ಬೆಂಗಳೂರು, ಆ.25 www.bengaluruwire.com : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport -KIAL)ದಲ್ಲಿ ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಹೊಸ “ಎಲಿವೇಟೆಡ್ ವಾಕ್‌ವೇ” ಅನ್ನು ಪ್ರಾರಂಭಿಸಿದೆ.
ಈ ನೂತನ ವಾಕ್‌ವೇ ಟರ್ಮಿನಲ್ 1 ವಿಮಾನ ನಿಲ್ದಾಣದಿಂದ ರಿಂದ ಪಿ4 (P4) ಪಾರ್ಕಿಂಗ್ ಅನ್ನು ಸಂಪರ್ಕಿಸಲಿದೆ. ಟರ್ಮಿನಲ್ 1 ಕಡೆಗೆ ಹಾಗೂ ಪಿ4 ಪಾರ್ಕಿಂಗ್ ಕಡೆಗೆ ನಡೆದು ಸಾಗುವ ಪಾದಚಾರಿಗಳಿಗೆ ತಡೆರಹಿತ ಅನುಭವವನ್ನು ನೀಡಲು 420 ಮೀಟರ್ ನಡಿಗೆ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ಕಾಲ್ನಡಿಗೆಯ ನಯವಾದ ಮತ್ತು ಆಧುನಿಕ ವಿನ್ಯಾಸದೊಂದಿಗೆ, ಎಲಿವೇಟರ್ ಮತ್ತು ಎಸ್ಕಲೇಟರ್‌ಗಳಂತಹ ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ನೀಡಲಾಗಿದ್ದು, ಇದರಿಂದ ಪ್ರಯಾಣಿಕರು ಸುಲಭ ಮತ್ತು ಆರಾಮದಾಯಕವಾದ ನಡಿಗೆಯ ಅನುಭವ ಪಡೆಯಬಹುದು ಎಂದು ಕೆಐಎಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಾಕ್ ವೇ ವಿನ್ಯಾಸವು ಪ್ರಯಾಣಿಕ ಸ್ನೇಹಿಯಾಗಿದ್ದು, ಹಿರಿಯ ನಾಗರಿಕರು ಮತ್ತು ನಡೆಯಲು ಕಷ್ಟವಾಗುವವರಿಗೂ ಅನುಕೂಲವಾಗಿದೆ. ಕಾಲ್ನಡಿಗೆಯಲ್ಲಿ ಸುರಕ್ಷಿತ ಪಾದಚಾರಿ ಕಾರಿಡಾರ್ ಮತ್ತು ರಾತ್ರಿಯಿಡೀ ಸುರಕ್ಷಿತ ಹಾಗೂ ಆರಾಮದಾಯಕ ವಾತಾವರಣವನ್ನು ಖಾತರಿಪಡಿಸುತ್ತದೆ. ಇಲ್ಲಿನ ವ್ಯವಸ್ಥೆಯು ಎಲ್ಲಾ ಹವಾಮಾನ ಪರಿಸ್ಥಿತಿಗೂ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.