ಬೆಂಗಳೂರು, ಸೆ.4 www.bengaluruwire.com : ರಾಜ್ಯದಲ್ಲಿ ಪ್ರಸ್ತಕ್ತ ಮುಂಗಾರು ಹಂಗಾಮಿನಲ್ಲಿ ಸೆ.4ರ ವರೆಗೆ ವಾಡಿಕೆಗಿಂತ ಶೇ.26ರಷ್ಟು ಮಳೆ ಕೊರತೆಯಿದ್ದು, ಬರ ಪರಿಸ್ಥಿತಿ ತಲೆದೋರಿದೆ. 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಅನುಸಾರ ಬರ ಘೋಷಣೆ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡರ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪದಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ಸೋಮವಾರ ಜರುಗಿದ ಸಚಿವ ಸಂಪುಟ ಉಪಸಮಿತಿ ಸಭೆ ನಿರ್ಧರಿಸಿದೆ.
ಬರ ಪರಿಸ್ಥಿತಿ ಬಗ್ಗೆ ನಿಗಾ ಮತ್ತು ನಿರ್ವಹಣೆಗಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈವರೆಗೆ 3 ಬಾರಿ ಸಭೆ ನಡೆಸಿ ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಪರಾಮರ್ಶಿಸಿದೆ. ರಾಜ್ಯದಲ್ಲಿ ಆರಂಭದಲ್ಲಿಯೇ 2023ರ ಮಂಗಾರು ದುರ್ಬಲಗೊಂಡು, ಜೂನ್ ತಿಂಗಳಿನಲ್ಲಿ ಶೇ 56ರನ್ನು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಂಗಳಿನಲ್ಲಿ ಉತ್ತಮವಾಗಿ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇಕಡಾ 73 ರನ್ನು ಮಳೆ ಕೊರತೆಯಾಗಿದೆ. ಒಟ್ಟಾರೆ ಪ್ರಸಕ್ತ ಮಂಗಾರು ಜೂನ್ 1 ರಿಂದ ಸೆಪ್ಟೆಂಬರ್ 4 ರವರೆಗೆ ವಾಡಿಕೆಯಾಗಿ 711 ಮಿ.ಮೀ. ಮಳೆಯಾಗಬೇಕಿದ್ದು, ವಾಸ್ತವಿಕ 526 ಮಿ.ಮೀ ಮಳೆಯಾಗಿದ್ದು, ಶೇಕಡಾ 26ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ ಎಂದು ಸಂಪುಟ ಉಪ ಸಮಿತಿಯು ಅಭಿಪ್ರಾಯಪಟ್ಟಿದೆ.
ಒಟ್ಟಾರೆ 51 ಮತ್ತು 83 ತಾಲೂಕುಗಳಲ್ಲಿ, ಜಂಟಿ ಸಮೀಕ್ಷೆ ಮುಗಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಈ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಅನುಸಾರ ಬರ ಘೋಷಣೆ ಮಾಡಲು ಸಮಿತಿಯು ಇಂದಿನ ಸಭೆಯಲ್ಲಿ ನಿರ್ಧರಿಸಿದೆ.
ಬರ ಘೋಷಣೆಯ ನಂತರ ಕೇಂದ್ರ ಸರ್ಕಾರದ ನೆರವಿಗಾಗಿ ಮನವಿ, ಬರ ಘೋಷಣೆಯಾದ ದಿನದಿಂದ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆ, ಕುಡಿಯುವ ನೀರು ಕೊರತೆ ಕಂಡು ಬಂದ ಕಡೆ ವಸತಿ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್ ಮುಲಕ ಅಥವಾ ಬಾಡಿಗೆ ಬೋರ್ ವೆಲ್ ಮುಖಾಂತರ ತುರ್ತು ಕುಡಿಯುವ ನೀರು ಒದಗಿಸುವ ಖರ್ಚು ವೆಚ್ಚವನ್ನು ರಾಜ್ಯ ವಿಕೋಪ ಪರಿಹಾರ ನಿಧಿ (SDRF) ಮುಖಾಂತರ ಭರಿಸಲು ಸಂಪುಟ ಉಪ ಸಮಿತಿ ಅನುಮತಿಸಿದೆ.
ಪ್ರಸ್ತುತ ಜಾನುವಾರುಗಳಿಗೆ ಹಾಲಿ ಮೇವು ಲಭ್ಯವಿದ್ದು ಮುಂದಿನ ದಿನಗಳಲ್ಲಿ ಮೇವಿನ ಕೊರತೆ ನಿಭಾಯಿಸಲು ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್ ವಿತರಿಸಲು ಪಶು ಸಂಗೋಪನೆ ಇಲಾಖೆಗೆ 20 ಕೋಟಿ ರೂ ಮೊತ್ತ ವಿತರಿಸಲು ತೀರ್ಮಾನಿಸಲಾಗಿದೆ. ಆದರೆ ಈ ಎಲ್ಲಾ ತೀರ್ಮಾನಗಳೂ ಸಚಿವ ಸಂಪುಟ ಸಮಿತಿ ನಿರ್ಣಯಕ್ಕೆ ಒಳಪಟ್ಟಿರುತ್ತವೆ ಎಂದು ಸಮಿತಿಯು ತಿಳಿಸಿದೆ.
ಆಗಸ್ಟ್ 22 ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020ರಲ್ಲಿ ಸೂಚಿಸಲಾಗಿರುವ, ಖಡ್ಡಾಯ ಮಾನದಂಡಗಳಾದ (ಎ) ಮಳೆ ಕೊರತೆ (ಶೇಕಡಾ>60) (ಬಿ)ಸತತ 3 ವಾರಗಳ ಶುಷ್ಕ ವಾತಾವರಣ (ಸಿ) ಇತರೆ ತತ್ಪರಿಣಾಮ ಮಾನದಂಡಗಳ (ಉಪಗ್ರಹ ಆಧಾರತ ಬೆಳ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ಜಲ ಸಂಪನ್ಮೂಲ ಸೂಚ್ಯಂಕ) ಅನ್ವಯ, ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ 113 ತಾಲೂಕುಗಳನ್ನು ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ (Ground – Truthning) ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.
ಆದರೆ ಅದಕ್ಕೂ ಮುನ್ನ ಆಗಸ್ಟ್ 19ರಂತೆ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆಯಲ್ಲಿ ಮಾರ್ಗಸೂಚಿ ಅನ್ವಯ 62 ತಾಲೂಕುಗಳ ಬರ ಘೋಷಣೆಗೆ ಅರ್ಹವಾಗಿದ್ದವು. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹಾಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಜಂಟಿ ಸಮೀಕ್ಷೆಗೆ ಒಳಪಡಿಸಲು ತೀರ್ಮಾನಿಸಿತ್ತು. ಆ ಬಳಿಕ ಸೆಪ್ಟೆಂಬರ್ 02ರ ಅಂತ್ಯಕ್ಕೆ ಅರ್ಹವಾಗಿರುವ 83 ತಾಲೂಕುಗಳಲ್ಲಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಸಚಿವ ಸಂಪುಟ ಉಪಸಮಿತಿ ನಿರ್ಣಯಿಸಿತ್ತು. ಇದರಂತೆ ಒಟ್ಟಾರೆ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಮೇಲೆ ಬರ ಘೋಷಣೆಯಾಗಲಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.