ಬೆಂಗಳೂರು, ಸೆ.02 www.bengaluruwire.com : ಸ್ವಲ್ಲ ಜೋರಾಗಿ ಮಳೆ ಬಂದ್ರೆ ಕರೆಂಟ್ ಖೋತಾ. ಆಗಾಗ ಕರೆಂಟ್ ಕಡಿತಕ್ಕೆ ಟ್ರಾನ್ಸ್ ಫಾರ್ಮರ್ (DTC) ರಿಪೇರಿ ಸಬೂಬು. ಕೆಲವು ಕಡೆ ವಿದ್ಯುತ್ ಪರಿವರ್ತಕಗಳು ಹಾಳಾದರೂ ತಿಂಗಳುಗಟ್ಟಲೆ ದುರಸ್ತಿಯಾಗಲ್ಲ. ಇನ್ನು ವಿವಿಧೆಡೆ ಟ್ರಾನ್ಸ್ ಫಾರ್ಮರ್ ವಿಡುವ ಕಬ್ಬಿಣದ ರಚನೆಗಳಿರುತ್ತದೆ ಆದರೆ ಟಿಸಿಗಳಿರಲ್ಲ. ಹಲವು ಕಡೆಗಳಲ್ಲಿ ಬೀದಿ ದೀಪ ಹಾಳಾದರೆ ಸರಿಯಾಗೋಕೆ ಹಲವು ದಿನಗಳು ಬೇಕು.
ಇದು 2002-04ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿದ ಒಂದರಿಂದ 9ನೇ ಬ್ಲಾಕ್ ವರೆಗಿನ ಬಡಾವಣೆಯ ವಿದ್ಯುತ್ ಸೌಕರ್ಯದ ದುಸ್ಥಿತಿಯಿದು. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಬಿಡಿಎ ವಿದ್ಯುತ್ ವಿಭಾಗಕ್ಕೆ 1 ರಿಂದ 9ನೇ ಬ್ಲಾಕ್ ವರೆಗಿನ ಬಡಾವಣೆಯ ವಿದ್ಯುತ್ ಮಾರ್ಗ, ಅಗತ್ಯವಿರುವಷ್ಟು ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿ, ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಟ್ಟು ನಿರ್ವಹಣೆಗಾಗಿ ಬೆಸ್ಕಾಂಗೆ ನೀಡುವಂತೆ ಪತ್ರ ಬರೆದೂ ಬರೆದೂ ಬಸವಳಿದಿದೆ.
ಸರ್.ಎಂ.ವಿಶ್ವೇಶ್ವರಯ್ಯ ನಗರದಲ್ಲಿ ಒಟ್ಟು 21,513 ನಿವೇಶನಗಳನ್ನು ಬಿಡಿಎ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದೆ. ಈ ಪೈಕಿ ಎರಡು ವರ್ಷಗಳ ಹಿಂದೆಯೇ ಶೇ.25ರಷ್ಟು ನಿವೇಶನಗಳಲ್ಲಿ ನಾಗರೀಕರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಬೆಸ್ಕಾಂ ಮೂಲಗಳ ಪ್ರಕಾರ ಈ 9 ಬ್ಲಾಕ್ ಗಳಲ್ಲಿ ಒಟ್ಟು 25 ಸಾವಿರದಷ್ಟು ವಿದ್ಯುತ್ ಮೀಟರ್ ಗಳಿದ್ದು, ಅದಕ್ಕೆ ತಕ್ಕಷ್ಟು ಟಿಸಿಗಳನ್ನು ಬಿಡಿಎ ಅಳವಡಿಸಿಲ್ಲ. ಹಾಗಾಗಿ ಅಳವಡಿಸಿರೋ ಅಲ್ಪಸ್ವಲ್ಪ ವಿದ್ಯುತ್ ಪರಿವರ್ತಕಗಳ ಮೇಲೆ ಒತ್ತಡ ಹೆಚ್ಚಿ ಹಲವು ಸಂದರ್ಭದಲ್ಲಿ ಟಿಸಿಗಳು ಹಾಳಾಗುತ್ತಿರುತ್ತವೆ ಎಂದು ಹೇಳುತ್ತಾರೆ.
