ಬೆಂಗಳೂರು, ಸೆ.1 www.bengaluruwire.com : ಸೌರಮಂಡಲದ ಅಧಿಪತಿ ಸೂರ್ಯನತ್ತ ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ಯ ಚಿತ್ತ ಹರಿದಿದೆ. ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಗ್ಗೆ 11.50ಕ್ಕೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್1 ಎಂಬ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವನ್ನು (observatory) ಪಿಎಸ್ ಎಲ್ ವಿ-ಎಲ್1 ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.
ಸಾವಿರಾರು ವರ್ಷಗಳಿಂದ ಸೂರ್ಯನಲ್ಲಿನ ನಿಗೂಢ ರಹಸ್ಯ ಮಾಹಿತಿಗಳನ್ನು ತಿಳಿದು ಕೊಳ್ಳಲು ಭಾರತ ಇದೇ ಮೊದಲ ಬಾರಿಗೆ ಸೂರ್ಯಾಧ್ಯಯನ ವೀಕ್ಷಣಾಲಯವನ್ನು PSLV-C57 ರಾಕೆಟ್ ಮೂಲಕ ಹಾರಿಬಡಿಲಿದೆ. ಸೂರ್ಯನ ವಾತಾವರಣದ ಅಧ್ಯಯನಕ್ಕಾಗಿ ಸಜ್ಜಾಗಿರುವ ಆದಿತ್ಯ ಎಲ್-1 ಎಂಬ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಸೂರ್ಯನನ್ನು ಇಪ್ಪತ್ತನಾಲ್ಕು ಗಂಟೆಯೂ ಹತ್ತಿರದಿಂದ ನೋಡುವುದು, ಸೂರ್ಯನ ಕಿರೀಟ (ಕೊರೋನಾ ಭಾಗ), ಅಯಸ್ಕಾಂತೀಯ ಗುಣ, ರವಿಯಲ್ಲಿನ ಚಿಮ್ಮುವ ಜ್ವಾಲಾಬುಗ್ಗೆ, ಬೀಸಿ ಬರುವ ಸೌರಮಾರುತಗಳನ್ನು ವಿವಿಧ ತರಂಗಾಂತರಗಳಲ್ಲಿ ವಿವರವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಈ ಹಿನ್ನಲೆಯಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರು, ಆಂಧ್ರದ ಸುಲ್ಲೂರ್‌ಪೇಟೆಯಲ್ಲಿರುವ ಶ್ರೀ ಚೆಂಗಲಮ್ಮ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಮಾತಾಡಿರುವ ಸೋಮನಾಥ್, ಸೂರ್ಯನ ಅಧ್ಯಯನಕ್ಕೆ ಕೈಗೊಳ್ಳಲಾಗಿರುವ ಈ ಯೋಜನೆಯು ನಿಗದಿತ ಸ್ಥಳದತ್ತ ತಲುಪಲು 125 ದಿನಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಲಾಂಗ್ರೇಜಿಯನ್ ಪಾಯಿಂಟ್ ಎಂದರೇನು? :
1,500 ಕಿಲೊ ಗ್ರಾಂ ತೂಕದ ಆದಿತ್ಯ ಎಲ್-1 ಸೂರ್ಯ ವೀಕ್ಷಣಾಲಯ, ಪಿಎಸ್‍ಎಲ್‍ವಿ- ಎಕ್ಸ್‌ಟ್ರಾಲಾರ್ಜ್ ರಾಕೆಟ್‌ನ ಮೂಲಕ ನಭಕ್ಕೆ ಸೆ.2ರಂದು ಉಡಾವಣೆಯಾಗಲಿದೆ. ಬಾಹ್ಯಾಕಾಶದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಸಮತಲದಲ್ಲಿ ನಿಂತು ಸೂರ್ಯನನ್ನು ನೋಡಲು ಇರುವ ಅನುಕೂಲಕರ ಬಿಂದುಗಳನ್ನು ಲಾಂಗ್ರೇಜಿಯನ್ ಬಿಂದು ( Lagrangian Point) ಎಂದು ಹೇಳುತ್ತಾರೆ. ಈ ಲಾಂಗ್ರೇಜಿಯನ್ ಬಿಂದುವು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿದ್ದು, ಈ ಸ್ಥಳಕ್ಕೆ ತಲುಪಲು 125 ದಿನಗಳ ಕಾಲ ಪ್ರಯಾಣಿಸಬೇಕಿದೆ. ಅಲ್ಲಿಗೆ ತಲುಪಿದ ಮೇಲೆ ಸೂರ್ಯನ ಎದುರಿಗೆ ಕೆಳ ಎತ್ತರದ ಕಕ್ಷೆಯಲ್ಲಿ (Halo Orbit) ಸುಮಾರು 5 ವರ್ಷ ಸುತ್ತುವ ಆದಿತ್ಯ, ಭೂಮಿಗೆ ಸಮೀಪದ ಬಾಹ್ಯಾಕಾಶದ ವಾಯುಗುಣ, ಕೊರೋನಾದಿಂದ ಚಿಮ್ಮಿ ಬರುವ ಜ್ವಾಲಾ ಬುಗ್ಗೆಯ ಹುಟ್ಟಿನ ಬಗ್ಗೆ ನಿಖರವಾದ ಮಾಹಿತಿ ನೀಡಲಿದೆ.
