ಬೆಂಗಳೂರು, ಆ.13 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ ಒಂದೆಡೆ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಇನ್ನೊಂದೆಡೆ ಎಂಜಿನಿಯರಿಂಗ್ ವಿಭಾಗ ಹಾಗೂ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 150 ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನವಾಗಿಲ್ಲ.
ಬಿಬಿಎಂಪಿ ಕೇಂದ್ರ ಕಚೇರಿ ಯೋಜನೆ, ರಸ್ತೆ ಮತ್ತು ಮೂಲಭೂತ ಸೌಕರ್ಯ, ವಲಯ ಕಚೇರಿ ಹಾಗೂ ವಾರ್ಡ್ ಮತ್ತಿತರ ಕಡೆ ಪ್ರಧಾನ ಎಂಜಿನಿಯರ್ ಕಚೇರಿಯಿಂದ 128 ಕಿರಿಯ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ 22 ಎಂಜಿನಿಯರ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಆದರೆ ಈ ಎಂಜಿನಿಯರ್ ಗಳಿಗೆ ಮೇ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ.
ಹೊರಗುತ್ತಿಗೆ ಎಂಜಿನಿಯರ್ ಗಳ ವೇತನ ಪಾವತಿಗೆ 6 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ ಆ ಅನುದಾನವನ್ನು ಹಳೆಯ ಬಾಕಿ ಪಾವತಿಗೆ ಬಳಸಿರುವ ಕಾರಣ ಆ ಹಣ ಕರ್ಚಾಗಿದೆ. ಹಾಗಾಗಿ ಏಪ್ರಿಲ್ ನಿಂದ ಹೊರಗುತ್ತಿಗೆ ಎಂಜಿನಿಯರ್ ಗಳನ್ನು ಪೂರೈಸುವ ಗುತ್ತಿಗೆ ಸಂಸ್ಥೆಗಳಿಗೆ ಹಣ ಪಾವತಿಯಾಗಿಲ್ಲ. ಎಂಜಿನಿಯರಿಂಗ್ ವಿಭಾಗದ ಹೊರಗುತ್ತಿಗೆ ಎಂಜಿನಿಯರ್ ಗಳ ವೇತನ ಪಾವತಿ ಪ್ರಸ್ತಾವನೆಯನ್ನು ಪ್ರಧಾನ ಎಂಜಿಯರಿಂಗ್ ಕಚೇರಿಯಿಂದ ಜು.25ರಂದು ಪಾಲಿಕೆ ಕೇಂದ್ರ ಕಚೇರಿ ಹಣಕಾಸು ವಿಭಾಗಕ್ಕೆ ಕಳುಹಿಸಲಾಗಿದೆ.
ಅನುದಾನ ಕೊರತೆಯಿಂದ ವೇತನ ಪಾವತಿಯಾಗಿಲ್ಲ ಎಂದು ಗುತ್ತಿಗೆ ಎಂಜಿನಿಯರ್ ಒಬ್ಬರು ಬೆಂಗಳೂರು ವೈರ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಘನತ್ಯಾಜ್ಯ ವಿಭಾಗದಡಿ ಗುತ್ತಿಗೆ ಆಧಾರದ ಎಂಜಿನಿಯರ್ ಗಳನ್ನು ಪೂರೈಸಿರುವ ಲಿಬ್ರಾ ಎಂಬ ಕಂಪನಿಗೆ ಬಿಬಿಎಂಪಿಯಿಂದ 23,27,260 ಬಿಲ್ ಮೊತ್ತ ಪಾವತಿಸಬೇಕಿದೆ. ಆದರೂ ಆ ಸಂಸ್ಥೆಯವರು ತಮ್ಮ ಕೈಯಿಂದ ಏಪ್ರಿಲ್ ವರೆಗೆ ವೇತನ ನೀಡಿದ್ದಾರೆ. ಆದರೆ ಮೇ ತಿಂಗಳಿನಿಂದ ಗುತ್ತಿಗೆ ಎಂಜಿನಿಯರ್ ಗಳಿಗೆ ಇನ್ನೂ ಸಂಬಳ ಪಾವತಿಸಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೊದಲು ಕಿಯೋನಿಕ್ಸ್ ನಿಂದ ಗುತ್ತಿಗೆ ಎಂಜಿನಿಯರ್ ಗಳನ್ನು ಪೂರೈಸುತ್ತಿತ್ತು. ಆ ಬಳಿಕ ಕೆಎಸ್ ಎಫ್9 ಸಂಸ್ಥೆಗೆ 2023ರ ಫೆಬ್ರವರಿಯಿಂದ ಒಂದು ವರ್ಷದ ತನಕ ಮಾನವ ಸಂಪನ್ಮೂಲ ಪೂರೈಸುವ ಗುತ್ತಿಗೆ ಪಡೆದಿದ್ದು, ಈ ಸಂಸ್ಥೆಯಿಂದ 128 ಜೆಇ, ಎಇಗಳು ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ಮಾರ್ಚ್ ಮತ್ತು ಏಪ್ರಿಲ್ ತಿಂಗಳ 63,92,962 ಬಿಲ್ ಮೊತ್ತ ಪಾವತಿಯಾಗಿಲ್ಲ. ಹೀಗಾಗಿ ಈ ಸಂಸ್ಥೆಯ ಮೂಲಕ ಕೆಲಸ ಮಾಡುತ್ತಿರುವ 128 ಎಂಜಿನಿಯರ್ ಗಳಿಗೂ ಮೇ ತಿಂಗಳಿನಿಂದ ವೇತನ ಪಾವತಿಯಾಗಲ್ಲ.
ಯಾರಿಗೂ ಬೇಡವಾದ ಹೊರಗುತ್ತಿಗೆ ಎಂಜಿನಿಯರ್ ಗಳು :
ಕೆಲವು ಹೊರಗುತ್ತಿಗೆ ಎಂಜಿನಿಯರ್ ಗಳನ್ನು ಖಾಯಂ ಎಂಜಿನಿಯರ್ ಗಳು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಒಬ್ಬ ಖಾಯಂ ಎಇ ಮಾಡದ ಕೆಲಸಗಳನ್ನು ಈ ಗುತ್ತಿಗೆ ಎಂಜಿನಿಯರ್ ಗಳ ಕೈಲಿ ಮಾಡಿಸಲಾಗುತ್ತಿದೆ. ಕೆಲವೊಮ್ಮೆ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಟಪಾಲ್ ಕೊಂಡೊಯ್ಯುವ, ಕ್ಸೆರಾಕ್ಸ್ ಹಾಕುವ, ಕೆಲವು ಹಿರಿಯ ಅಧಿಕಾರಿಗಳ ಖಾಸಗಿ ಕೆಲಸಗಳನ್ನು ಕೆಲಸದ ಅನಿವಾರ್ಯತೆಯಲ್ಲಿರುವ ಗುತ್ತಿಗೆ ಎಂಜಿನಿಯರ್ ಗಳ ಕೈಲಿ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳಿವೆ. ಪ್ರತಿಯೊಂದು ಸ್ಥಾನಕ್ಕೂ ಅದರದ್ದೇ ಆದ ಗೌರವವಿದೆ. ಆ ರೀತಿ ಘನತೆಯಿಂದ ಈ ಎಂಜಿನಿಯರ್ ಗಳನ್ನು ನಡೆಸಿಕೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಚಾರದಲ್ಲಿ ಸರ್ಕಾರದ ನಿರ್ಧಾರದಿಂದ ಕಾಂಟ್ರಾಕ್ಟರ್ ಗಳು ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ “ಬಾಕಿ” (ವೇತನ) ಸಾಲಿಗೆ ಗುತ್ತಿಗೆ ಎಂಜಿನಿಯರ್ ಗಳು ಸೇರ್ಪಡೆಗೊಂಡಿದ್ದಾರೆ.