ಬೆಂಗಳೂರು, ಆ.12 www.bengaluruwire.com : ದೇಶದಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ದತೆಗಳು ನಡೆಯುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಗೆ ಬಿಬಿಎಂಪಿ ಯೋಜನೆ ರೂಪಿಸಿದೆ. ಪಾಲಿಕೆಯಿಂದ 8 ವಲಯಗಳಲ್ಲಿ 15 ಲಕ್ಷ ರಾಷ್ಟ್ರಧ್ವಜ ಹಂಚಿಕೆ ಮಾಡಲಿದೆ.
‘ಹರ್ ಘರ್ ತಿರಂಗಾ‘ ಕಾರ್ಯಕ್ರಮದ ಅಂಗವಾಗಿ ರಾಜ್ಯಾದ್ಯಂತ ಎಲ್ಲಾ ನಾಗರೀಕರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಆ.13ರಿಂದ 15ರ ತನಕ ನಗರದ ವ್ಯಾಪ್ತಿಯಲ್ಲಿ ಒಟ್ಟು 15 ಲಕ್ಷ ಧ್ವಜ ಹಾರಿಸಲು ಪಾಲಿಕೆ ಯೋಜಿಸಿದ್ದು, ಈಗಾಗಲೇ 2 ಲಕ್ಷ ಧ್ವಜಗಳನ್ನು ತರಿಸಿರುವ ಪಾಲಿಕೆ ಮನೆ, ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದೆ.
ಪಾಲಿಕೆಯಿಂದಲೇ ಧ್ವಜ ಮಾರಾಟ :
ದೇವಸ್ಥಾನ, ಮಸೀದಿ, ಚರ್ಚ್, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲೆಡೆ ರಾಷ್ಟ್ರಧ್ವಜ ಹಾರಿಸುವುದು ಪಾಲಿಕೆಯ ಉದ್ದೇಶವಾಗಿದೆ. ಈ ಬಾರಿ ಪಾಲಿಕೆ ವತಿಯಿಂದ ಧ್ವಜ ಮಾರಾಟ ಮಾಡಲಾಗುತ್ತಿದೆ. ದೊಡ್ಡ ಗಾತ್ರದ ಧ್ವಜಕ್ಕೆ 25.50 ರೂಪಾಯಿ ದರ ನಿಗದಿ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆ ಕುರಿತು ಮಾತನಾಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದಲ್ಲಿ ಒಟ್ಟು 15 ಲಕ್ಷ ರಾಷ್ಟ್ರ ಧ್ವಜಗಳನ್ನು ಹಾರಿಸುವ ಉದ್ದೇಶವಿದೆ. ಈ ಬಾರಿ ಪಾಲಿಸ್ಟರ್ ಧ್ವಜಗಳ ಬಳಕೆಯೂ ಅನಿವಾರ್ಯಾಗಿದೆ. ಪ್ರತಿ ಮನೆ, ಮನೆಯಲ್ಲೂ ತಿರಂಗ ಧ್ವಜ ಹಾರಾಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ವಾರ್ಡ್ ಇಂಜಿನಿಯರ್ ಗಳು, ಎಆರ್ಒಗಳು ನಗರದ ಪ್ರತಿ ಪ್ರದೇಶಕ್ಕೂ ತೆರಳಿ ಧ್ವಜಾರೋಹಣದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಜನರು ಹೇಗೆ ಧ್ವಜ ಹಾರಿಸಬೇಕು ಎನ್ನುವ ಬಗ್ಗೆ ಕೂಡ ಶನಿವಾರದಿಂದ ಜಾಗೃತಿ ಮೂಡಿಸಲು ಪಾಲಿಕೆ ಅಧಿಕಾರಿಗಳ ತಂಡ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.