ಬೆಂಗಳೂರು, ಸೆ.6 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಈ ಬಾರಿಯೂ ಸರ್ಕಾರದ ಆದೇಶವಿದ್ದರೂ, ಯಾರನ್ನು ವರ್ಗಾವಣೆ ಮಾಡಿರಲಿಲ್ಲ. ಆದರೆ ಸೆ.1ರಂದು ಪಾಲಿಕೆಯ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ದಿನ ಕಂದಾಯ ವಿಭಾಗದ 19 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಒಂದೇ ಬಾರಿಗೆ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ವಿಭಾಗದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಏಕಾಏಕಿ ಬೇರೆ ಕಡೆ ವರ್ಗಾವಣೆ ಮಾಡಿರುವುದರಿಂದ ದಿನನಿತ್ಯದ ಕಂದಾಯ ವಿಭಾಗದ ಕೆಲಸ ಕಾರ್ಯಗಳಿಗೆ ಅಡಚಣೆಯಾಗಲಿದೆ ಎಂಬ ದೂರುಗಳು ಕೇಳಿ ಬಂದಿದೆ. ಈ 19 ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆ ಹಿಂದೆ ಆ ಕ್ಷೇತ್ರದ ಶಾಸಕರು ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 18-08-2023ರಂದು (Letter No.2374) ಪತ್ರ ಬರೆದು 19 ಜನರ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದರು. ಸಚಿವರು ನೀಡಿದ ಪಟ್ಟಿಯ ಆಧಾರದಲ್ಲಿ ಈ ವರ್ಗಾವಣೆ ಮಾಡಲಾಗಿದೆ ಎಂದು ಬಿಬಿಎಂಪಿಯ ಮೂಲಗಳು ತಿಳಿಸಿವೆ.
ವರ್ಗಾವಣೆ ನಿಯಮ ಉಲ್ಲಂಘನೆ?:
ರಾಜ್ಯ ಸರ್ಕಾರದ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಯಲ್ಲಿ ಲಭ್ಯವಿರುವ ಒಟ್ಟಾರೆ ನೌಕರರಲ್ಲಿ ಶೇ.6ಕ್ಕಿಂತ ಹೆಚ್ಚು ವರ್ಗಾವಣೆ ಮಾಡುವಂತಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಈಗ ಒಂದೇ ದಿನ 19 ಜನ ಅಧಿಕಾರಿ, ನೌಕರರನ್ನು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿನ ಕಂದಾಯ ವಿಭಾಗದಲ್ಲಿನ ಕಚೇರಿಗಳಿಗೆ ವರ್ಗಾವಣೆ ಮಾಡಿ ಪಾಲಿಕೆ ಉಪ ಆಯುಕ್ತರಾದ ಮಂಜುನಾಥ್ ಆದೇಶಿಸಿದ್ದಾರೆ. ಈ ಮೂಲಕ ಒಂದೇ ವಿಧಾನಸಭಾ ಕ್ಷೇತ್ರದ ಕಂದಾಯ ವಿಭಾಗದಿಂದ ಶೇ.50ಕ್ಕಿಂತ ಹೆಚ್ಚು ವರ್ಗಾವಣೆ ಆದಂತಾಗಿದೆ.
ಬಲ್ಕ್ ಟ್ರಾನ್ಸ್ ಫರ್ ಮಾಡಲು ಈ ಕಾರಣವಿದೆಯಾ?:
ಬಿಟಿಎಂ ವಿಧಾನಸಭಾ ಕ್ಷೇತ್ರದ ಕಂದಾಯ ವಿಭಾಗದಲ್ಲಿ ಪ್ರಸ್ತುತ 47 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ 19 ಮಂದಿ ವರ್ಗಾವಣೆ ಹೊಂದಿದ್ದಾರೆ. ಹೇಗಿದ್ದರೂ ಬಿಬಿಎಂಪಿಯಲ್ಲಿ 225 ವಾರ್ಡ್ ಫುನರ್ ವಿಂಗಡಣೆ ಕಾರ್ಯ ಮುಕ್ತಾಯಗೊಂಡು ಅಂತಿಮ ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಇದಾದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಯಾಗಲಿದೆ. ಈ ಸಂದರ್ಭದಲ್ಲಿ ಹಳೆಯ ಕಂದಾಯ ಅಧಿಕಾರಿ, ನೌಕರರಿದ್ದರೆ, ಅವರವರ ಅನುಕೂಲಕ್ಕೆ ತಕ್ಕಂತೆ ಮತದಾರರನ್ನು ಸೇರ್ಪಡಿಸುವ ಕೆಲಸಕ್ಕೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಇವೆರೆಲ್ಲರ ಭರಪೂರ ವರ್ಗಾವಣೆಯಾಗಿರುವ ಸಾಧ್ಯತೆಯಿರಬಹುದು.
ವರ್ಗಾವಣೆಯಾದವರು :
ಮೂವರು ವ್ಯವಸ್ಥಾಪಕರು, ಒರ್ವ ಮೌಲ್ಯಮಾಪಕರು, 8 ಕಂದಾಯ ಪರಿವೀಕ್ಷಕರು (Revenue Inspector), 7 ಕಂದಾಯ ವಸೂಲಿಗಾರರು (Tax Inspector) ರವರು ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವರು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೆ, ಕೆಲವರು ಇತ್ತೀಚೆಗಷ್ಟೆ ವರ್ಗವಾಗಿ ಅಲ್ಲಿಗೆ ಬಂದಿದ್ದರು. ಒಟ್ಟಾರೆ ಎಲ್ಲರನ್ನೂ ಒಮ್ಮೆಗೆ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.
ಕಳೆದ ವರ್ಷ ಸಾರಿಗೆ ಸಚಿವ ಹಾಗೂ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾರೆಡ್ಡಿ ಈ ಹಿಂದೆ ಪ್ರತಿನಿಧಿಸಿದ್ದ ಜಯನಗರ ವಿಧಾನಸಭಾ ಕ್ಷೇತ್ರದಲ್ಲೂ ಸಹ ಇದೇ ರೀತಿಯಾಗಿ ಒಟ್ಟಾರೆಯಾಗಿ ಒಂದೇ ಬಾರಿಗೆ ಕಂದಾಯ ವಿಭಾಗದ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲೂ ಚರ್ಚೆಯಾಗಿತ್ತು ಎಂಬುದನ್ನು ಸ್ಮರಿಸಬಹುದು.
ಇದೀಗ ಇದೇ ರೀತಿಯ ಪ್ರಕರಣ ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಆಗಿರೋದು ಮತ್ತೊಂದು ಸುತ್ತಿನ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.