ಇಡೀ ಸರ್.ಎಂ.ವಿಗೆ 135 ಟಿಸಿಗಳಷ್ಟೆ ಕಾರ್ಯನಿರ್ವಹಿಸುತ್ತಿರುವುದು :
ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬೆಸ್ಕಾಂ ಅಂದಾಜು ಮಾಡಿರುವ ಪ್ರಕಾರ 294 ವಿದ್ಯುತ್ ಪರಿವರ್ತಕಗಳನ್ನು ಬಿಡಿಎ ಅಳವಡಿಸಿರಬೇಕು. ಆದರೆ ಸದ್ಯ ಬಿಡಿಎ ತನ್ನ ವಿವಿಧ ಬ್ಲಾಕ್ ಗಳಲ್ಲಿ 178 ಟಿಸಿಗಳನ್ನಷ್ಟೇ ಅಳವಡಿಕೆ ಮಾಡಿದೆ. ಆದರೆ ಅವುಗಳಲ್ಲಿ ಕೇವಲ 135 ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಲಸ ಮಾಡುತ್ತಿದೆ. 65 ರಿಪೇರಿಯಲ್ಲಿದೆ. ಇನ್ನು 122 ಟಿಸಿಗಳನ್ನು ಬಿಡಿಎ ಎಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳು ಅಳವಡಿಸುವ ಗೋಜಿಗೇ ಹೋಗಿಲ್ಲ.
ಹೀಗಾಗಿ 9 ಬ್ಲಾಕ್ ಗಳಲ್ಲಿ ಹೆಚ್ಚು ಮನೆ ಬಂದಿರುವ ಕಡೆಗಳಲ್ಲಿ ಟಿಸಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೂ ಹಾಳಾದ ಟ್ರಾನ್ಸ್ ಫಾರ್ಮರ್ ಗಳನ್ನು ರಿಪೇರಿ ಮಾಡಿ ಪುನಃ ಅಳವಡಿಸುವ ಬದಲಿಗೆ ಹತ್ತಿರದಲ್ಲಿನ ಮತ್ತೊಂದು ಟಿಸಿಗೆ ಅದನ್ನು ಸಂಪರ್ಕ ನೀಡಿ ಕೈತೊಳೆದು ಕೊಳ್ಳುತ್ತಿದ್ದಾರೆ. ಇದರಿಂದ ಆಗಾಗ ಮಳೆ, ಗಾಳಿ ಹೆಚ್ಚು ಬಂದಾಗ, ಲೋಡ್ ಹೆಚ್ಚಾದಾಗ ಟಿಸಿಗಳು ಅವುಗಳನ್ನು ತಾಳಿಕೊಳ್ಳಲಾಗದೇ ಹಾಳಾಗುವ ಪ್ರಕರಣಗಳು ಘಟಿಸುತ್ತಿರುತ್ತದೆ. ಇದರಿಂದ ಆಗಾಗ ವಿದ್ಯುತ್ ನಿಲುಗಡೆ ಸಮಸ್ಯೆಯನ್ನು ಸ್ಥಳೀಯ ಬಡಾವಣೆಯ ನಿವಾಸಿಗಳು ಎದುರಿಸುವಂತಾಗಿದೆ.
