ಬೆಂಗಳೂರು, ಆ.09 www.bengaluruwire.com : ಕ್ವಿಟ್ ಇಂಡಿಯಾ ಚಳುವಳಿ ವರ್ಷಾಚರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಮಹೋತ್ಸವದ ಪ್ರಯುಕ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಬೆಂಗಳೂರಿನಲ್ಲಿರುವ ಐವರು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ತೆರಳಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು.
ಅಲ್ಲದೆ ಅವರುಗಳಿಗೆ ಸಿಹಿ ನೀಡುವ ಮೂಲಕ ಗೌರವ ಸಲ್ಲಿಸಿದರು. ಬುಧವಾರ ಬೆಳಿಗ್ಗೆ ಮೊದಲಿಗೆ ಬಸವನಗುಡಿಯಲ್ಲಿರುವ ಶ್ರೀಸಾಯಿ ವೃದ್ಧಾಶ್ರಮದಲ್ಲಿ ವಾಸಿಸುತ್ತಿರುವ ಶಕುಂತಲ ಅವರನ್ನು ರಾಜ್ಯಪಾಲರು ಭೇಟಿ ಮಾಡಿ, ಸನ್ಮಾನಿಸಿ, ಪ್ರಮಾಣ ಪತ್ರ, ಸಿಹಿ ನೀಡಿ ನಮನ ಸಲ್ಲಿಸಿದರು. ನಂತರ ಯಲಚೇನಹಳ್ಳಿಯ ನಂಜಪ್ಪ ಲೇಔಟ್ ನಲ್ಲಿರುವ ಸ್ವಾತಂತ್ರ ಹೋರಾಟಗಾರರಾದ ಎಸ್.ವಿ.ಟಿ ಗುಪ್ತಾ, ಬನಶಂಕರಿ 3ನೇ ಹಂತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶಂಕರನಾರಾಯಣ ರಾವ್, ಮಲ್ಲೇಶ್ವಂರಂನಲ್ಲಿರುವ ನಾಗಭೂಷಣ್ ರಾವ್ ಹಾಗೂ ಭೂಪಸಂದ್ರದ ವಿನಾಯಕ ಲೌಔಟ್ ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಸಿ ನಾರಾಯಣಪ್ಪ ಅವರನ್ನು ಭೇಟಿ ಮಾಡಿ ಅವರನ್ನೆಲ್ಲಾ ಸನ್ಮಾನಿಸಿ, ಸಿಹಿ ತಿನಿಸಿದರು.
ಈ ವಿಶೇಷ ಕ್ಷಣಗಳಿಗೆ ಜಿಲ್ಲಾಧಿಕಾರಿ ದಯಾನಂದ್ ಸಾಕ್ಷಿಯಾದರು.






















