ಬೆಂಗಳೂರು, ಆ.16 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ಕೇಂದ್ರ ಕಚೇರಿಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಮೇಲೆ ಮೂರು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 83 ಕಂಪ್ಯೂಟರ್ ಆಪರೇಟರ್ ಗಳನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ಪಾಲಿಕೆ ಮುಖ್ಯ ಆಯುಕ್ತರ ಸೂಚನೆಯ ಮೇರೆಗೆ ಜಿಎ ಡಿಜಿಟಲ್ ವೆಬ್ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸೂಚಿಸಿದ್ದರು. ಅದರಂತೆ ಕಂಪ್ಯೂಟರ್ ಆಪರೇಟರ್ ಗಳನ್ನು ಆಂತರಿಕವಾಗಿ ಪುನರ್ ನಿಯೋಜಿಸಲಾಗಿದೆ. ಇದರಿಂದ ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಪಟ್ಟಭದ್ರ ಹಿತಾಸಕ್ತಿಯ ಕಂಪ್ಯೂಟರ್ ಆಪರೇಟರ್ ಗಳಿಗೆ ನುಂಗಲಾರದ ಬಿಸಿ ತುಪ್ಪವಾದ ಟ್ರಾನ್ಸ್ ಫರ್ :
ಆಯಕಟ್ಟಿನ ಸ್ಥಳಗಳಾದ ನಗರ ಯೋಜನೆ, ಕಂದಾಯ, ರಸ್ತೆ ಮೂಲಭೂತ ಸೌಕರ್ಯ, ಸಮಾಜ ಕಲ್ಯಾ, ಕೇಂದ್ರ ಯೋಜನೆ ಸೇರಿದಂತೆ ವಿವಿಧ ಕಡೆ ಕೆಲಸ ಮಾಡುತ್ತಿದ್ದ ಪಟ್ಟಭದ್ರ ಹಿತಾಸಕ್ತಿಯಿರುವ ಕೆಲವು ಕಂಪ್ಯೂಟರ್ ಆಪರೇಟರ್ ಗಳಿಗೆ ಬೇರೆ ಕಡೆ ಹೋಗುವ ಆಸಕ್ತಿಯಿಲ್ಲ. ಮೇಲಧಿಕಾರಿಗಳ ಜೊತೆ ಉತ್ತಮ ಸಂಬಂಧ ಹೊಂದಿ ಸಂಬಳಕ್ಕಿಂತ ಹೆಚ್ಚಿನ “ಗಿಂಬಳ“ದ ಆದಾಯ ಪಡೆಯುತ್ತಿದ್ದವರಿಗೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಆ.9ರ ಒಳಗೆ ವರ್ಗಾವಣೆ ಮಾಡಿದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದರೂ ಹಲವಾರು ಕಂಪ್ಯೂಟರ್ ಆಪರೇಟರ್ ಗಳು ನಿಯೋಜಿತ ಸ್ಥಳಗಳಿಗೆ ಹಾಜರಾಗುತ್ತಿಲ್ಲ ಎಂಬ ಮಾಹಿತಿ ಬೆಂಗಳೂರು ವೈರ್ ಗೆ ಮಾಹಿತಿ ಲಭ್ಯವಾಗಿದೆ.
ಬಿಬಿಎಂಪಿ ರಹಸ್ಯ ಮಾಹಿತಿಗಳ ಸೋರಿಕೆ :
ಇಇಗಳಿಂದ ಹಿಡಿದು ಸಿಇಗಳ ತನಕ, ಎಆರ್ ಒ ಗಳಿಂದ ಹಿಡಿದು ಡಿಸಿ ಹುದ್ದೆಯಲ್ಲಿರುವ ತನಕ ವಿವಿಧ ಸ್ತರಗಳ ಅಧಿಕಾರಿಗಳ ಕಾರ್ಯತಂತ್ರ, ಪಾಲಿಕೆಯ ಅಮೂಲ್ಯ ಮಾಹಿತಿಗಳು, ದತ್ತಾಂಶಗಳಿರುವ ಕಂಪ್ಯೂಟರ್ ಇದೇ ಕಂಪ್ಯೂಟರ್ ಆಪರೇಟರ್ ಗಳ ಕೈಯಲ್ಲಿರುತ್ತೆ. ಕೆಲವು ಪ್ರಕರಣಗಳಲ್ಲಿ ಹೊರಗಿನವರಿಗೆ, ಗುತ್ತಿಗೆದಾರರಿಗೆ, ಮದ್ಯವರ್ತಿಗಳಿಗೆ ಪಾಲಿಕೆಯ ಕೆಲವು ರಹಸ್ಯ ಮಾಹಿತಿಗಳು ಇದೇ ಕಂಪ್ಯೂಟರ್ ಆಪರೇಟರ್ ಗಳಿಂದ ಸೋರಿಕೆಯಾಗುತ್ತಿದ್ದವು.
ಸಾರ್ವಜನಿಕರು ಹಾಗೂ ಪಾಲಿಕೆ ಅಧಿಕಾರಿಗಳಿಗೂ ಸರಿಯಾಗಿ ಸ್ಪಂದಿಸದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆ ಕಾರಣದಿಂದಾಗಿ ಆಡಳಿತ ಹಿತದೃಷ್ಟಿಯಿಂದ ಈ 83 ಕಂಪ್ಯೂಟರ್ ಆಪರೇಟರ್ ಗಳನ್ನು ಪಾಲಿಕೆಯ ಬೇರೆ ಬೇರೆ ಕಚೇರಿಗಳಿಗೆ ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.