ಬೆಂಗಳೂರು, ಆ.11 www.bengaluruwire.com : ಬಿಬಿಎಂಪಿ ಕೇಂದ್ರ ಕಚೇರಿಯ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಜಿಮಿನ್ ರಾಸಾಯನಿಕವಿದ್ದ ಕ್ಯಾನ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಂಭತ್ತು ಮಂದಿ ಪಾಲಿಕೆ ಎಂಜಿನಿಯರ್ ಮತ್ತು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ.
ಸಂಜೆ 4.45ರ ಸಂದರ್ಭದಲ್ಲಿ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಕಾಮಗಾರಿ ಗುಣಮಟ್ಟ ಕುರಿತಂತೆ ಪ್ರಯೋಗ ನಡೆಯುತ್ತಿದ್ದಾಗ ಬೆಂಜಿಮಿನ್ ರಾಸಾಯನಿಕ ಸೋರಿಕೆಯಾಗಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ
ಈ ವಿಭಾಗದ ಚೀಫ್ ಎಂಜಿನಿಯರ್ ಶಿವಕುಮಾರ್, ಕಾರ್ಯಪಾಲಕ ಎಂಜಿನಿಯರ್ ವಿಜಯಮಾಲಾ , ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್, ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್, ಆಪರೇಟರ್ ಜ್ಯೋತಿ, ಗಣಕಯಂತ್ರ ನಿರ್ವಾಹಕ ಮನೋಜ್, ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್ ಹಾಗೂ ಪ್ರಥಮ ದರ್ಜೆ ಸಹಾಯಕ ಸಿರಾಜ್ ಅವರಿಗೆ ಅಗ್ನಿ ಆಕಸ್ಮಿಕದಿಂದ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಜಿಮಿನ್ ರಾಸಾಯನಿಕ ಸ್ಪೋಟದಿಂದ ಅಗ್ನಿ ಅನಾಹುತವಾಗಿದೆ. ಇಬ್ಬರು ಹೆಂಗಸರು, ಏಳು ಗಂಡಸರಿಗೆ ಸುಟ್ಟು ಗಾಯಗಳಾಗಿವೆ. ಒಂಭತ್ತು ಜನರು ಗುಣನಿಯಂತ್ರಣ ಪ್ರಯೋಗಾಲಯದಲ್ಲಿದ್ದರು. ಮುಖ್ಯ ಎಂಜಿನಿಯರ್ ಶಿವಕುಮಾರ್ ಕೈ ಸುಟ್ಟು ಹೋಗಿದೆ. ಉಳಿದ ಇಬ್ಬರು ಮಹಿಳೆಯರ ಮುಖ ಸುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಹತ್ತಿರದ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಸ್ವಲ್ಪ ದೊಡ್ಡ ಅಗ್ನಿ ಅನಾಹುತವಾಗಿದ್ದರೆ ಪಾಲಿಕೆ ಲಕ್ಷಾಂತರ ದಾಖಲೆ ಬೆಂಕಿಗೆ ಆಹುತಿಯಾಗುತ್ತಿತ್ತು :
ದುರ್ಘಟನಾ ಸ್ಥಳಕ್ಕೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬಂದು ಪರಿಶೀಲಿಸಿದರು. ಘಟನೆ ನಂತರ ಎರಡು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದರಾದರೂ ಅಷ್ಟೊತ್ತಿಗೆ ಬೆಂಕಿ ತಹಬಂದಿಗೆ ಬಂದಿತ್ತು. ಗುಣನಿಯಂತ್ರಣ ಕಟ್ಟಡದ ಪಕ್ಕದಲ್ಲೇ ರೆಕಾರ್ಡ್ ಸೆಕ್ಷನ್ ಇದ್ದು ಪುಣ್ಯಕ್ಕೆ ಅದಕ್ಕೆ ಬೆಂಕಿ ತಗುಲಲಿಲ್ಲ. ಹಾಗಾಗಿ ಬೆಂಕಿ ಹತ್ತಿದ್ದರೆ ಲಕ್ಷಾಂತರ ಪ್ರಮುಖ ದಾಖಲೆಗಳು ಬೆಂಕಿಗೆ ಆಹುತಿಯಾಗುತ್ತಿತ್ತು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಕಮಲ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ದುರ್ಘಟನೆ ಹೇಗಾಯ್ತು?:
ರಸ್ತೆಗೆ ಹಾಕಿದ ಡಾಂಬರ್ ಅನ್ನು ಗುಣಮಟ್ಟ ನಿಯಂತ್ರಣ ಪರೀಕ್ಷೆ ಮಾಡುವಾಗ ಕಲ್ಲಿಗೆ ಹಿಡಿದ ಬಿಟುಮಿನ್ ಬೇರ್ಪಡಿಸಲು ಬೆಂಜಿನ್ ದ್ರವ ಹಾಕಿದ್ದಾರೆ. ಆನಂತರ ಬಿಟುಮಿನ್ ನಿಂದ ಬೇರ್ಪಟ್ಟ ಕಲ್ಲನ್ನು ಬಿಸಿ ಮಾಡಲು ಕಡ್ಡಿ ಗೀರಿದಾಗ ಆಕಸ್ಮಾತ್ ಆಗಿ ಬೆಂಜಿನ್ ಕ್ಯಾನಿಗೂ ಬೆಂಕಿ ತಗುಲಿ ಅಗ್ನಿ ಅನಾಹುತವಾಯಿತೆಂದು ಗುಣನಿಯಂತ್ರಣ ವಿಭಾಗದಲ್ಲಿನ ಪಿವೊನ್ ಸುರೇಶ್ ಕುಮಾರ್ ಹೇಳಿದ್ದಾರೆ.
ಘಟನೆ ನಡೆದ ಬಳಿಕ ಒಳಗಿನಿಂದ ಚೀತ್ಕಾರ ಕೇಳಿ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿದ್ದ ಸಾರ್ವಜನಿಕರು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಮ್ಮ ಕಚೇರಿಗಳಲ್ಲಿದ್ದ ಬೆಂಕಿ ಆರಿಸುವ ಸಾಧನಗಳ ಮೂಲಕ ಆಗಮಿಸಿ ಅಗ್ನಿಯನ್ನು ನಂದಿಸಿದರು. ಅಗ್ನಿಶಾಮಕ ವಾಹನ ಬರುವ ವೇಳೆಗೆ ಸಂಪೂರ್ಣವಾಗಿ ಬೆಂಕಿ ನಂದಿ ಹೋಗಿತ್ತು.
ಅಗ್ನಿ ಅವಘಡದ ಕುರಿತು ಆಂತರಿಕ ತಾಂತ್ರಿಕ ವಿಚಾರಣೆ :
ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡದ ಕುರಿತು ಆಂತರಿಕ ತಾಂತ್ರಿಕ ವಿಚಾರಣೆಗೆ ಪಾಲಿಕೆ ಪ್ರಧಾನ ಎಂಜಿನಿಯರ್ ಬಿ.ಎಸ್.ಪ್ರಹಲ್ಲಾದಾ ಅವರನ್ನು ನೇಮಿಸಲಾಗಿದೆ. ತಾಂತ್ರಿಕ ವಿಚಾರಣೆ ವರದಿಯನ್ನು ಆ.31 ರಂದು ಅಥವಾ ಅದಕ್ಕಿಂತ ಮೊದಲು ಸಲ್ಲಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಆದೇಶಿಸಿರುತ್ತಾರೆ.