ಬೆಂಗಳೂರು, ಆ.18 www.bengaluruwire.com : ನಿರೀಕ್ಷೆಯಂತೆಯೇ ನಗರಾಭಿವೃದ್ಧಿ ಇಲಾಖೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸಂಬಂಧಿಸಿದಂತೆ 225 ಕರಡು ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ಆ.18 ರಂದು ಕರ್ನಾಟಕ ರಾಜ್ಯಪತ್ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿದೆ. ಈ ಕರಡಿನ ವಾರ್ಡ್ ವಾರು ಪುನರ್ ವಿಂಗಡಣೆ ಕುರಿತಂತೆ ಸಾರ್ವಜನಿಕರು – ಸಂಸ್ಥೆಗಳಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಿದೆ.
ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಅಧಿಸೂಚನೆ ಪ್ರಕಟಣೆಯಾದ ದಿನದಿಂದ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬಿಬಿಎಂಪಿ ವಾರ್ಡುಗಳ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಮುಖ್ಯ ಆಯುಕ್ತರಾಗಿರುವ ತುಷಾರ್ ಗಿರಿನಾಥ್, ಆಗಸ್ಟ್ 8ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸರ್ಕಾರಕ್ಕೆ ಆಗಸ್ಟ್ 14ರಂದು ವಾರ್ಡ್ ವಾರು ಕರಡು ಪುನರ್ ವಿಂಗಡಣಾ ವರದಿಯನ್ನು ಸಲ್ಲಿಸಿದ್ದರು. ಇದನ್ನು ಒಪ್ಪಿದ ಸರ್ಕಾರವು 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಕರಡು ಪಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಿದೆ.
ಬಿಬಿಎಂಪಿ ವ್ಯಾಪ್ತಿಗೆ 2021ರ ನವೆಂಬರ್ 20ರಂದು ವಾರ್ಡುಗಳ ಪುನರ್ ವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನನ್ವಯ, ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು 243 ವಾರ್ಡುಗಳಾಗಿ ವಿಂಗಡಣೆಗೊಳಿಸಿ ಅಧಿಸೂಚಿಸಲಾಗಿತ್ತು. ಆದರೆ ಈ ಅಧಿಸೂಚನೆಯನ್ನು ಪ್ರಶ್ನಿಸಿ, ಅದರ ವಿರುದ್ಧ ದಾಖಲಾಗಿದ್ದ ರಿಟ್ ಅರ್ಜಿಗಳನ್ನು, ಹೈಕೋರ್ಟ್ 2022ರ ಸೆಪ್ಟೆಂಬರ್ 16ರ ಆದೇಶದಲ್ಲಿ ವಜಾಗೊಳಿಸಿತ್ತು. ಈ ಆದೇಶವನ್ನು, ಪ್ರಶ್ನಿಸಿ ಮಾಜಿ ಮೇಯರ್ ಬಿ.ಎಸ್. ಮಂಜುನಾಥ ರೆಡ್ಡಿ ಮತ್ತು ಇತರರು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ರಿಟ್ ಅಪೀಲು ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠ ಈ ವರ್ಷದ ಜೂನ್ 19ರಂದು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡಣೆ ಕುರಿತಂತೆ ನಿಗದಿತ ಮಾರ್ಗಸೂಚಿಗಳು ಮತ್ತು ಕಾನೂನಿನ ಸಂಬಂಧಿತ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ 12 ವಾರಗಳ ಸಮಯವನ್ನು ನೀಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸರ್ಕಾರವು ಪಾಲಿಕೆ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ಗಳ ಪುನರ್ ವಿಂಗಡಣಾ ಆಯೋಗವನ್ನು ಜೂನ್ 23ರಂದು ಪುನರ್ ರಚಿಸಿ ಆದೇಶಿಸಿತ್ತು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರ ನವೆಂಬರ್ 20ರಂದು 243 ಬಿಬಿಎಂಪಿ ಕೌನ್ಸಿಲರ್ ಗಳನ್ನು ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದು ಪಾಲಿಕೆ ಪುರಪಿತೃಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಿತ್ತು. ಇದರ ಆಧಾರದ ಮೇಲೆ ಪ್ರಸ್ತುತ 225 ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಮಾಡಲಾಗಿದೆ. ಕರಡು ಪಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಸಾರ್ವಜನಿಕರ ಮಾಹಿತಿಗಾಗಿ erajyapatra.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ: 225 (ಎರಡು ನೂರ ಇಪ್ಪತ್ತೈದು).
2. ಪ್ರತಿ ವಾರ್ಡಿನ ಸಂಖ್ಯೆ ಮತ್ತು ವಾರ್ಡುಗಳ ಹೆಸರುಗಳನ್ನು ಅನುಬಂಧ-1ರ (ಕನ್ನಡ ಭಾಷೆಯಲ್ಲಿ) ಕಾಲಂ-2ರಲ್ಲಿ ಒದಗಿಸಲಾಗಿದೆ.
3. ಪ್ರತಿ ವಾರ್ಡುಗಳ ವ್ಯಾಪ್ತಿಯ ಗಡಿಗಳ ಚೆಕ್ಕು ಬಂದಿಯ ವಿವರಗಳನ್ನು ಅನುಬಂಧ-1ರ ಕಾಲಂ-4ರಲ್ಲಿ ನಿಗಧಿಪಡಿಸಲಾಗಿದೆ.
ಈ ಬಗ್ಗೆ ಯಾವುದೇ ಆಕ್ಷೇಪಣೆ / ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಲಿಖಿತ ರೂಪದಲ್ಲಿ ಸೂಕ್ತ ಕಾರಣ – ವಿವರಣೆಗಳೊಂದಿಗೆ ಆಕ್ಷೇಪಣೆ / ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸಸೌಧ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560 001 ಇವರಿಗೆ ಈ ಅಧಿಸೂಚನೆ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 (ಹದಿನೈದು) ದಿನಗಳೊಳಗಾಗಿ ಸಲ್ಲಿಸುವುದು. ನಿಗದಿತ ಅವಧಿಯ ನಂತರ ಸ್ವೀಕೃತಗೊಂಡ ಆಕ್ಷೇಪಣೆ / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ.