ಬೆಂಗಳೂರು, ಆ.10 www.bengaluruwire.com : ರಾಜ್ಯದ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಕಂದಾಯ ಇಲಾಖೆ “ಕಂದಾಯ ಆಯುಕ್ತಾಲಯ” ಎಂಬುದನ್ನು ರಚಿಸಿ ಆ.7ರಂದು ಅಧಿಸೂಚನೆ ಹೊರಡಿಸಿದೆ. ಜನರ ಮನೆ ಬಾಗಿಲಿಗೆ ಆಡಳಿತವನ್ನು ತಲುಪಿಸುವ ಸರ್ಕಾರ ಮಹತ್ವದ ನಿರ್ಣಯ ಎರಡು ವರ್ಷಗಳ ಬಳಿಕ ಸಾಕಾರಗೊಂಡಂತಾಗಿದೆ.
ಕಂದಾಯ ಕೆಲಸಗಳಿಗೆ ಜನರ ಅಲೆದಾಟವನ್ನು ತಪ್ಪಿಸಿ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಅವಶ್ಯವಿರುವ ಬೆಂಬಲ ಮತ್ತು ಕಂದಾಯ ಕಾರ್ಯಗಳ ಪರಿವೀಕ್ಷಣೆ ಮಾಡಲು ಒಟ್ಟಾರೆ ಕಂದಾಯ ಕಾಯ್ದೆಯ ಆಶಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕ ಆಯುಕ್ತಾಲಯ ಸ್ಥಾಪನೆಯಿಂದ ಅನಕೂಲವಾಗಲಿದೆ ಎಂಬುದನ್ನು ಮನಗಂಡು ಅದರಂತೆ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಿ ಸರ್ಕಾರ ಈ ಆದೇಶ ಹೊರಡಿಸಿದೆ.
ಆಯುಕ್ತಾಯಲದ ಜವಾಬ್ದಾರಿಗಳೇನು?:
ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸೇವಾ ವಿಷಯಗಳು, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಮತ್ತು ಸರ್ಕಾರದ ನಡುವೆ ಸಮನ್ವಯ, ವಿಪತ್ತು ನಿರ್ವಹಣೆ, ಭೂ ಸ್ವಾಧೀನ ಪ್ರಕ್ರಿಯೆಗಳು, ತರಬೇತಿ ನಿರ್ವಹಣೆ, ನ್ಯಾಯಾಲಯ ಪ್ರಕರಣಗಳ ಉಸ್ತುವಾರಿ, ವಿಧಾನಸಭೆ, ವಿಧಾನ ಪರಿಷತ್ ಪ್ರಶ್ನೆಗಳಿಗೆ ಮಾಹಿತಿ ಒದಗಿಸುವುದು, ಕಾರ್ಯದೊತ್ತಡ ಗುರುತಿಸುವಿಕೆಯ ಜವಾಬ್ದಾರಿಗಳನ್ನು ಆಯುಕ್ತಾಲಯಕ್ಕೆ ನೀಡಲಾಗಿದೆ.
ಯಾವೆಲ್ಲಾ ಕಚೇರಿಗಳು ಆಯುಕ್ತಾಲಯಕ್ಕೆ ವಿಲೀನ?:
ಅಟಿಲ್‌ಜಿ ಜನಸ್ನೇಹಿ ನಿರ್ದೇಶನಾಲಯ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಭೂಮಿ ಉಸ್ತುವಾರಿ ಕೋಶ, ಕಂದಾಯ ಗ್ರಾಮಗಳ ರಚನೆ ಕೋಶ, ಲೆಕ್ಕಪರಿಶೋಧನಾ ಶಾಖೆ, ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ಮನೆಬಾಡಿಗೆ ನಿಯಂತ್ರಕರ ಕಚೇರಿ, ಜಾರಿದಳ ಕಚೇರಿಗಳನ್ನು ಕಂದಾಯ ಆಯುಕ್ತಾಲಯಕ್ಕೆ ವಿಲೀನಗೊಳಿಸಲಾಗುತ್ತಿದೆ.