ಲಾಂಗ್ರೇಜಿಯನ್ ಬಿಂದುವಿನಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲಗಳು ಅಲ್ಲಿಗೆ ತೆರಳುವ ಯಾವುದೇ ಉಪಗ್ರಹ ಅಥವಾ ಸಣ್ಣ ನೌಕೆಯನ್ನು ಸಮತೋಲನದಲ್ಲಿ ಇರಿಸುತ್ತವೆ. ಇಲ್ಲಿ ವೀಕ್ಷಣಾ ಸಾಧನವನ್ನು ನಿಲ್ಲಿಸಿದರೆ ಇಂಧನದ ಬಳಕೆ ಕಡಿಮೆಯಾಗುತ್ತದೆ. ಬಾಹ್ಯಾಕಾಶದಲ್ಲಿ ಇಂತಹ ಒಟ್ಟು ಐದು ಲಾಂಗ್ರೇಜಿಯನ್ ಬಿಂದುಗಳಿವೆ. ಇವುಗಳಲ್ಲಿ ಎಲ್-1 ಭೂಮಿ ಮತ್ತು ಸೂರ್ಯನ ನಡುವೆ ಒಂದೇ ಸರಳರೇಖೆಯಲ್ಲಿದೆ. ಸದ್ಯಕ್ಕೆ ಎಲ್-2ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಇರಿಸಲಾಗಿದೆ.
ಆದಿತ್ಯ ಎಲ್1 7 ಉಪಕರಣಗಳ ಕಾರ್ಯವೇನು?:
ಸೂರ್ಯನ ಅಧ್ಯಯನದ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ ಆದಿತ್ಯ ಎಲ್-1 ವೀಕ್ಷಣಾಲಯದಲ್ಲಿ ಒಟ್ಟು ಏಳು ಉಪಕರಣಗಳಿವೆ (Payloads). ನಾಲ್ಕು ನೇರವಾಗಿ ಸೂರ್ಯನನ್ನು ಅಭಿಮುಖವಾಗಿದ್ದರೆ, ಉಳಿದ ಮೂರು ಉಪಕರಣಗಳು ಲಾಂಗ್ರೇಜಿಯನ್ ಬಿಂದುವಿನತ್ತ ಸೂರ್ಯನಿಂದ ಹರಿದುಬರುವ ಕಣ ಮತ್ತು ಕ್ಷೇತ್ರಗಳನ್ನು ಆಯಾ ಕ್ಷಣದಲ್ಲೇ ಅಭ್ಯಸಿಸಿ ಮಾಹಿತಿ ನೀಡುತ್ತದೆ.
