ಬೆಂಗಳೂರು, ಆ.20 www.bengaluruwire.com : ನಗರದ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ(ಕ್ವೀನ್ಸ್ ರಸ್ತೆ) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯಿಂದ ಅಳವಡಿಸಿದ್ದ ಅನಧಿಕೃತ ಬ್ಯಾನರ್ ಹಾಕಿದ್ದನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿ 50,000 ರೂ. ದಂಡ ವಿಧಿಸಿದೆ.
ನಗರದಾದ್ಯಂತ ಯಾವುದೇ ಪ್ರಭಾವಿಗಳು, ರಾಜಕೀಯ ಪಕ್ಷದ ನಾಯಕರು, ಸಂಘ ಸಂಸ್ಥೆಗಳು, ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿ ದಂಡ ಹಾಕಲು ಇತ್ತೀಚೆಗಷ್ಟೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಕಣ್ಣಪ್ಪಣೆ ಹೊರಡಿಸಿದ್ದರು. ಅದರಂತೆ ಪಾಲಿಕೆ ಸಿಬ್ಬಂದಿ ಕಾಂಗ್ರೆಸ್ ಪಕ್ಷವರು ಹಾಕಿದ್ದ ಜಾಹೀರಾತು ತೆರವು ಮಾಡಿದೆ.
ವಸಂತನಗರ ವಾರ್ಡ್ ನಂಬರ್ 93ರ ವ್ಯಾಪ್ತಿಯ ಕ್ಲೀನ್ಸ್ ರಸ್ತೆಯ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಾಗೂ ರಾಜ್ಯದ ಎಲ್ಲಾ ಪಧಾಧಿಕಾರಿಗಳು ರವರುಗಳು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ದಿ. ಡಿ. ದೇವರಾಜ ಅರಸು ರವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಲಾಗಿತ್ತು.
ಬ್ಯಾನರ್ ಅಳವಡಿಸಿರುವ ಬಗ್ಗೆ ಪಾಲಿಕೆವತಿಯಿಂದ ಅಧಿಕೃತವಾಗಿ ಪರವಾನಿಗೆ ಅಥವಾ ಅನುಮತಿಯನ್ನು ಪಡೆದಿರುವುದಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಿಗೆ 50 ಸಾವಿರ ರೂ.ದಂಡ ವಿಧಿಸಲಾಗಿದೆ. ಈ ಹಣವನ್ನು ಮುಖ್ಯ ಆಯುಕ್ತರ ಖಾತೆಗೆ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಪಾಲಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.