7,190 ಬೀದಿ ದೀಪಗಳಿಗೆ ಅಗತ್ಯವಾದ ಕಂಟ್ರೋಲ್ ಬಾಕ್ಸ್ ಕೊರತೆ :
ಸರ್.ಎಂ.ವಿಶ್ವೇಶ್ವರಯ್ಯ 9 ಬಡಾವಣೆಗಳಲ್ಲಿ ಒಟ್ಟಾರೆ ಅಂದಾಜು 7,190ಕ್ಕೂ ಹೆಚ್ಚು ಬೀದಿ ದೀಪಗಳಿದ್ದು, ಅವುಗಳು ಸಂಜೆಯಾಗುತ್ತಲೇ ಸ್ವಯಂಚಾಲಿತವಾಗಿ ಆನ್ ಆಗಿ ಬೆಳಗ್ಗೆ ಆಫ್ ಆಗುವ ರೀತಿಯಲ್ಲಿ 20 ಬೀದಿ ದೀಪಗಳಿಗೊಂದು ಕಂಟ್ರೋಲ್ ಬಾಕ್ಸ್ ಅಳವಡಿಸಬೇಕು. ಆದರೆ ಬಿಡಿಎ ಬೀದಿ ದೀಪ ಅಳವಡಿಸುವ ಹೊಣೆ ಹೊತ್ತವರು 50-60 ಬೀದಿ ದೀಪಗಳಿಗೊಂದರಂತೆ ಒಟ್ಟಾರೆ 287 ಕಂಟ್ರೋಲ್ ಬಾಕ್ಸ್ ಅಳವಡಿಸಿರೋದರಿಂದ ಆ ಕಂಟ್ರೋಲ್ ಬಾಕ್ಸ್ ಮೇಲೆ ವಿದ್ಯುತ್ ಲೋಡ್ ಒತ್ತಡ ಹೆಚ್ಚಿ, ಅವುಗಳಲ್ಲಿನ ಕನೆಕ್ಟರ್ ಗಳು ಹಾಳಾಗುತ್ತಿದೆ. ಕೊನೆಗೆ ವಿದ್ಯುತ್ ದೀಪ ಆರಿಸಲು ಸ್ಥಳೀಯ ನಿವಾಸಿಗಳು, ಬೀದಿ ದೀಪದ ಕರೆಂಟ್ ತಂತಿಯನ್ನು, ನೇರವಾಗಿ ಲೈವ್ ವೈರ್ ಗೆ ಪ್ರತಿದಿನ ಸಂಜೆ, ಬೆಳಗ್ಗೆ ತಂತಿಹಾಕಿ ಸಂಪರ್ಕ ಕಲ್ಪಿಸುವ ಅಪಾಯಕಾರಿ ಕೆಲಸ ನಿರ್ವಹಿಸುವಂತಾಗಿದೆ ಎಂದು ಬಡಾವಣೆಯ ನಾಗರೀಕರು ದೂರುತ್ತಿದ್ದಾರೆ.
ಬೀದಿ ದೀಪಗಳ ಬಿಲ್ ಬಾಕಿ 18.50 ಕೋಟಿ ರೂ. : (ಸೂಚನೆ – ದಾಖಲೆಗಳಿಗಾಗಿ ಸ್ಲೈಡಿಂಗ್ ಮಾಡಿ)
21,513 ನಿವೇಶನಗಳನ್ನು ಹೊಂದಿರುವ ಸರ್.ಎಂ.ವಿ ಬಡಾವಣೆಯಲ್ಲಿ ಒಟ್ಟು 7,190 ಬೀದಿ ದೀಪಗಳು ಮತ್ತಿತರ ವಿದ್ಯುತ್ ಸಂಬಂಧಿತ ಬಳಕೆಗಾಗಿ ಬಿಡಿಎ ಮೇ 2023ರ ತನಕ ಬೆಸ್ಕಾಂ ಕಚೇರಿಗೆ ಒಟ್ಟಾರೆ 18,50,24,626 (18.50 ಕೋಟಿ ರೂ.) ಬಾಕಿ ಹಣವನ್ನು ಪಾವತಿಸಬೇಕಿದೆ. ಇದಕ್ಕಾಗಿ ಬೆಸ್ಕಾಂ ಬಿಡಿಎ ಎಲೆಕ್ಟ್ರಿಕ್ ವಿಭಾಗಕ್ಕೆ ಪತ್ರ ಬರೆದಿದ್ದರೂ ಈತನಕ ಹಣ ಪಾವತಿಯಾಗಿಲ್ಲ ಎಂದು ಬಿಡಿಎ ಮತ್ತು ಬಿಡಿಎ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಸರ್.ಎಂ.ವಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ದೂರೇನು?:
