ಬೆಂಗಳೂರು, ಆ.29 www.bengaluruwire.com : ಕಾಂಗ್ರೆಸ್ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ “ಗೃಹಲಕ್ಷ್ಮಿ ಯೋಜನೆ”ಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ನಗರದ 198 ವಾರ್ಡ್ ಸೇರಿದಂತೆ ರಾಜ್ಯದ ಸುಮಾರು 11 ಸಾವಿರ ಸ್ಥಳಗಳಲ್ಲಿ ವರ್ಚುವಲ್ ವಿಡಿಯೋ ಮೂಲಕ ಏಕಕಾಲಕ್ಕೆ ಚಾಲನೆ ಸಿಗಲಿದೆ.
ಈಗಾಗಲೇ ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 6,16,480 ಜನ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ತಲಾ 2000ರೂ. ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ”ಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ.
ಈ ಸಂಬಂಧ ಈಗಾಗಲೇ ಸದರಿ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಆ.30ರ ಬುಧವಾರದಂದು ಬೆಳಗ್ಗೆ 11.30 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರುಗಳು ಸೇರಿದಂತೆ ಇನ್ನಿತರೆ ಗಣ್ಯರುಗಳು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆಗೆ ಚಾಲನೆ ನೀಡುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮ ಪ್ರಮುಖ ಅಂಶಗಳು :
- 198 ವಾರ್ಡ್ ಗಳಲ್ಲಿ ಕಾರ್ಯಕ್ರಮದ ನೇರ ವೀಕ್ಷಣೆ ಮಾಡುವ ಸಲುವಾಗಿ ಟಿವಿ/ಎಲ್.ಇ.ಡಿ ಪರದೆ ವ್ಯವಸ್ಥೆ ಮಾಡಲಾಗಿದೆ.
- ಕಾರ್ಯಕ್ರಮದ ಸ್ಥಳದಲ್ಲಿ ಆಸನ, ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಇಂಟರ್ನೆಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
- ಗೃಹಲಕ್ಷ್ಮಿ ಯೋಜನೆ ಕುರಿತು ಕರಪತ್ರಗಳನ್ನು ವಿತರಿಸಲಾಗುತ್ತದೆ.
- ಕಾರ್ಯಕ್ರಮದ ಮೇಲುಸ್ತುವಾರಿಯನ್ನು ವಲಯ ಜಂಟಿ ಆಯುಕ್ತರು, ಉಪ ಆಯುಕ್ತರು ಹಾಗೂ ಮುಖ್ಯ ಅಭಿಯಂತರರಿಗೆ ವಹಿಸಲಾಗಿದೆ.
- ಕಾರ್ಯಕ್ರಮ ಆಯೋಜಿಸಿರುವ ಸ್ಥಳದಲ್ಲಿ ವ್ಯವಹರಿಸಲು ಹಾಗೂ ಮೇಲ್ವಿಚಾರಣೆಗಾಗಿ ಪ್ರತಿಯೊಂದು ವಾರ್ಡಿಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
- ಸರ್ ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್) ಜೆ.ಸಿ ರಸ್ತೆ, ಬೆಂಗಳೂರು – 560002 ಇಲ್ಲಿ ಮುಖ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಲಯವಾರು ವಾರ್ಡ್ ಹಾಗೂ ಗುರುತಿಸಿರುವ ಸ್ಥಳಗಳ ವಿವರ :
- ಪೂರ್ವ 44
- ಪಶ್ಚಿಮ 44
- ದಕ್ಷಿಣ 44
- ಬೊಮ್ಮನಹಳ್ಳಿ 16
- ಮಹದೇವಪುರ 17
- ಯಲಹಂಕ 11
- ದಾಸರಹಳ್ಳಿ 08
- ರಾಜರಾಜೇಶ್ವರಿ ನಗರ 14