ನವದೆಹಲಿ, ಆ.27 www.bengaluruwire.com :
ಮೆಟಾ-ಮಾಲೀಕತ್ವದ ವಾಟ್ಸಪ್ (WhatsApp) ಕಳೆದ ಎರಡು ದಿನಗಳಲ್ಲಿ ತನ್ನ ಆಪ್ ಸೌಲಭ್ಯಗಳಲ್ಲಿ ವಿವಿಧ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಬಳಕೆದಾರರಿಗೆ ಎಚ್ ಡಿ (HD) ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ಮಾಡಿಕೊಟ್ಟಿತು, ಇದೀಗ ಎಚ್ ಡಿ ವಿಡಿಯೊಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿದೆ.
ವಾಟ್ಸಪ್ ಎಚ್ ಡಿ ವಿಡಿಯೋ ಹಂಚಿಕೆ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಲಭ್ಯವಿದೆ. ಮುಂಬರುವ ವಾರಗಳಲ್ಲಿ, ಇದು ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ. ಹೊಸ ವೈಶಿಷ್ಟ್ಯವು ಬಳಕೆದಾರರಿಗೆ 720 ಪಿಕ್ಸಲ್ ಎಚ್ ಡಿ ಗುಣಮಟ್ಟದಲ್ಲಿ ವಿಡಿಯೊಗಳನ್ನು ಕಳುಹಿಸಲು ಅವಕಾಶ ಕಲ್ಪಿಸುತ್ತದೆ. ಇಲ್ಲಿಯವರೆಗೆ, ವಾಟ್ಸಪ್ ಮೂಲಕ ಕಳುಹಿಸುವ ವಿಡಿಯೋಗಳು, ಗುಣಮಟ್ಟವನ್ನು ಲೆಕ್ಕಿಸದೆ, ಸ್ವಯಂಚಾಲಿತವಾಗಿ 480ಪಿಕ್ಸಲ್ ಗುಣಮಟ್ಟಕ್ಕೆ ಸಂಕುಚಿತಗೊಳ್ಳುತ್ತಿತ್ತು. ಆದ್ದರಿಂದ, ಈಗಿನ ವೈಶಿಷ್ಟ್ಯದ ಹೊಸ ಸೌಲಭ್ಯವು ವಾಡ್ಸಪ್ ಮೂಲಕ ಹಂಚಿಕೊಳ್ಳಲಾದ ವಿಡಿಯೋಗಳು ಮೊದಲಿಗಿಂತ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಅದಾಗ್ಯೂ, ನೀವು ಇನ್ನೂ 1080 ಪಿಕ್ಸಲ್ ಅಥವಾ 4ಕೆ ಗುಣಮಟ್ಟದಲ್ಲಿ ವಿಡಿಯೊಗಳನ್ನು ಕಳುಹಿಸಲು ಸಾಧ್ಯವಿಲ್ಲ.
ವಾಟ್ಸಪ್ ಮೂಲಕ ಎಚ್ ಡಿ ವಿಡಿಯೊಗಳನ್ನು ಕಳುಹಿಸುವುದು ಹೇಗೆ? :
ನೀವು ಎಚ್ ಡಿ ಫೋಟೋಗಳನ್ನು ಕಳುಹಿಸುವ ರೀತಿಯಲ್ಲಿಯೇ ವಾಟ್ಸಪ್ ಮೂಲಕ ಎಚ್ ಡಿ ವಿಡಿಯೊಗಳನ್ನು ಕಳುಹಿಸಬಹುದು. ಮೊದಲನೆಯದಾಗಿ, ನಿಮ್ಮ ವಾಟ್ಸಪ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕು.
ನಂತರ ನೀವು ವಿಡಿಯೊವನ್ನು ಕಳುಹಿಸಲು ಬಯಸುವ ವಾಟ್ಸಪ್ ಚಾಟ್ ಅನ್ನು ತೆರೆಯಿರಿ. ನಂತರ, ಅಟ್ಯಾಚ್ ಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ವಿಡಿಯೊವನ್ನು ಆಯ್ಕೆ ಮಾಡಿ. ವಿಡಿಯೋದ ಮೇಲ್ಭಾಗದಲ್ಲಿ ನೀವು ಎಚ್ ಡಿ ಎಂಬ ಟಾಗಲ್ ಬಟನ್ ಕಾಣಿಸುತ್ತದೆ. ಇದು ವಿಡಿಯೊದ ಗುಣಮಟ್ಟವನ್ನು ಬದಲಾಯಿಸಲು ಅವಕಾಶ ಕಲ್ಪಿಸುತ್ತದೆ.
ಫೋಟೋ ಶೀರ್ಷಿಕೆಗಳನ್ನು ಇದೀಗ ಎಡಿಟ್ ಮಾಡಲು ವಾಟ್ಸಪ್ ನಿಮಗೆ ಹೊಸ ಫೀಚರ್ ನೀಡಿದೆ. ಕಳೆದ ವಾರ, ವಾಟ್ಸಪ್ ಫೋಟೋಗಳು, ವಿಡಿಯೋಗಳು, ಜಿಐಎಫ್ (GIF) ಗಳು ಮತ್ತು ಡಾಕ್ಯುಮೆಂಟ್‌ಗಳ ಶೀರ್ಷಿಕೆಗಳನ್ನು ಎಡಿಟ್ ಮಾಡುವ ಆಯ್ಕೆಯನ್ನು ಹೊರತರಲು ಪ್ರಾರಂಭಿಸಿತು.
ಈ ವರ್ಷದ ಮೇ ತಿಂಗಳಲ್ಲಿ, ವಾಟ್ಸಪ್ ಚಾಟ್‌ನಲ್ಲಿ ಪಠ್ಯ ಸಂದೇಶಗಳನ್ನು ಸಂಪಾದಿಸಲು ವೈಶಿಷ್ಟ್ಯವನ್ನು ಹೊರತಂದಿದೆ. ಈ ಸಂದೇಶಗಳನ್ನು ಬಳಕೆದಾರರು ಕಳುಹಿಸಿದ ನಂತರದಲ್ಲಿ 15 ನಿಮಿಷಗಳವರೆಗೆ ಅವುಗಳನ್ನು ಎಡಿಟ್ ಮಾಡುವ ರೀತಿ ಆಪ್ ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.