“ಸರ್.ಎಂ.ವಿಶ್ವೇಶ್ವರಯ್ಯ ಮಹನೀಯರ ಹೆಸರಿನಲ್ಲಿ ಬಡಾವಣೆಯನ್ನು ಬಿಡಿಎ ನಿರ್ಮಿಸಿದೆ. ಆದರೆ ಕಳಪೆ ವಿದ್ಯುತ್ ಕೇಬಲ್ ಗಳನ್ನು ಅಳವಡಿಸಿದ್ದಾರೆ. ಇತ್ತೀಚೆಗೆ ಮನೆಗಳನ್ನು ಕಟ್ಟುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಅದೇ ಪ್ರಮಾಣದಲ್ಲಿ ಅಗತ್ಯವಿರುವಷ್ಟು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳನ್ನು ಬಿಡಿಎ ಅಳವಡಿಸುತ್ತಿಲ್ಲ. ಇದರಿಂದ ಲೋಡ್ ಜಾಸ್ತಿಯಾಗಿ ಟಿಸಿಗಳು ಸುಟ್ಟು ಹೋಗುತ್ತಿವೆ. ಇದಕ್ಕೆ ಲೇಟೆಸ್ಟ್ ಉದಾಹರಣೆ, ನಮ್ಮ ಬಡಾವಣೆಯಲ್ಲಿ ಟಿಸಿ ಸುಟ್ಟುಹೋಗಿ ಇಬ್ಬರು ಸಾವನ್ನಪ್ಪಿದ್ದರು. ಇನ್ನು ಬೀದಿ ದೀಪಗಳಿಗೆ ಅಗತ್ಯವಿರುವಷ್ಟು ಕಂಟ್ರೋಲ್ ಬಾಕ್ಸ್ ಹಾಕುತ್ತಿಲ್ಲ. ಹೀಗಾಗಿ ಸೂಕ್ತ ಸಮಯದಲ್ಲಿ ವಿದ್ಯುತ್ ದೀಪ ಉರಿಯಲು ಸಮಸ್ಯೆಯಾಗುತ್ತಿದೆ. ಆದಷ್ಟು ಶೀಘ್ರವಾಗಿ ಬಿಡಿಎ ವಿದ್ಯುತ್ ನಿರ್ವಹಣೆಯನ್ನು ಬೆಸ್ಕಾಂಗೆ ವಹಿಸಿದರೆ ಸೂಕ್ತ ಎಂದು ಆಗ್ರಹಿಸುತ್ತೇವೆ.”
- ಡಿ.ಎಸ್.ಗೌಡ, ಅಧ್ಯಕ್ಷರು, ಸರ್.ಎಂ.ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘ (1 ರಿಂದ 9ನೇ ಬ್ಲಾಕ್)
ವಿದ್ಯುತ್ ಪರಿವರ್ತಕಗಳ ಕೊರತೆ ಇಂದು ನಿನ್ನೆಯದಲ್ಲ :
2022ರ ಇಸವಿಯ ಆಗಸ್ಟ್ 27ರಂದು ಬೆಸ್ಕಾಂನ ಕೆ4 ಉಪವಿಭಾಗದ ಎಂಜಿನಿಯರ್ ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗೆ ಬರೆದ ಪತ್ರದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಡಿಎ 197 ಟಿಸಿಗಳನ್ನು 1 ರಿಂದ 9ನೇ ಬ್ಲಾಕ್ ವರೆಗೆ ಅಳವಡಿಸಲಾಗಿದೆ. ಅದರ ಪೈಕಿ 35 ಟಿಸಿಗಳು ಹಾಳಾಗಿದ್ದರೆ, 138 ಟಿಸಿಗಳಷ್ಟೇ ಕೆಲಸ ಮಾಡುತ್ತಿವೆ. 54 ಟಿಸಿಗಳಿಲ್ಲದೆ ಕೇವಲ ಖಾಲಿ ರಚನೆಗಳಷ್ಟೇ ಇವೆ. ಶೇ.50ರಷ್ಟು ವಿದ್ಯುತ್ ಪರವಿರ್ತಕಗಳನ್ನು ಬಿಡಿಎ ಅಳವಡಿಸಿಯೇ ಇಲ್ಲ ಎಂದು ಪತ್ರ ಬರೆದಿದ್ದಾರೆ. ಇದನ್ನು ಗಮನಿಸಿದರೆ ತಿಳಿಯುತ್ತೆ, ಬಿಡಿಎ ಅಧಿಕಾರಿಗಳಿಗೆ ನಿವೇಶನದಾರರು ಮನೆ ಕಟ್ಟಿಕೊಂಡ ಮೇಲೆ ಅವರಿಂದ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಲು ಇರುವಷ್ಟು ಆತುರ, ಜನರಿಗೆ ಅಗತ್ಯ ಸೌಕರ್ಯ ಕಲ್ಪಿಸಿಕೊಡುವುದರಲ್ಲಿ ಇಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.
