ಬೆಂಗಳೂರು, ಆ.14 www.bengaluruwire.com : ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸೆಪ್ಟೆಂಬರ್ 30ರ ಒಳಗಾಗಿ ಸೂಕ್ತ ಸಲಹೆ ಸೂಚನೆ ನೀಡಲು ಮೂಲಕ ಸಾರ್ವಜನಿಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು.
ಈಗಾಗಲೇ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಸಾರ್ವಜನಿಕರ ಸಹಕಾರ ಹಾಗೂ ಸಹಯೋಗದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದೆ. ಪ್ರಸ್ತುತ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಕಾಣಲಿ ಎನ್ನುವ ಆಶಯದೊಂದಿಗೆ ಸಿದ್ಧತೆಗಳನ್ನು ಆರಂಭಿಸಲಾಗುತ್ತಿದೆ. ಈ ಸಮ್ಮೇಳನದ ಸ್ವರೂಪ ಹೇಗಿರ ಬೇಕು, ಇದರಲ್ಲಿ ಎಷ್ಟು ಗೋಷ್ಠಿಗಳು ಇರಬೇಕು? ಯಾವ ಯಾವ ವಿಷಯದ ಬಗ್ಗೆ ಇರಬೇಕು?, ಯಾವ ಮಾದರಿ ಪುಸ್ತಕಗಳು ಪ್ರಕಟವಾಗಬೇಕು?, ಸನ್ಮಾನಿತರಾಗಲು ಅರ್ಹರಾದವರು ಯಾರು? ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ವರೂಪ ಹೇಗಿರಬೇಕು ಮೊದಲಾದ ವಿಷಯಗಳ ಕುರಿತು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತಾಗಿಸುವ ನಿಟ್ಟಿಲ್ಲಿ ಸಾರ್ವಜನಿಕರರು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಲಹೆ ನೀಡುವವರು, ತಮ್ಮ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ತಪ್ಪದೇ ತಿಳಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಕೂಡ ನಿಮ್ಮನ್ನು ಅಗತ್ಯ ಬಿದ್ದಾಗ ಸಂಪರ್ಕಿಸಲು ಅನುಕೂಲವಾಗುತ್ತದೆ. ಹೀಗೆ ಬಂದ ಎಲ್ಲಾ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದು ಕೊಳ್ಳಲಾಗುವುದು. ಇದು ಕನ್ನಡಿಗರೆಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬವಾಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪದ ಕುರಿತ ಸೂಕ್ತ ಸಲಹೆ ಸೂಚನೆಗಳನ್ನು ಸೆಪ್ಟಂಬರ್ 30 ರೊಳಗಾಗಿ ʻಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018ʼ ಇವರಿಗೆ ಕಳಿಸಲು ಕೋರಲಾಗಿದೆ.