ಬೆಂಗಳೂರು, (ಇಸ್ರೋ ಪೀಣ್ಯಾ ಇಸ್ಟ್ರಾಕ್ ಕೇಂದ್ರ) ಆ.23 www.bengaluruwire.com : ಭಾರತ ಚಂದ್ರಯಾನ-3 ಮಹತ್ವದ ಯೋಜನೆಯಲ್ಲಿ ಯಶಸ್ಸು ಸಾಧಿಸಿದೆ. ಇಸ್ರೋ ವಿಶ್ವದ ಯಾವುದೇ ದೇಶ ಸಾಧಿಸದ ಸಾಧನೆಯನ್ನು ಭಾರತದ ಇಸ್ರೋ ವಿಜ್ಞಾನಿಗಳು ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-3 ಲ್ಯಾಂಡರ್ ಅನ್ನು ಇಳಿಸಿ ಯಶಸ್ಸು ಸಾಧಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಂಡಾಡಿದ್ದಾರೆ.
ಚಂದಮಾಮ ಬಹಳ ದೂರ ಅನ್ನುತ್ತಿದ್ದರು. ಮಕ್ಕಳು ಇನ್ನು ಮುಂದೆ ಭವಿಷ್ಯದಲ್ಲಿ ಚಂದ್ರನಲ್ಲಿ ಪ್ರವಾಸ ಮಾಡಬಹುದಾದಷ್ಟು ಬಹಳ ಹತ್ತಿರದಲ್ಲಿದೆ ಎನ್ನುವ ಸಂದರ್ಭ ಬರಲಿದೆ. ಈ ಯೋಜನೆಯು ಮಾನವೀಯ ನೆಲೆಯಲ್ಲಿ ನಿರ್ಮಾಣವಾಗಿದ್ದು, ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಚಂದ್ರಯಾನ ಮಹಾ ಅಭಿಯಾನದ ಯಶಸ್ಸಿನ ಬಳಿಕ ಭಾರತವು ಅದಕ್ಕಿಂತ ಮುಂದೆ ಸಾಗಲಿದೆ. ಭವಿಷ್ಯದ ಮಾನವನಿಗಾಗಿ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಮಿಷನ್ ಯೋಜನೆಯಡಿ ಉಪಗ್ರಹವನ್ನು ಸೂರ್ಯನತ್ತ ಹಾರಿಬಿಡಲಿದೆ. ಮಾನವ ಸಹಿತ ಗಗನಯಾನ ನೌಕೆಯು ಸದ್ಯದಲ್ಲೇ ಸಾಕಾರವಾಗಲಿದೆ. ಶುಕ್ರ ಗ್ರಹದತ್ತಲೂ ನಮ್ಮ ವಿಜ್ಞಾನಿಗಳು ಲಕ್ಷ್ಯ ಇಟ್ಟಿದ್ದಾರೆ.
ಇಂದಿನ ದಿನ ಯಾರೂ ಮರೆಯುವಂತಿಲ್ಲ. ನಮ್ಮ ಸಂಕಲ್ಪ ಸಿದ್ದಿಯಾದ ದಿನವಾಗಿದೆ. ದೇಶದ ಪ್ರತಿ ವಿಜ್ಞಾನಿಗಳಿಗೆ ಅಭಿನಂದನೆಗಳು. ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೂ ಶುಭ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಚಂದ್ರನ ಅಂಗಳಕ್ಕೆ ಇಳಿದ ವಿಶ್ವದ ನಾಲ್ಕನೇ ರಾಷ್ಟ್ರ ಹಾಗೂ ದಕ್ಷಿಣ ದೃವದಲ್ಲಿ ಇಳಿದ ಮೊದಲ ದೇಶವಾಗಿದೆ ಎಂದು ಚಂದ್ರಯಾನ-3 ನಿರ್ದೇಶಕ ಚಂದ್ರಕಾಂತ್ ತಿಳಿಸಿದರು. ಮಿಷನ್ ಸಹಾಯಕ ನಿರ್ದೇಶಕಿ ಕಲ್ಪನಾ, ಇದೊಂದು ಅಪರೂಪದ, ಮರೆಯಲಾರದ ಘಟನೆ. ಚಂದ್ರಯಾನ-3 ಪೂರ್ವಸಿದ್ಧತೆ ಬಹಳ ನಿಖರವಾಗಿ, ಯಶಸ್ವಿಯಾಗಿ ನಿಭಾಯಿಸಲಾಗಿತ್ತು.
ಇಸ್ರೋ ವಿಜ್ಞಾನಿ ಶಂಕರ್ ಮಾತನಾಡಿ, 2019ನಲ್ಲಿ ಸಾಧಿಸಬೇಕಗಿದ್ದನ್ನು ನಾಲ್ಕು ವರ್ಷದ ನಂತರ ಸಾಧಿಸಿದ್ದೇವೆ. ಸಾಕಷ್ಟು ಪ್ರಯತ್ನವನ್ನು ನಮ್ಮೆಲ್ಲ ತಂಡ ಮಾಡಿದೆ. ಚಂದ್ರಯಾನ-2 ಯೋಜನೆ ವಿಫಲವಾದಾಗ ಸಾಕಷ್ಟು ಟೀಕೆ ಬಂದಿತ್ತು. ಅದನ್ನೆಲ್ಲ ನಾವು ಮೆಟ್ಟಿನಿಂತು ಯಶಸ್ಸು ಸಾಧಿಸಿದ್ದೇವೆ. ಪ್ರಧಾನಿಗಳ ಪ್ರೋತ್ಸಾಹದಾಯಕ ಮಾತುಗಳು ನಾವು ಮತ್ತಷ್ಟು ಸಾಧಿಸಲು ಉತ್ಸಾಹ ಮೂಡಿಸಿದೆ. ನಮ್ಮ ದೇಶ ಪದೇ ಪದೇ ಇಂತಹ ಯಶಸ್ಸು ಸಾಧಿಸಲಿದೆ ಎಂದರು.
ಇಸ್ರೋ ಅಧ್ಯಕ್ಷ ಸೋಮನಾಥ್ ಮಾತನಾಡಿ ಇಸ್ರೋದ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸಿದರು. ಹಾಗೂ ಇಸ್ರೋ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿ, ಈ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳು ಹಾಗೂ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು. ಇಸ್ರೋದ ಆದಿತ್ಯ ಎಲ್-1 ಮಿಷನ್ ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ. ಮುಂದಿನ ಮೂರು ತಿಂಗಳಿನಲ್ಲಿ ಇಸ್ರೋದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿದೆ ಎಂದರು.