ಬಿಡಿಎ ಕೊರತೆಗಳ ಮಧ್ಯೆಯೂ ಬೆಸ್ಕಾಂ ಕಾರ್ಯ ಶ್ಲಾಘನೀಯ :
ಇದೆಲ್ಲದರ ಮಧ್ಯೆ ಆಶಾದಾಯಕ ವಿಷಯ ಏನಂದರೆ, ಬೆಸ್ಕಾಂ ಎಂಜಿನಿಯರ್ ಗಳು ಮುತುವರ್ಜಿ ವಹಿಸಿ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಈ ಹಿಂದೆ ಇದ್ದ ಸರ್.ಎಂ.ವಿಶ್ವೇಶ್ವರಯ್ಯ ಕೆಪಿಟಿಸಿಎಲ್ ಸಬ್ ಸ್ಟೇಷನ್ 20ಎಂವಿಎ ಸಾಮರ್ಥ್ಯವನ್ನು ಹೆಚ್ಚಿನ ಬೆಸ್ಕಾಂ ಗ್ರಾಹಕರು ಬಂದ ನಂತರ 31.5 ಎಂವಿಎಗೆ ಉನ್ನತೀಕರಣ ಮಾಡಿದೆ. ಅದೇ ರೀತಿ 15 ವರ್ಷದ ಹಿಂದೆ ಸ್ಥಾಪಿಸಿದ್ದ ಈ ಸ್ಟೇಷನ್ ನಲ್ಲಿದ್ದ ಹಳೆಯ ಬ್ರೇಕರ್ ಗಳನ್ನು ಬದಲಾಯಿಸಿದೆ. ಹೀಗಾಗಿ ಮೊದಲು ವಿದ್ಯುತ್ ಟ್ರಿಪ್ ಆಗಿ, ವಿದ್ಯುತ್ ಕಡಿತವಾಗುವ ದೂರುಗಳು ಕಡಿಮೆಯಾಗಿದೆ. ಅದೇ ರೀತಿ ಒಂದೊಂದು ಫೀಡರ್ ಗಳಿಗೆ ಒಂದೊಂದು ಹೊಸ ಬ್ರೇಕರ್ ನಂತೆ ಒಟ್ಟು 8 ಬ್ರೇಕರ್ ಗಳನ್ನು ಹಾಕಲಾಗಿದೆ.
ಇದಲ್ಲದೆ ಬೆಸ್ಕಾಂನ ಹೈವೋಲ್ಟೇಜ್ ಮತ್ತು ಲೋ ವೋಲ್ಟೇಜ್ ಲೈನ್ ಗಳ ನೆಲದಡಿ ಹಾಗೂ ಕಂಬದ ಮೇಲ್ಬಾಗ ವಿದ್ಯುತ್ ಕೇಬಲ್ ಗಳನ್ನು ಅಳವಡಿಸುವ ಯೋಜನೆಯಡಿ ಬಹುತೇಕ ಕಡೆ 11ಕೆವಿ ಸಾಮರ್ಥ್ಯದ ಕೇಬಲ್ ಗಳನ್ನು ನೆಲದಡಿ ಅಳವಡಿಸಿದೆ. ಇದರಿಂದಾಗಿ ಸರ್.ಎಂ.ವಿ ಬಡಾವಣೆಯಲ್ಲಿ ಹಿಂದೆ ಪ್ರತಿದಿನ ವಿದ್ಯುತ್ ಸಂಬಂಧಿಸಿದಂತೆ ಸರಾಸರಿ 60 ದೂರುಗಳು 10-15 ದೂರುಗಳಿಗೆ ಇಳಿದಿದೆ ಎನ್ನುತ್ತಾರೆ ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು. ಆದರೆ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ ಬಹುತೇಕ ಕಡೆ ಲೋ ಟೆನ್ಶನ್ ತಂತಿಗಳನ್ನು ಏರಿಯಲ್ಡ್ ಬಂಚ್ ಕೇಬಲ್ ಗೆ ಅಳವಡಿಸುವ ಯೋಜನೆ ಸಮರ್ಪಕವಾಗಿ ನಡೆದಿಲ್ಲ. ಸರ್.ಎಂ.ವಿ 3ನೇ ಬ್ಲಾಕ್, 5ನೇ ಬ್ಲಾಕ್ ಸೇರಿದಂತೆ ಹಲವೆಡೆ ಎಬಿಸಿ ಕೇಬಲ್ ಗಳನ್ನು ಬೆಸ್ಕಾಂ ಅಳವಡಿಸಿಲ್ಲ. ಆದರೆ 6ನೇ ಬ್ಲಾಕ್ ಮತ್ತಿತರ ಕಡೆಗಳಲ್ಲಿ ಅರ್ಧಂಬರ್ಧ ಅಳವಡಿಸಿರುವುದಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪಿಸಿದೆ. ಈ ಬಗ್ಗೆ ಕೆಂಗೇರಿ ವಿಭಾಗದ ಎಂಜಿನಿಯರ್ ಗಳನ್ನು ಕೇಳಿದರೆ ಕೇಂದ್ರ ಕಚೇರಿಯಿಂದ ಯೋಜನೆಗೆ ಹಣ ಬಿಡುಗಡೆಯಾಗಬೇಕಿದೆ ಎಂದು ಹೇಳುತ್ತಾರೆ.