ಸೂರ್ಯನ ಕೊರೋನಾ ವೀಕ್ಷಿಸಲು ವಿಸಿಬಲ್ ಎಮಿಶನ್ ಲೈನ್ ಕೊರೋನಾಗ್ರಾಫ್ (Visible Emission Line Coronagraph(VELC), ಪ್ರಖರ ಪ್ರತಿಫಲನ ನೀಡುವ ವಿಶಾಲ ಕನ್ನಡಿಗಳ ಶಕ್ತಿಶಾಲಿ ಟೆಲಿಸ್ಕೋಪ್ (Solar Ultra-violet Imaging Telescope), ರವಿಯ ಕಾಂತಶಕ್ತಿಯನ್ನು ಅಳೆಯಲು ಭಾರೀ ಸಾಮರ್ಥ್ಯದ ಮ್ಯಾಗ್ನೆಟೊಮೀಟರ್ (Magnetometer), ಪ್ಲಾಸ್ಮಾ ಅಧ್ಯಯನ ಸಾಧನ (Plasma Analyser Package for Aditya), ಎಕ್ಸ್‌ರೇ ಸ್ಪೆಕ್ಟ್ರೋಮೀಟರ್‌ಗಳು (Solar Low Energy X-ray Spectrometer & High Energy L1 Orbiting X-ray Spectrometer) ಕೊರೋನಾ, ಬಿಸಿ ಮಾರುತ ಮತ್ತು ಜ್ವಾಲೆಗಳ ನಿಖರವಾದ ವಿವರಗಳನ್ನು ಭೂಮಿಗೆ ರವಾನಿಸಲಿವೆ. ಸೋಲಾರ್ ಅಲ್ಟ್ರಾ ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಉಪಕರಣವು ಸೌರ ದ್ಯುತಿಗೋಳ ಹಾಗೂ ವರ್ಣಗೋಳಗಳನ್ನು ಅತಿ ನೇರಳಾತೀತ ಕಿರಣದ ಬಳಿ ಚಿತ್ರಿಸುತ್ತದೆ ಮತ್ತು ಯುವಿ ಬಳಿಯ ಸೌರ ವಿಕಿರಣ ವ್ಯತ್ಯಾಸಗಳನ್ನು ಸಹ ಅಳೆಯುತ್ತದೆ.
ಆದಿತ್ಯ ಹೋಗುವ ಜಾಗಕ್ಕೆ ಈಗಾಗಲೇ ತೆರಳಿರುವ ಅಮೆರಿಕ ಮತ್ತು ಜರ್ಮನಿ, ಅನೇಕ ಮಹತ್ವದ ಸೌರ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಭೂಮಿ ಮತ್ತು ಸೂರ್ಯನ ನಡುವಿನ ಸರಾಸರಿ ದೂರ 14 ಕೋಟಿ ಕಿ.ಮೀ.ಗಳು. ನಾಸಾದ ‘ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್’ 2018ರ ಆಗಸ್ಟ್ 12ರಂದು ಸೂರ್ಯನ ಅತಿ ಸಮೀಪ ಅಂದರೆ 1.86 ಕೋಟಿ ಕಿ.ಮೀ. ಹತ್ತಿರ ಹೋಗಿತ್ತು. ಸೂರ್ಯನ ಅತಿ ಹತ್ತಿರದ ಬಿಂದವನ್ನು ಖಗೋಳಶಾಸ್ತ್ರೀಯ ಭಾಷೆಯಲ್ಲಿ ಪೆರಿಹೆಲಿಯನ್ (Perihelion) ಎಂದು ಕರೆಯುತ್ತಾರೆ.
ಆದಿತ್ಯ-ಎಲ್1 ಮಿಷನ್ ಉದ್ದೇಶವೇನು? :
