ಬೆಂಗಳೂರು, ಸೆ.5 www.bengaluruwire.com : ದೇಶದ ಎರಡನೇ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನವನ್ನು ಭಾರತಾದ್ಯಂತ ಇಂದು ಹಲವು ಶಿಕ್ಷಣ ಸಂಸ್ಥೆಗಳು ಸಂಭ್ರಮದಿಂದ ಶಿಕ್ಷಕರ ದಿನಾಚರಣೆಯ ಹೆಸರಿನಲ್ಲಿ ಆಚರಿಸಿದರು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI)ಯು ಇಂದು ಶಿಕ್ಷಕರ ದಿನವನ್ನು ಬಹಳ ಅರ್ಥಪೂರ್ಣವಾಗಿ ಹಮ್ಮಿಕೊಂಡಿತ್ತು.
ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಬಿಎಂಸಿಆರ್ ಐನ ಎಲ್ಲಾ ಶಿಕ್ಷಕರಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಚಿವರು ಬಿಎಂಸಿಆರ್ ಐ ಕೈಗೊಂಡ ಬೆಂಗಳೂರರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಹೊಸ ಪ್ರದರ್ಶನ ಮಂಡಳಿ, ವಿಕ್ಟೋರಿಯಾ ಆಸ್ಪತ್ರೆಯ ನೋವಿನ ಕ್ಲೀನಿಕ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿನ 2ನೇ ಅತ್ಯಾಧುನಿಕ ಎಂಆರ್ ಐ ಯಂತ್ರ, ಸಂಸ್ಥೆಯ ನೂತನ ಕ್ಯಾಂಟೀನ್, ಆಟದ ಮೈದಾನದ ಫ್ಲಡ್ ಲೈಟ್ ಸೇರಿದಂತೆ ಹಲವು ಸೌಲಭ್ಯಗಳಿಗೆ ಸಚಿವರು ಚಾಲನೆ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆ ನೋವಿನ ಕ್ಲೀನಿಕ್ ಕುರಿತ ಮಾಹಿತಿ :
ಸರ್ಕಾರದ ಮಟ್ಟದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಿರುವ ವಿಕ್ಟೋರಿಯಾದಲ್ಲಿ ಮೊದಲ ಬಾರಿಗೆ ನೋವಿನ ಕ್ಲಿನಿಕ್ ಆರಂಭಿಸಲಾಗಿದೆ. ಈ ಕ್ಲೀನಿಕ್ ನಲ್ಲಿ ಕ್ಯಾನ್ಸರ್ ನೋವು, ಮಸ್ಕ್ಯುಲೋಸ್ಕೆಲಿಟಲ್ ನೋವು, ಬೆನ್ನುಮೂಳೆ ಸಂಬಂಧಿತ ನೋವು ಮತ್ತು ಕೀಲು ನೋವಿನಂತಹ ತೀವ್ರವಾದ ಮತ್ತು ದೀರ್ಘಕಾಲದ ನೋವಿನ ರೋಗಿಗಳಿಗೆ ಆರೈಕೆ ಕಲ್ಪಿಸಲಾಗಿದೆ. ಈ ಕ್ಲೀನಿಕ್ ಗಳು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸುತ್ತದೆ. ಮತ್ತು ಆಸ್ಪತ್ರೆ ಅರಿವಳಿಕೆ ವಿಭಾಗದಿಂದ ನಿರ್ವಹಿಸಲ್ಪಡುತ್ತದೆ. ಇದನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲಿಗೆ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಯಿತು. ಇದರಿಂದ 200 ಕ್ಕೂ ಹೆಚ್ಚು ರೋಗಿಗಳಿಗೆ ಅನುಕೂಲವಾಗಿತ್ತು. ಇದೀಗ ಅಧಿಕೃತವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಈ ಹೊಸ ನೋವಿನ ಕ್ಲೀನಿಕ್ ಸೇವೆಗೆ ಚಾಲನೆ ನೀಡಿದ್ದಾರೆ.
ಅತ್ಯಾಧುನಿಕ ವ್ಯವಸ್ಥೆಯ ಎಂಆರ್ ಐ ಯಂತ್ರ :
ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಹಾಗೂ ವರ್ಷದ 365 ದಿನವೂ ಕಾರ್ಯನಿರ್ವಹಿಸುವ ಏಕೈಕ ಎಂಆರ್ ಐ ಕೇಂದ್ರವೆಂದರೆ ಅದು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಎಂಆರ್ ಐ ಯಂತ್ರ. ಮೊದಲಿಗೆ ಕೇವಲ ಒಂದು ಯಂತ್ರವಿತ್ತು. ಇದೀಗ ರೋಗಿಗಳ ಅನುಕೂಲಕ್ಕಾಗಿ ಬಿಎಂಸಿಆರ್ ಐ ಹೊಸದಾಗಿ ಮತ್ತೊಂದು ಎಂಆರ್ ಐ ಯಂತ್ರವನ್ನು ಅಳವಡಿಸಿದೆ. ಈ ಹೊಸ ಯುನೈಟೆಡ್ ಇಮೇಜಿಂಗ್ ಯುಎಂಆರ್ (UMR) 570 ವೈಡ್ ಬೋರ್ 1.5 ಟೆಸ್ಲಾ ಎಂಆರ್ ಐ ಯಂತ್ರವು ಹಲವಾರು ಸುಧಾರಿತ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದೆ.
ಇಂದಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಎಂಸಿಆರ್ ಐ ಡೀನ್ ಮತ್ತು ನಿರ್ದೇಶಕರಾದ ಡಾ.ಕೆ.ರಮೇಶ್ ಕೃಷ್ಣ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಎಸ್.ದೀಪಕ್, ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸವಿತಾ, ಮಿಂಟೋ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕಲ್ಪನಾ ಬಿ.ಎನ್ ಸೇರಿದಂತೆ ಮೊದಲಾದ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.