ಬ್ರೇಕರ್ ಗಳು ಎಂದರೇನು?
ವಿದ್ಯುತ್ ಶಕ್ತಿಯ ಪ್ರಸರಣಕ್ಕಾಗಿ ಬಳಸಲಾಗುವ ಫೀಡರ್ ಗಳನ್ನು ವಿಂಗಡಣೆ ಮಾಡಲು ಬ್ರೇಕರ್ ಗಳು ಸಹಾಯಕ. ಇದನ್ನು ಸ್ವಿಚ್ ಗೇರ್ ಅಂತಲೂ ಕರೆಯಲಾಗುತ್ತದೆ.
ಬೆಸ್ಕಾಂ ಕೆಂಗೇರಿ ವಿಭಾಗದ ಇಇ ಏನಂತಾರೆ?:
“ಬಿಡಿಎ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ನಿರ್ಮಾಣವಾಗಿ 20 ವರ್ಷಗಳಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಶೇ.25ರಷ್ಟು ಹೆಚ್ಚು ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿರುವುದರಿಂದ ವಿದ್ಯುತ್ ನಿರ್ವಹಣೆಯನ್ನು ಬೆಸ್ಕಾಂಗೆ ನೀಡುವಂತೆ ಬಿಡಿಎಗೆ ಹಲವು ಬಾರಿ ಪತ್ರ ಬರೆದು, ಸಭೆ ನಡೆಸಿ ಮನವಿ ಮಾಡಿದ್ದೇವೆ. ಈತನಕ ಪ್ರಾಧಿಕಾರವು ತನ್ನಲ್ಲಿ ಅಗತ್ಯ ವಿದ್ಯುತ್ ಮಾರ್ಗಗಳನ್ನು, ಸೂಕ್ತ ರೀತಿಯಲ್ಲಿ ಟಿಸಿಗಳನ್ನು ಅಳವಡಿಸಿ, ವಿದ್ಯುತ್ ಬೀದಿ ದೀಪದ ಬಿಲ್ ಗಳನ್ನು ಪಾವತಿಸಿ ಬೆಸ್ಕಾಂಗೆ ಹಸ್ತಾಂತರ ಮಾಡಿಲ್ಲ. ಬಡಾವಣೆಯಲ್ಲಿನ ಬಾಕಿ ಕಾಮಗಾರಿಗಳಿಗೆ ಅಗತ್ಯವಾದ ಹಣಕಾಸಿಗೆ ಬಿಡಿಎ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆದು ಕೆಲಸ ಮಾಡಿ, ನಂತರ ಹಸ್ತಾಂತರ ಮಾಡುವುದಾಗಿ ಹೇಳುತ್ತಿದ್ದಾರೆ. “
- ಕೆ.ಆರ್.ಕುಮಾರ್ ನಾಯ್ಕ್, ಇಇ, ಬೆಸ್ಕಾಂ ಕೆಂಗೇರಿ ವಿಭಾಗ (ಪಶ್ಚಿಮ ವೃತ್ತ)
ಬಿಡಿಎ ವಿದ್ಯುತ್ ವಿಭಾಗದ ಇಇ ಬೆಸ್ಕಾಂ ಹಸ್ತಾಂತದ ಬಗ್ಗೆ ಹೇಳಿದ್ದಿಷ್ಟು :
