ಬೆಂಗಳೂರು, ಆ.5 www.bengaluruwire.com : ರಾಜ್ಯದಲ್ಲಿ ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ ಮತ್ತು ನಿರಂತರವಾಗಿ ಬರುತ್ತಿರುವ ಮಳೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲವು ಜನರಲ್ಲಿ ಕಣ್ಣಿನ ಉರಿ (Conjunctivitis) ಸಮಸ್ಯೆ ಅಥವಾ ಮದ್ರಾಸ್ ಐ ಕಂಡುಬರುತ್ತಿದೆ.
ಜು.25ರಿಂದ ಆಗಸ್ಟ್ 4ರ ವರೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಕಣ್ಣಿನ ಹೊರರೋಗಿಗಳ ವಿಭಾಗದಲ್ಲಿ 1,22,935 ಮಂದಿ ಚಿಕಿತ್ಸೆ ಪಡೆದಿದ್ದು ಆ ಪೈಕಿ 40,477 ಮದ್ರಾಸ್ ಐ ಪ್ರಕರಣಗಳು ಕಂಡು ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೀತಿಯ ಕಣ್ಣಿನ ಉರಿ ಸಮಸ್ಯೆಯನ್ನು ಮದ್ರಾಸ್ ಐ ಅಥವಾ ಪಿಂಕ್ ಐ ಎಂದೂ ಕರೆಯುತ್ತಾರೆ.
ಸಂಬಂಧಪಟ್ಟ ವೈದ್ಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಬಂದ ಕಣ್ಣಿನ ಉರಿ ಊತದ ರೋಗಿಗಳಿಗೆ ವೈದ್ಯರು ನೋವು ನಿವಾರಕ ಮಾತ್ರ ಮತ್ತು ಕಣ್ಣಿನ ಡ್ರಾಪ್ಸ್ ಚಿಕಿತ್ಸೆ ನೀಡುವುದು. ಮೂಗಿನ ಮತ್ತು ಗಂಟಲಿನ ಸೋಂಕು ಇದ್ದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡುವುದು. ಶಸ್ತ್ರ ಚಿಕಿತ್ಸೆ ಒಳಪಟ್ಟಿರುವ ರೋಗಿಗಳು ಮತ್ತು ಕಣ್ಣಿನ ಉರಿ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವಂತೆ ಇಲಾಖೆಯು ಸರ್ಕಾರಿ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.
ಕಣ್ಣಿನ ಉರಿ ಊತ ಕಾಣಿಸುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ಮಾಹಿತಿ
ರೋಗದ ಲಕ್ಷಣಗಳು:-
- ಕಣ್ಣಿನ ಬಿಳಿ ಭಾಗವು ಕೆಂಪಾಗುತ್ತದೆ.
- ಕಣ್ಣುಗಳಲ್ಲಿ ಉರಿ ಮತ್ತು ನೋವು ಇರುತ್ತದೆ.
- ಕಣ್ಣುಗಳಿಂದ ನಿರಂತರವಾಗಿ ನೀರು ಹೊರಬರುತ್ತಿರುತ್ತದೆ.
- ಕಣ್ಣುಗಳು ಊದಿಕೊಳ್ಳುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು :
- ಹೆಚ್ಚಿನ ಜನ ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು.
- ಪದೇ ಪದೇ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು.
- ಸೋಪ್ ನಲ್ಲಿ ಆಗಾಗ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು.
- ಕಣ್ಣಿನ ಉರಿ ಊತ ಬಂದ ವ್ಯಕ್ತಿ ಬೇರೆಯವರ ಜೊತೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸಬೇಕು.
- ಅವರು ಉಪಯೋಗಿಸಿದ ಟವೆಲ್, ತಲೆ ದಿಂಬನ್ನು ಇತರರು ಉಪಯೋಗಿಸದಂತೆ ನೋಡಿಕೊಳ್ಳಬೇಕು.
ರಾಜ್ಯದಿಂದ ಕಾಶಿಯಾತ್ರೆಗೆ ಹೋದವರಿಗೂ ಮದ್ರಾಸ್ ಐ :
“ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ” ಯಾತ್ರೆಗೆ ಜು.29ರಂದು ಯಶವಂತಪುರದಿಂದ ಕಾಶಿ, ಪ್ರಯಾಗ ಹಾಗೂ ಅಯೋಧ್ಯೆಗೆ ವಿಶೇಷ ಹವಾನಿಯಂತ್ರಿತ ಬೋಗಿಗಳಲ್ಲಿ 450 ಯಾತ್ರಿಕರು ತೆರಳಿದ್ದರು. ಉತ್ತರ ಭಾರತದ ಕಾಶಿ, ಪ್ರಯಾಗ ಹಾಗೂ ಅಯೋಧ್ಯೆಯಲ್ಲಿ ಮಳೆ ಕಡಿಮೆ ಹಾಗೂ ಉಷ್ಣಾಂಶ 40ಡಿಗ್ರಿಗೂ ಹೆಚ್ಚಿದ್ದು, ಹವಾಮಾನ ವೈಪರಿತ್ಯ ಮತ್ತಿತರ ಕಾರಣಕ್ಕೆ 450 ಯಾತ್ರಿಕರ ಪೈಕಿ 80-90 ಪ್ರಯಾಣಿಕರಿಗೆ ಮದ್ರಾಸ್-ಐ ಕಂಡು ಬಂದಿದೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿವೆ.
“ಮೂಗಿಗೆ ಸೋಂಕಾದರೆ ಶೀತ, ನೆಗಡಿಯಾಗುತ್ತೆ. ಅದೇ ರೀತಿ ಕಣ್ಣಿಗೆ ಸೋಂಕಾದರೆ ಕೆಣ್ಣು ಕೆಂಪಾಗುತ್ತದೆ. ಎಡನೋ ವೈರಸ್ ಅನ್ನೋ ಸೋಂಕಿನಿಂದ ಕಳೆದ ಎರಡು ಮೂರು ವಾರದಿಂದ ಕಣ್ಣಿನ ಬೇನೆ ಸಮಸ್ಯೆ ಹೆಚ್ಚಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮದ್ರಾಸ್ ಐ ಕಂಡು ಬರುತ್ತದೆ. ಕಳೆದ ಹತ್ತು ವರ್ಷದಲ್ಲಿ ಇದೇ ಪ್ರಥಮವಾಗಿ ಇಷ್ಟು ಪ್ರಮಾಣದಲ್ಲಿ ಕಣ್ಣಿನ ಸೋಂಕು ಹೆಚ್ಚಾಗಿರುವುದನ್ನು ಕಂಡಿದ್ದೇನೆ. ಈ ಸೋಂಕು ಒಂದು ವಾರದ ತನಕ ಇರುತ್ತೆ. ಈ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಇತ್ತೀಚೆಗೆ ಪ್ರತಿದಿನ 100 ಹೊರರೋಗಿಗಳಲ್ಲಿ ಶೇ.25 ರಷ್ಟು ಇಂತಹ ಪ್ರಕರಣಗಳೇ ಕಂಡುರುತ್ತಿದೆ.”
–
-ಡಾ.ವೈ.ಎಚ್.ಅಜಯ್, ಕಣ್ಣಿನ ತಜ್ಞ ವೈದ್ಯರು, ದೃಷ್ಟಿ ನೇತ್ರಾಲಯ, ಬೆಂಗಳೂರು