274 ಹುದ್ದೆಗಳ ವಿಲೀನ :
ರಾಜ್ಯ ಮಟ್ಟದಲ್ಲಿ ಈಗಾಗಲೇ ಕಂಡಾಯ ಆಯುಕ್ತಾಲಯವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸೇವೆಗಳು ನಿಗಧಿತ ಕಾಲಮಿತಿಯಲ್ಲಿ ಲಭ್ಯವಾಗಬೇಕೆಂದು ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಿ ಕಾರ್ಯಗತಗೊಳಿಸಲು ಕಂದಾಯ ಆಯುಕ್ತಾಲಯಕ್ಕೆ 17 ವಿಭಾಗಗಳಿಗೆ ಸಂಬಂಧಿಸಿದಂತೆ ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಿದೆ.
ಕಂದಾಯ ಇಲಾಖೆಯೊಳಗೆ ಹೊಸದಾಗಿ ಸ್ಥಾಪಿಸಲಾದ ಕಂದಾಯ ಆಯುಕ್ತಾಲಯದಲ್ಲಿ ಹೊಸ ಆಯುಕ್ತರ ಹುದ್ದೆಯನ್ನು ಸೃಷ್ಟಿಸಲಾಗಿದೆ. ಹೆಚ್ಚಿನ ಹುದ್ದೆಗಳನ್ನು ಕಂದಾಯ ಇಲಾಖೆಯ ಅಡಿಯಲ್ಲಿನ ವಿವಿಧ ವಿಭಾಗಗಳು ಹಾಗೂ ವಿಭಾಗಗಳ ಕಛೇರಿಯಿಂದ ತೆಗೆದುಕೊಳ್ಳಲಾಗಿದೆ. ಪ್ರೈಯಿಂಗ್ ಸ್ಕ್ವಾಡ್ (ಎನ್‌ಫೋರ್ಸ್ ಮೆಂಟ್ ವಿಂಗ್) ನೇರವಾಗಿ ಪ್ರಧಾನ ಕಾರ್ಯದರ್ಶಿಯ ನಿಯಂತ್ರಣದಲ್ಲಿರುತ್ತದೆ. ದಿನನಿತ್ಯದ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳನ್ನು, ಕಂದಾಯ ಆಯುಕ್ತರು ಮೇಲ್ವಿಚಾರಣೆ ಮಾಡುತ್ತಾರೆ.
ಐಎಎಸ್ ಆಯ್ಕೆ ಶ್ರೇಣಿ ದರ್ಜೆಯ ಅಧಿಕಾರಿಯನ್ನು ಆಯುಕ್ತರಾಗಲಿದ್ದಾರೆ :
ಆಯುಕ್ತಾಲಯದ ವಿನ್ಯಾಸ, ಕಾರ್ಯವೈಖರಿ, ಸಿಬ್ಬಂದಿ ರಚನೆ, ಕೇಂದ್ರ ಸ್ಥಳಕ್ಕಾಗಿ 2019–20ನೇ ಸಾಲಿನ ಬಜೆಟ್‌ನಲ್ಲೇ ₹ 5 ಕೋಟಿ ಮೀಸಲಿಡಲಾಗಿತ್ತು. ಮಾರ್ಚ್ 2020ರಲ್ಲೇ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಆದೇಶ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಮತ್ತೆ ಆದೇಶ ಹೊರಡಿಸಿದ್ದು, ಐಎಎಸ್ ಆಯ್ಕೆ ಶ್ರೇಣಿ ದರ್ಜೆಯ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸಲು ಅವಕಾಶ ನೀಡಲಾಗಿದೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ(ವಿಪತ್ತು ನಿರ್ವಹಣೆ, ಭೂಮಿ ಯುಪಿಒಆರ್) ಇವರ ವ್ಯಾಪ್ತಿಗೆ ಹಾಗೂ ಭೂಮಿ & ಯುಪಿಒಆರ್ (UPOR) ವಿಭಾಗವು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ವ್ಯಾಪ್ತಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.
ಕಾರ್ಯ ಹಂಚಿಕೆ, ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭಿಸಲು ಪ್ರತ್ಯೇಕ ಆದೇಶ ಹೊರಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.