ಬೆಂಗಳೂರು, ಆ.09 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಅಪರೂಪದ ಪತಂಗವೊಂದು ಕಂಡು ಬಂದಿದೆ.
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಆರ್ ಆರ್ ನಗರದಲ್ಲಿ ಅಪರೂಪದ ಪ್ರಭೇದದ ಇಂಡಿಯನ್ ತಸರ್ ಸಿಲ್ಕ್ ಮೊತ್ (Indian Tasar silk Moth) ಪತಂಗವನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದಿರುವ ಈ ಪತಂಗವು ರಾತ್ರಿ ವೇಳೆ ಸಂಚರಿಸುವ ನಿಶಾಚರಿ ಜೀವಿಗಳ ವರ್ಗಕ್ಕೆ ಸೇರುತ್ತದೆ. ಆರ್ ಆರ್ ನಗರದಲ್ಲಿ ಕಂಡು ಬಂದಿರುವ ಈ ಪತಂಗದ ಮೇಲ್ಭಾಗ ನಾಲ್ಕು ಸೊನ್ನೆಗಳಂತಿರುವ ಚಿಹ್ನೆ ಪಾರದರ್ಶಕವಾಗಿದೆ. ಮೇಲ್ಕಡೆಯ ದೊಡ್ಡ ಸೊನ್ನೆಯಾಕಾರ ನವಿಲಿನ ಗರಿಯ ವಿನ್ಯಾಸದಲ್ಲಿದೆ. ಪತಂಗದ ಎರಡೂ ರೆಕ್ಕೆಗಳು ಬಲಿಷ್ಠವಾಗಿದ್ದು, ತೀವ್ರ ಗಾಢ ಹಳದಿ ಬಣ್ಣವನ್ನು ಹೊಂದಿದೆ.
ಈ ಪತಂಗವನ್ನು ಕಂಡ ಸ್ಥಳೀಯರು ಬಿಬಿಎಂಪಿ ಸಹಾಯವಾಣಿಗೆ ಸಂರಕ್ಷಣೆಗಾಗಿ ಕರೆ ಮಾಡಿದ್ದರು. ಆ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನಗರ ಜಿಲ್ಲೆ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್ ಅವರಿಗೂ ಈ ಪತಂಗ ಕಂಡು ಆಶ್ಚರ್ಯಪಟ್ಟರು. ಈ ಬಗ್ಗೆ ಬೆಂಗಳೂರು ವೈರ್ ಜೊತೆ ಮಾತನಾಡಿರುವ ಅವರು, ಈ ಪತಂಗ ಬಹಳ ಅಪರೂಪದ್ದಾಗಿದೆ. ಇಂತಹ ಪತಂಗಗಳು ರಾತ್ರಿ ನಿಶಾಚರಿ ಜೀವಿಗಳ ವರ್ಗಕ್ಕೆ ಸೇರಿದ್ದು, ಸಾಮಾನ್ಯವಾಗಿ ಕತ್ತಲೆ ಮತ್ತು ಅರಣ್ಯದ ಸುತ್ತಮುತ್ತ ಇರುವ ಆವಾಸ ಸ್ಥಳಗಳಲ್ಲಿ ಕಂಡು ಬರುತ್ತದೆ. ಆದರೆ ನಗರದ ಒಳಗೆ ಇಂತಹ ಪ್ರಭೇದ ಕಾಣಿಸಿಕೊಂಡಿರುವುದು ಬಹಳ ಅಪರೂಪ ಮತ್ತು ಈ ಪತಂಗವನ್ನು ರಕ್ಷಣೆ ಮಾಡಿ ತುರಹಳ್ಳಿ ಅರಣ್ಯದಲ್ಲಿ ಬಿಡಲಾಯಿತು ಎಂದು ಅವರು ಹೇಳಿದರು.
ಈ ಪತಂಗ ತನ್ನ ಸಂಗಾತಿಯನ್ನು ಹುಡುಕಲು ಸಾವಿರಾರು ಕಿ.ಮೀ ರಾತ್ರಿ ಹೊತ್ತು ಸಂಚರಿಸಿ ತನ್ನ ಸಂಗಾತಿಯನ್ನು ಸೇರುತ್ತದೆ. ರಾತ್ರಿ ವೇಳೆ ಮಾತ್ರ ಹೆಚ್ಚು ಚಟುವಟಿಕೆಯಿಂದ ಇರುವ ಈ ಪತಂಗ, ಬೆಳಗ್ಗೆ ಹೊತ್ತು ಮರದ ಪೊಟರೆ ಹತ್ತಿರ, ಗಿಡದ ಸಂದಿ, ಮರ ಗಿಡಗಳ ಎಲೆಗಳ ಕೆಳಗೆ, ಮರದ ದಿಮ್ಮಿ ಹಿಂಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಅವಿತು ಕುಳಿರುತ್ತದೆ. ಆರ್ ಆರ್ ನಗರದಲ್ಲಿ ಕಂಡು ಬಂದಿರುವ ಈ ಪತಂಗವು ಸುಮಾರು ಆರೂವರೆ ಇಂಚು ಅಗಲ ಹಾಗೂ ಮೂರವರೆ ಇಂಚು ಉದ್ದವಾಗಿತ್ತು ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.