ಇಸ್ರೋ ನ ವೆಬ್‌ಸೈಟ್‌ನ ಪ್ರಕಾರ, ಆದಿತ್ಯ ಯೋಜನೆಯ ಪ್ರಮುಖ ವೈಜ್ಞಾನಿಕ ಉದ್ದೇಶವೆಂದರೆ, ಸೌರ ಮೇಲ್ಭಾಗದ ವಾತಾವರಣದ ಕ್ರೋಮೋಸ್ಫಿಯರ್ ಮತ್ತು ಕರೋನಾ (chromosphere and corona) ಚಲನೆಯನ್ನು ಅಧ್ಯಯನ ಮಾಡುವುದು ಮತ್ತು ಸೌರ ಕರೋನದ ಭೌತಶಾಸ್ತ್ರ ಮತ್ತು ಅದರ ತಾಪನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವುದಾಗಿದೆ. ಸೂರ್ಯನ ಮೇಲ್ಮೈ ವಾತಾವರಣದ ತಾಪಮಾನ 9,99,726 ಡಿಗ್ರಿ ಸೆಲೆಸಿಯ್ಸ್ ಇರುತ್ತದೆ ಹಾಗೂ ಮತ್ತು ಅದರ ಕಡಿಮೆ ತಾಪಮಾನ 5,726 ಡಿಗ್ರಿ ಉಷ್ಣಾಂಶವಿದ್ದು, ಇದರ ನಡುವಿನ ವ್ಯತ್ಯಾಸವು ಸೌರ ಭೌತಶಾಸ್ತ್ರದ ಅಧ್ಯಯನದಲ್ಲಿ ಇದುವರೆಗೆ ಖಭೌತಶಾಸ್ತ್ರ ವಿಜ್ಞಾನಿಗಳಲ್ಲಿ ಪರಿಹರಿಸಲಾಗದ ಸಮಸ್ಯೆಗಳಲ್ಲಿ ಒಂದಾಗಿದೆ. ಆದಿತ್ಯ-ಎಲ್1 ಮಿಷನ್ ಯೋಜನೆಯಿಂದಾಗಿ ಅದರಲ್ಲಿರುವ ವಿವಿಧ ಉಪಕರಣಗಳು, ಸೂರ್ಯನ ವಾತಾವರಣದ ಹಲವು ಪದರಗಳ ಏಕಕಾಲಿಕ ಫೋಟೋಗಳನ್ನು ಸೆರೆಹಿಡಿಯುತ್ತದೆ, ಶಕ್ತಿಯನ್ನು ಒಂದು ಪದರದಿಂದ ಇನ್ನೊಂದು ಪದರಕ್ಕೆ ಹೇಗೆ ರವಾನಿಸಲಾಗುತ್ತದೆ ಮತ್ತು ಸಾಗಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸುತ್ತದೆ.
ಆದಿತ್ಯ-1 ಯೋಜನೆ ಆದಿತ್ಯ-ಎಲ್1 ಮಿಷನ್ ಆಗಿದ್ದು ಹೇಗೆ? :
ಈ ಯೋಜನೆಯನ್ನು ಆರಂಭದಲ್ಲಿ ಆದಿತ್ಯ-1 ಎಂದು ಹೆಸರಿಡಲಾಗಿತ್ತು. ಆ ಸಂದರ್ಭದಲ್ಲಿ 400 ಕೆಜಿ ವರ್ಗದ ಉಪಗ್ರಹದಲ್ಲಿ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಎಂಬ ಒಂದೇ ಪೇಲೋಡ್ ಅನ್ನು ಹೊತ್ತೊಯ್ಯಲು ಉದ್ದೇಶಿಸಲಾಗಿತ್ತು. ಯಾವಾಗ ಆ ಗಗನನೌಕೆಯು ಸೂರ್ಯ-ಭೂಮಿಯ ವ್ಯವಸ್ಥೆಯ ಲಗ್ರಾಂಜಿಯನ್ ಪಾಯಿಂಟ್ 1 (L1) ನ ಕಕ್ಷೆಯಲ್ಲಿ ಹಾರಿಸಲು ಉದ್ದೇಶಿಸಿದ ನಂತರ ಅದನ್ನು ‘ಆದಿತ್ಯ-L1 ಮಿಷನ್’ ಎಂದು ಮರುನಾಮಕರಣ ಮಾಡಲಾಯಿತು. ಬಹು ಪೇಲೋಡ್‌ಗಳ ಸೇರ್ಪಡೆಯೊಂದಿಗೆ, ಈ ಯೋಜನೆಯು ದೇಶಾದ್ಯಂತದ ಸೌರ ವಿಜ್ಞಾನಿಗಳಿಗೆ ಬಾಹ್ಯಾಕಾಶ ಆಧಾರಿತ ಉಪಕರಣ ಮತ್ತು ವೀಕ್ಷಣೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸಿತು. ಇಸ್ರೋದ ವೆಬ್‌ಸೈಟ್ ಪ್ರಕಾರ, ಉದ್ದೇಶಿತ ಆದಿತ್ಯ-ಎಲ್ 1 ಯೋಜನೆಯಿಂದಾಗಿ ಸೂರ್ಯನಲ್ಲಿನ ಚಲನ ಪ್ರಕ್ರಿಯೆಗಳ ಬಗ್ಗೆ ವಿಜ್ಞಾನಿಗಳಿಗೆ ಸಂಪೂರ್ಣ ಜ್ಞಾನವನ್ನು ಒದಗಿಸುವ ಹಾಗೂ ಸೌರ ಭೌತಶಾಸ್ತ್ರದಲ್ಲಿನ ಕೆಲವು ಮಹತ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಲಿದೆ.