ನವದೆಹಲಿ, ಆ.29 www.bengaluruwire.com : ರಾಷ್ಟ್ರಾದ್ಯಂತ ಎಲ್ಪಿಜಿ ಗ್ರಾಹಕರಿಗೆ ಕೊಂಚ ನೆಮ್ಮದಿ ಮೂಡಿಸುವ ಕ್ರಮವಾಗಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಪ್ರತಿ ಅಡುಗೆ ಅನಿಲ (Domestic Gas Cylinder) ಬೆಲೆಯಲ್ಲಿ ಆ.30ರಿಂದ ಜಾರಿಗೆ ಬರುವಂತೆ 200 ರೂ. ಇಳಿಕೆ ಮಾಡಿದೆ.
ದೇಶಾದ್ಯಂತ ಎಲ್ಲಾ ಮಾರುಕಟ್ಟೆಗಳಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ. ಕಡಿಮೆಗೊಳಿಸಲಾಗುತ್ತದೆ. ಉದಾಹರಣೆಗೆ ದೆಹಲಿಯಲ್ಲಿ ಈ ನಿರ್ಧಾರದಿಂದ 14.2 ಕೆಜಿ ಪ್ರತಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ ಹಾಲಿ ಇರುವ ರೂ 1,103ರಿಂದ 903 ರೂ.ಗೆ ಇಳಿಕೆ ಆಗುತ್ತದೆ. ಇದರಿಂದಾಗಿ ದೇಶದ 33 ಕೋಟಿ ಸಂಪರ್ಕಗಳನ್ನು ಹೊಂದಿದ ಎಲ್ ಪಿಜಿ ಗ್ರಾಹಕರಿಗೆ ಅನುಕೂಲವಾಗಿದೆ.
ರಕ್ಷಾ ಬಂಧನ ಸಂದರ್ಭದಲ್ಲಿ ಕೋಟ್ಯಾಂತರ ಸಹೋದರಿಯರಿಗೆ ಇದು ಕೊಡುಗೆಯಾಗಿದೆ. ನಮ್ಮ ಸರ್ಕಾರವು ಯಾವಾಗಲೂ ಜನರ ಜೀವನದ ಗುಣಮಟ್ಟ ಸುಧಾರಿಸಲು ಮತ್ತು ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಎಲ್ಲವನ್ನೂ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಕಡಿತವು ಪ್ರಧಾನಮಂತ್ರಿ ಉಜ್ವಲ (PMUY) ಯೋಜನೆಯ ಕುಟುಂಬಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂ. ಹಾಲಿ ಇರುವ ಸಬ್ಸಿಡಿಗೆ ಹೆಚ್ಚುವರಿಯಾಗಿದೆ, ಹಾಗೂ ಇದು ಮುಂದುವರಿಯಲಿದೆ. ಆದ್ದರಿಂದ ಪಿಎಂಯುವೈ ಕುಟುಂಬಗಳಿಗೆ, ಈ ಕಡಿತದ ನಂತರ ದೆಹಲಿಯಲ್ಲಿ ಪರಿಣಾಮಕಾರಿ ಬೆಲೆ ಪ್ರತಿ ಸಿಲಿಂಡರ್‌ಗೆ 703 ರೂ. ಆಗಲಿದೆ.
9.6 ಕೋಟಿ ಪಿಎಂಯುವೈ ಫಲಾನುಭವಿ ಕುಟುಂಬಗಳು ಸೇರಿದಂತೆ ದೇಶದಲ್ಲಿ 31 ಕೋಟಿಗಿಂತ ಹೆಚ್ಚಿನ ದೇಶೀಯ ಎಲ್ಪಿಜಿ ಗ್ರಾಹಕರಿದ್ದಾರೆ. ಈ ಕಡಿತವು ದೇಶದ ಎಲ್ಲಾ ಎಸ್ಪಿಜಿ ಗ್ರಾಹಕರಿಗೆ ಸಹಾಯ ಮಾಡುತ್ತದೆ. ಬಾಕಿ ಉಳಿದಿರುವ ಪಿಎಂಯುವೈ ಅರ್ಜಿಗಳನ್ನು ತೆರವುಗೊಳಿಸಲು ಮತ್ತು ಎಲ್ಲಾ ಅರ್ಹ ಕುಟುಂಬಗಳಿಗೆ ಠೇವಣಿಮುಕ್ತ ಎಲ್ಪಿಜಿ ಸಂಪರ್ಕ ಒದಗಿಸಲು, ಎಲ್ಪಿಜಿ ಸಂಪರ್ಕ ಹೊಂದಿರದ ಬಡ ಕುಟುಂಬಗಳ 75 ಲಕ್ಷ ಮಹಿಳೆಯರಿಗೆ ಸರ್ಕಾರ ಶೀಘ್ರದಲ್ಲೇ ಪಿಎಂಯುವೈ ಸಂಪರ್ಕಗಳನ್ನು ವಿತರಿಸಲು ಪ್ರಾರಂಭಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದರಿಂದಾಗಿ ಪಿಎಂಯುವೈ ಯೋಜನೆ ಅಡಿ, ಒಟ್ಟು ಫಲಾನುಭವಿಗಳ ಸಂಖ್ಯೆ 9.6 ಕೋಟಿಯಿಂದ 10.35 ಕೋಟಿಗೆ ಹೆಚ್ಚಾಗಲಿದೆ. ದೇಶದ ನಾಗರಿಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಮತ್ತು ಕುಟುಂಬಗಳ ಕಲ್ಯಾಣ ಉತ್ತೇಜಿಸಲು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರಗಳನ್ನು ಮಾಡಲಾಗಿದೆ.
ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, “ಕುಟುಂಬಗಳು ತಮ್ಮ ಬಜೆಟ್ ನಿರ್ವಹಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅಡುಗೆ ಅನಿಲದ ಬೆಲೆ ಇಳಿಕೆಯು ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ನೇರ ಪರಿಹಾರ ಒದಗಿಸುವ ಗುರಿ ಹೊಂದಿದೆ. ಕೈಗೆಟಕುವ ಬೆಲೆಗೆ ಅಗತ್ಯ ವಸ್ತುಗಳು ಸಿಗುವುದನ್ನು ಖಾತ್ರಿಪಡಿಸುವ ಸರ್ಕಾರದ ದೊಡ್ಡ ಗುರಿಯನ್ನು ಬೆಂಬಲಿಸುತ್ತದೆ” ಎಂದರು.