರಾಜ್ಯದಲ್ಲಿನ ಡೆಂಗ್ಯೂ ಪಾಸಿಟಿವ್ ಪ್ರಕರಣಕ್ಕೆ ಹೋಲಿಸಿದ್ರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣವೇ ಹೆಚ್ಚಾಗಿರುವುದು ಆರೋಗ್ಯ ಇಲಾಖೆ ಮಾಹಿತಿಯಿಂದ ತಿಳಿದು ಬರುತ್ತದೆ. ಸಿಲಿಕಾನ್ ಸಿಟಿಯ ಪಾಲಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.
2023ರ ಜನವರಿಯಿಂದ ಸೆಪ್ಟೆಂಬರ್ 2ನೇ ತಾರೀಖಿನ ವರೆಗೆ ರಾಜ್ಯದಲ್ಲಿ ಒಟ್ಟಾರೆ 6,706 ಡೆಂಗ್ಯೂ ಜ್ವರ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಆ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 3,454 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇನ್ನು ಪಾಲಿಕೆ ಹೊರತುಪಡಿಸಿ ರಾಜ್ಯದಲ್ಲಿ 3,252 ಪ್ರಕರಣಗಳು ಕಂಡು ಬಂದಿದೆ. ಇದನ್ನು ಗಮನಿಸಿದರೆ ವರ್ಷಂಪ್ರತಿ ಕೋಟ್ಯಾಂತರ ರೂಪಾಯಿ ನಗರದ ಸಮುದಾಯ ಆರೋಗ್ಯದ ಮೇಲೆ ಕರ್ಚು ಮಾಡುವ ಪಾಲಿಕೆ ಸಾರ್ವಜನಿಕ ಆರೋಗ್ಯ ವಿಭಾಗ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಜುಲೈ ತಿಂಗಳಿಗೆ ಹೋಲಿಸಿದ್ರೆ ಆಗಸ್ಟ್ ಮತ್ತು ಸೆಪ್ಟೆಂಬರ್ ಆರಂಭದಿಂದ ಹೆಚ್ಚಾಗಿರುವುದು ಕಂಡು ಬಂದಿದೆ. ಜೂನ್ ತಿಂಗಳಿನಲ್ಲಿ ಕೇವಲ 25 ಪ್ರಕರಣಗಳಿದ್ದರೆ, ಜುಲೈ ತಿಂಗಳಿನಲ್ಲಿ 1,649 ಪ್ರಕರಣಗಳು ಕಂಡು ಬಂದಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ 2,374ನಷ್ಟು ವರದಿಯಾಗಿತ್ತು. ಆದರೆ ಸೆಪ್ಟೆಂಬರ್ 1ರಿಂದ 3ನೇ ತಾರೀಖಿನವರೆಗೆ ಕೇವಲ ಮೂರು ದಿನದಲ್ಲಿ ಈ ಪ್ರಮಾಣ 181ಕ್ಕೆ ತಲುಪಿದೆ. ರಸ್ತೆ, ಖಾಲಿ ನಿವೇಶನ, ಗುಂಡಿ ಬಿದ್ದ ತೆರೆದ ನೀರಿನ ಸ್ಥಳದಲ್ಲಿ ಸೊಳ್ಳೆಗಳು ಜಾಸ್ತಿ ಕಾಣಿಸಿಕೊಳ್ಳುತ್ತಿದೆ. ಆ ಮೂಲಕ ನಾಗರೀಕರು ಡೆಂಗ್ಯೂ ಕಾಯಿಲೆಗೆ ಒಳಗಾಗುತ್ತಿರುವುದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದವರು ನೀಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2022ರ ಇಡೀ ವರ್ಷಕ್ಕಿಂತ ಈ ಬಾರಿ, 8 ತಿಂಗಳಲ್ಲಿ ಡೆಂಗ್ಯೂ ಪಾಸಿಟಿವ್ ಬಿಬಿಎಂಪಿಯಲ್ಲಿ ಹೆಚ್ಚಳ :
2022ರ ಇಸವಿಯಲ್ಲಿ ಇಡೀ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 5,522 ಪ್ರಕರಣಗಳು ವರದಿಯಾಗಿತ್ತು. ಅದರಲ್ಲಿ ಬಿಬಿಎಂಪಿಯೊಂದರಲ್ಲೇ 1,058 ಪ್ರಕರಣಗಳು ಹಾಗೂ 4,464 ಡೆಂಗ್ಯೂ ಪಾಸಿಟಿವ್ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿತ್ತು. ಆದರೆ ಈ ಬಾರಿ ಕೇವಲ 8 ತಿಂಗಳು ಮೂರು ದಿನದಲ್ಲಿ 6,706 ಡೆಂಗ್ಯೂ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದ ಮೇಲೆ ಹೆಚ್ಚಿನ ಜವಾಬ್ದಾರಿಯಿರೋದು ತಿಳಿದು ಬರುತ್ತದೆ.
ಡೆಂಗ್ಯೂ ನಿಯಂತ್ರಣದ ಬಗ್ಗೆ ಸಾರ್ವಜನಿಕ ಆರೋಗ್ಯ ವಿಭಾಗದ ನಿರ್ಲಕ್ಷ್ಯ?:
ಸಾಮಾನ್ಯವಾಗಿ ಮಳೆಗಾಲದಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಕರಣಗಳು ಕಂಡು ಬರುವುದು ಸರ್ವೇ ಸಾಮಾನ್ಯ. ಈ ವಿಚಾರ ಗೊತ್ತಿದ್ದರೂ, ಪಾಲಿಕೆ ಆರೋಗ್ಯ ವಿಭಾಗದ ಸಮುದಾಯ ಆರೋಗ್ಯ ತಂಡ ಡೆಂಗ್ಯೂ ನಿಯಂತ್ರಿಸಲು ಹೆಚ್ಚಾಗಿ ಆಸಕ್ತಿ ವಹಿಸದೆ, ಇದೀಗ ಡೆಂಗ್ಯೂ ಪ್ರಕರಣ ಕಳೆದ ಒಂದು ವಾರದಿಂದ ಹೆಚ್ಚಾಗಿರುವ ಹಿನ್ನಲೆಯಲ್ಲಿ ದಿಢೀರ್ ಎಂದು ಎಚ್ಚೆತ್ತುಕೊಂಡು ನಗರದ 198 ವಾರ್ಡ್ ಗಳಲ್ಲಿ ಡೆಂಗ್ಯೂ ನಿಯಂತ್ರಿಸುವ ಸಲುವಾಗಿ ಅರಿವು ಮೂಡಿಸುವ ಹಾಗೂ ಔಷಧಿ ಸಿಂಪಡಣೆ ಕಾರ್ಯಕ್ರಮವನ್ನು ತೀವ್ರವಾಗಿ ಹೆಚ್ಚಿಸುತ್ತಿರುವುದಾಗಿ ತಿಳಿಸಿದೆ. ಆರೋಗ್ಯ ಇಲಾಖೆಯ ಉದಾಸೀನ ಕಾರ್ಯದ ಬಗ್ಗೆ ಹಿರಿಯ ಅಧಿಕಾರಿಗಳು, ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳು ತೀವ್ರವಾಗಿ ತರಾಟೆ ತೆಗೆದುಕೊಂಡಿವೆ ಎಂದು ತಿಳಿದು ಬಂದಿದೆ.
ಔಷಧಿ ಸಿಂಪಡಣೆ – ಜಾಗೃತಿ ಕಾರ್ಯಕ್ರಮವೆಂಬ ಶೋ ಆಫ್ :
ನಗರದಲ್ಲಿ ತೀವ್ರತರ ಸೊಳ್ಳೆ ನಿಯಂತ್ರಣ ಕಾರ್ಯವನ್ನು ಮುಂದಿನ ಆದೇಶದವರೆಗೆ ಮುಂದುವರೆಸಲಾಗುತ್ತದೆ. ಜೊತೆಗೆ ಡೆಂಗ್ಯೂ ಕುರಿತಂತೆ ಶಾಲಾ ಕಾಲೇಜುಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಂದುವರಿದು, ನೀರು ನಿಂತ ಸ್ಥಳಗಳಲ್ಲಿ ಮತ್ತು ಮೋರಿಗಳಿಗೆ ಔಷಧಿ ಸಿಂಪಡಣೆ ಕಾರ್ಯ ಮಾಡಲಾಗುತ್ತದೆ. ಪಾಲಿಕೆಯ ಕಸದ ವಾಹನಗಳಲ್ಲಿಯೂ ಸಹ ಧ್ವನಿವರ್ಧಕಗಳ ಮೂಲಕ ಡೆಂಗ್ಯೂ ಬಗ್ಗೆ ಅರಿವು ಮೂಡಿಸುವ ಪ್ರಚಾರ ಮಾಡಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಬಾಲಸುಂದರ್ ಅವರು ತಿಳಿಸಿದ್ದಾರೆ.
ಕೊಳಚೆ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ತಂಡಗಳನ್ನು ರಚಿಸಿಕೊಂಡು ಡೆಂಗ್ಯೂ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಮೇಲ್ವಿಚಾರಣೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಲ್ಲಾಳ ವಾರ್ಡಿನ ನಿವಾಸಿ ವಿನೋದ್ ಅವರನ್ನು ಬೆಂಗಳೂರು ವೈರ್, ಪಾಲಿಕೆ ಸಾರ್ವಜನಿಕ ಆರೋಗ್ಯ ವಿಭಾಗ ಡೆಂಗ್ಯೂ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ನೀರು ನಿಂತ ಸ್ಥಳಗಳಲ್ಲಿ ಮತ್ತು ಮೋರಿಗಳಿಗೆ ಔಷಧಿ ಸಿಂಪಡಣೆ ಕಾರ್ಯ ಮಾಡುತ್ತಿದೆಯಾ ಎಂದು ಪ್ರಶ್ನಿಸಿದಾಗ, “ನೀರು ನಿಂತ ಸ್ಥಳಗಳಲ್ಲಿ ಮತ್ತು ಮೋರಿಗಳಿಗೆ ಔಷಧಿ ಸಿಂಪಡಣೆಯನ್ನು ಬಿಬಿಎಂಪಿ ಸಿಬ್ಬಂದಿ ಎಲ್ಲೆಡೆ ಮಾಡುತ್ತಿಲ್ಲ. ಕೇವಲ ತೋರಿಕೆಗೆ ಯಾವತ್ತೋ ಒಮ್ಮೆ ಹೀಗೆ ಬಂದು ಹಾಗೆ ಹೋಗಿ ಸಿಂಪಡಣೆ ಶಾಸ್ತ್ರ ಮಾಡುತ್ತಾರಷ್ಟೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.