“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 2022-23ನೇ ಸಾಲಿನ ಬಜೆಟ್ ನಲ್ಲಿ ಅಂಜನಾಪುರ, ಬನಶಂಕರಿ 6ನೇ ಹಂತ ಹಾಗೂ ಜೆಪಿನಗರ ಹಾಗೂ ಸರ್.ಎಂ.ವಿ ಬಡಾವಣೆಯಲ್ಲಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಹಣ ಮೀಸಲಿಡಲಾಗಿತ್ತು. ಆದರೆ ಮಂಡಳಿ ಸಭೆಯಲ್ಲಿ ಕೇವಲ ಸರ್.ಎಂ.ವಿ ಬಡಾವಣೆ ಹೊರತುಪಡಿಸಿ ಉಳಿದ ಬಡಾವಣೆಯಲ್ಲಿ ಕಾಮಗಾರಿ ನಡೆಸುವ ಪ್ರಸ್ತಾವನೆ ಒಪ್ಪಿಗೆ ಸಿಕ್ಕಿತ್ತು. ಈ ಬಾರಿ ಪುನ: ಸರ್.ಎಂ.ವಿ ಬಡಾವಣೆಯಲ್ಲಿ ಬಾಕಿ ಉಳಿದ 12 ಕೋಟಿ ರೂ. ಮೊತ್ತದ ವಿದ್ಯುತ್ ಕಾಮಗಾರಿ ನಡೆಸಲು ಅನುಮೋದನೆಗಾಗಿ ಮಂಡಳಿ ಮುಂದೆ ಮಂಡನೆ ಮಾಡುತ್ತೇವೆ. ಅಲ್ಲಿ ಅನುಮೋದನೆ ದೊರೆತರೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ, ನಂತರ ಬೆಸ್ಕಾಂಗೆ ವಿದ್ಯುತ್ ಸಂಬಂಧಿ ನಿರ್ವಹಣೆಗಾಗಿ ಹಸ್ತಾಂತರ ಮಾಡುತ್ತೇವೆ.”
- ಪಿ.ಆರ್.ವಸಂತ, ಕಾರ್ಯನಿರ್ವಾಹಕ ಎಂಜಿನಿಯರ್, ಬಿಡಿಎ ವಿದ್ಯುತ್ ವಿಭಾಗ
ವಿದ್ಯುತ್ ಪರಿವರ್ತಕ (DTC) ಎಂದರೇನು? ಇದರ ಕಾರ್ಯವೇನು? :
ವಿದ್ಯುತ್ ಪರಿವರ್ತಕ ಎ೦ದರೆ ವಿದ್ಯುತ್ ಚಾಲಕ ಶಕ್ತಿ ಮತ್ತು ವಿದ್ಯುತ್ತನ್ನು ಬದಲಾಯಿಸಬಹುದಾದ ಸಾಧಕ. ಆದರೆ ಇದರಲ್ಲಿ ವಿದ್ಯುತ್ ತರ೦ಗಗಳು ಒ೦ದೇ ರೀತಿಯಾಗಿ ಇರುತ್ತದೆ. ಇದರಲ್ಲಿ ಎರಡು ಕಾ೦ತಿಯ ನಿರ್ವಾಹಕಗಳಿರುತ್ತವೆ. ಮೊದಲನೆಯ ನಿರ್ವಾಹಕವನ್ನು ಒಂದು ಎ.ಸಿ ವಿದ್ಯುತ್ ಶಕ್ತಿ ಮೂಲಕ್ಕೆ ಜೋಡಿಸಿರುತ್ತಾರೆ. ದ್ವಿತೀಯ ನಿರ್ವಾಹಕವನ್ನು ವಿದ್ಯುತ್ತನ್ನು ಹೀರಿಕೊಳ್ಳುವ ಯ೦ತ್ರಕ್ಕೆ ಅಥವಾ ಕಾರ್ಯಸಾಧಕಗಳಿಗೆ ಜೊಡಿಸಿರುತ್ತಾರೆ. ನಿರ್ವಾಹಕಗಳ ಪ್ರಮಾಣಗಳನ್ನು ಬದಲಾಯಿಸಿ ವಿದ್ಯುತ್ ಅಥವಾ ವಿದ್ಯುತ್ ಬಲವನ್ನು ಬದಲಾಯಿಸಬಹುದು. ಈ ರೀತಿಯಾಗಿ ವಿದ್ಯುತ್ ಪರಿವರ್ತಕ ಕೆಲಸ ಮಾಡುವುದು. ವಿದ್ಯುತ್ ಲೋಡ್ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.