ಬೆಂಗಳೂರು, ಆ.30 www.bengaluruwire.com
ಬಿಬಿಎಂಪಿಯ ಗುಣ ನಿಯತ್ರಣ ಪ್ರಯೋಗಾಲಯದಲ್ಲಿ ಆ.11ರಂದು ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುಣ ನಿಯಂತ್ರಣ ಮತ್ತು ಗುಣ ಭರವಸೆ ವಿಭಾಗದ ಮುಖ್ಯ ಅಭಿಯಂತರರಾದ ಸಿ.ಎಂ ಶಿವಕುಮಾರ್ ಅವರು ಶೇಷಾದ್ರಿಪುರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಾವನ್ನಪ್ಪಿದ್ದಾರೆ.
ಶಿವಕುಮಾರ್ ನಿಧನರಾಗಿರುವುದಕ್ಕೆ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಸಂತಾಪ ಸೂಚಿಸಿದ್ದಾರೆ.
2005ರಲ್ಲಿ ಪಾಲಿಕೆಯ ಸೇವೆಗೆ ನೇಮಕಗೊಂಡಿದ್ದ ಅವರು ಹಲವು ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಶಿವಕುಮಾರ್ ರವರು ಕಿರಿಯ ವಯಸ್ಸಿನಲ್ಲೇ ವಿಧಿವಶರಾಗಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬ ಸದಸ್ಯರು ಹಾಗೂ ಬಂಧು-ಮಿತ್ರರಿಗೆ ಕರುಣಿಸಲೆಂದು ದೇವರಲ್ಲಿ ಆಡಳಿತಗಾರರು ಹಾಗೂ ಮುಖ್ಯ ಆಯುಕ್ತರು ಪ್ರಾರ್ಥಿಸಿದ್ದಾರೆ.
ಶಿವಕುಮಾರ್ ರಾಜರಾಜೇಶ್ವರಿ ನಗರದಲ್ಲಿ ವಾಸಿಸುತ್ತಿದ್ದರು. ಅವರು ಪತ್ನಿ ಉಮಾಮಹೇಶ್ವರಿ, ಮಕ್ಕಳಾದ ವಿಭಾ ನಿಧಿ ಶಿವಮ್ ಹಾಗೂ ನಿರ್ವಿ ನೇಹ ಶಿವಮ್ ಅವರನ್ನು ಅಗಲಿದ್ದಾರೆ. ಆ.11ರಂದು ಬಿಬಿಎಂಪಿಯ ಗುಣ ನಿಯತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ 9 ಮಂದಿ ಗಾಯಗೊಂಡವರಲ್ಲಿ ಶಿವಕುಮಾರ್ ಹಾಗೂ ಮತ್ತೊಬ್ಬ ಸಿಬ್ಬಂದಿ ಜ್ಯೋತಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.